ನಾನು ಧರ್ಮದ ಹೆಸರು ಬರೆಸಲ್ಲ: ರಾಯರಡ್ಡಿ

KannadaprabhaNewsNetwork |  
Published : Sep 18, 2025, 01:10 AM IST
6445665 | Kannada Prabha

ಸಾರಾಂಶ

ಸಮೀಕ್ಷೆಯಲ್ಲಿ ಯಾರು ಏನೇ ಬರೆಸಿದರೂ ಅದು ಸಿಗುವುದಿಲ್ಲ. ಅದನ್ನು ನಂತರ ಪರಿಶೀಲಿಸಿಯೇ ಕೊಡುತ್ತಾರೆ. ಈ ಸಮೀಕ್ಷೆ ಮಾಡುತ್ತಿರುವುದು ಕೇವಲ ಮಾಹಿತಿಗಾಗಿ ಎಂದು ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.

ಕೊಪ್ಪಳ:

ರಾಜ್ಯ ಹಿಂದುಳಿದ ಆಯೋಗದಿಂದ ಸೆ. 22ರಿಂದ ನಡೆಯುವ ಸಮೀಕ್ಷೆ ವೇಳೆ ನಾನು ಯಾವುದೇ ಧರ್ಮದ ಹೆಸರು ಬರೆಸುವುದಿಲ್ಲ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಶರಣ ತತ್ವ ಅನುಸರಿಸುತ್ತೇನೆ ಎಂದರು. ವೀರಶೈವ ಲಿಂಗಾಯತ ಮಹಸಭಾದ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಅವರು ಧರ್ಮದ ಕಾಲಂನಲ್ಲಿ ಇತರರು ಎಂದು ಬರೆಸುವಂತೆ ಹೇಳಿದ ಮೇಲೆ ಮುಗಿಯಿತಲ್ಲ. ಹೀಗಾಗಿ ನಾನು ಯಾವುದೇ ಧರ್ಮದ ಹೆಸರು ಬರೆಸುವುದಿಲ್ಲ ಎಂದರು.

ಜಾತಿ ಕಾಲಂನಲ್ಲಿ ಏನು ಬರೆಸುತ್ತೀರಿ ಎಂಬ ಪ್ರಶ್ನೆಗೆ, ನಾನು ಬಸವಣ್ಣನವರ ಲಿಂಗಾಯತ ತತ್ವ ಅನುಸರಿಸುತ್ತೇನೆ. ಲಿಂಗಾಯತ ಎನ್ನುವುದು ಜಾತಿಯೂ ಅಲ್ಲ, ಧರ್ಮವೂ ಅಲ್ಲ, ಅದೊಂದು ಶರಣ ಚಳವಳಿ ಎಂದ ಅವರು, ಹಿಂದೂ ಕೂಡಾ ಸಂಸ್ಕೃತಿ ಎಂದರು.

ಸಮೀಕ್ಷೆಯಲ್ಲಿ ಯಾರು ಏನೇ ಬರೆಸಿದರೂ ಅದು ಸಿಗುವುದಿಲ್ಲ. ಅದನ್ನು ನಂತರ ಪರಿಶೀಲಿಸಿಯೇ ಕೊಡುತ್ತಾರೆ. ಈ ಸಮೀಕ್ಷೆ ಮಾಡುತ್ತಿರುವುದು ಕೇವಲ ಮಾಹಿತಿಗಾಗಿ. ಸಾಮಾಜಿಕ, ಶೈಕ್ಷಣಿಕವಾಗಿ ಎಷ್ಟು ಜನ ಓದಿದ್ದಾರೆ, ಓದಿಲ್ಲ, ಅವರ ಸ್ಥಿತಿಗತಿ ಏನು ಎನ್ನುವುದನ್ನು ಅಧ್ಯಯನ ಮಾಡಲಾಗುತ್ತದೆ ಅಷ್ಟೇ ಎಂದರು.

ಒಂದು ಬಾರಿ ಮತಾಂತರವಾದ ಮೇಲೆ ಅವರು ಮತಾಂತರಗೊಂಡ ಧರ್ಮದಲ್ಲಿಯೇ ಇರಬೇಕು. ಅವರು ಮತ್ತೆ ಮೊದಲಿನ ಧರ್ಮದಲ್ಲಿರಲು ಬರುವುದಿಲ್ಲ ಎಂದರು.

ಜಿಲ್ಲೆಯಲ್ಲಿ ಸ್ಥಾಪಿಸುತ್ತಿರುವ ವಿಂಡ್ ಮತ್ತು ಸೋಲಾರ್ ಪವರ್‌ನವರು ನನ್ನ ಪರವಾನಗಿ ಕೇಳಿಲ್ಲ ಹಾಗೂ ಅದು ನನ್ನ ವ್ಯಾಪ್ತಿಗೆ ಬರುವುದಿಲ್ಲ. ಕೇಂದ್ರ ಸರ್ಕಾರ ಸ್ಥಾಪಿಸದಲು ಆದೇಶ ನೀಡಿದೆ. ಹೀಗಾಗಿ ನಿಮಗೆ ಬೇಡ ಎಂದರೆ ನೀವು ಭೂಮಿಯನ್ನು ಕೊಡಬೇಡಿ ಎಂದು ಹೇಳಿದರು.

ರಾಜ್ಯದಲ್ಲಿ ಕ್ರಿಶ್ಚಿಯಾನಿಟಿ ತರುವ ಹುನ್ನಾರ: ಜನಾರ್ದನ ರೆಡ್ಡಿಇಟಲಿಯ ಪೋಪ್‌ರಂತೆ ಕ್ರಿಶ್ಚಿಯಾನಿಟಿ ಬೆಳೆಸುವ ಹುನ್ನಾರ ಸಮೀಕ್ಷೆಯಲ್ಲಿ ಅಡಗಿದ್ದು, ಈ ಮೂಲಕ ಹಿಂದು ಧರ್ಮ ನಾಶ ಮಾಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಇದರಲ್ಲಿಯೇ ಸರ್ಕಾರ ಮುಳುಗಿ ಹೋಗಲಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತ ಕ್ರಿಶ್ಚಿಯನ್, ರೆಡ್ಡಿ ಕ್ರಿಶ್ಚಿಯನ್, ಪಂಚಮಸಾಲಿ ಕ್ರಿಶ್ಚಿಯನ್ ಎನ್ನುವ ಕಾಲಂ ನೀಡುವ ಮೂಲಕು ಎಲ್ಲ ಜಾತಿಗಳಲ್ಲಿಯೂ ಕ್ರಿಶ್ಚಿಯಾನಿಟಿ ತರಲು ಯತ್ನ ನಡೆಸಿದ್ದು, ಇದು ಅವರಿಗೆ ಮುಳುವಾಗಲಿದೆ ಎಂದರು.ಹಿಂದೂ ಧರ್ಮದವರನ್ನು ಮತಾಂತರ ಮಾಡಲು ಯತ್ನಿಸಿದ್ದಾರೆ. ದೇಶದಲ್ಲಿ ಸಾವಿರಾರು ವರ್ಷಗಳ ಕಾಲ ಬೇರೆ ಬೇರೆ ಧರ್ಮದವರು ಆಳ್ವಿಕೆ ನಡೆಸಿದರೂ ಹಿಂದೂ ಧರ್ಮವನ್ನು ಏನು ಮಾಡಲು ಆಗಿಲ್ಲ. ಇವರಿಂದಲೂ ಆಗಲು ಸಾಧ್ಯವಿಲ್ಲವೆಂದು ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು.ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವ ಮೂಲಕ ಎರಡು ಸಮೂದಾಯಗಳ ನಡುವೆ ಭಿನ್ನಾಭಿಪ್ರಾಯ ತರಲು ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿದರು.ಅನ್ನಭಾಗ್ಯ ಅಕ್ಕಿಯಲ್ಲಿ ಭಾರಿ ಗೋಲ್‌ಮಾಲ್‌ ನಡೆದಿದ್ದು ಬಡವರಿಗೆ ಹಂಚುವ ಅಕ್ಕಿಯನ್ನು ಪಾಲಿಶ್‌ ಮಾಡಿ, ದೊಡ್ಡ ಲಾಭ ಮಾಡಿಕೊಳ್ಳುವ ಗ್ಯಾಂಗ್‌ಗಳು ಸೃಷ್ಟಿಯಾಗಿವೆ. ಪ್ರಧಾನಿ ನರೇಂದ್ರ ಮೋದಿ ಅವರು ನೀಡುವ ಐದು ಕೆಜಿ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತದೆ. ಗಂಗಾವತಿಯಲ್ಲಿ ನಡೆದ ಅನ್ನಭಾಗ್ಯ ಅಕ್ರಮದ ಕುರಿತು ಎಫ್‌ಐಆರ್‌ ಆಗಿದ್ದರೂ ಯಾವುದೇ ಕ್ರಮವಾಗಿಲ್ಲ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ
ಹಸೆಮಣೆ ಏರಬೇಕಿದ್ದ ಬಾಲ್ಯದ ಗೆಳತಿಯರು ಬೆಂಕಿಯಲ್ಲಿ ಭಸ್ಮ!