ಹುಬ್ಬಳ್ಳಿ: ಇಲ್ಲಿನ ಶ್ರೀ ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣದಲ್ಲಿ ಬುಧವಾರ ಸ್ವಚ್ಛತಾ ಹೀ ಸೇವಾ- 2025 ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಚಾಲನೆ ನೀಡಿದರು. ರೈಲ್ವೆ ನಿಲ್ದಾಣದಲ್ಲಿ ತಾವೇ ಪೊರಕೆ ಹಿಡಿದು ಕಸಗುಡಿಸುವ ಮೂಲಕ ಸ್ವಚ್ಛತಾ ಹೀ ಸೇವಾ ಕಾರ್ಯಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಸ್ವಚ್ಛತೆ ಕಾಪಾಡುವುದು ಎಲ್ಲರ ಕರ್ತವ್ಯ. ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಂಡರೆ ಶುದ್ಧ ವಾತಾವರಣ, ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದರು. ಇದೇ ವೇಳೆ ಸ್ವಚ್ಛತೆ ಕುರಿತು ಜಾಗೃತಿ ಪ್ರತಿಜ್ಞೆಯನ್ನು ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸಚಿವರು ಬೋಧಿಸಿದರು.ನಂತರ ರೈಲ್ವೆ ನಿಲ್ದಾಣದ ಪ್ರಾಂಗಣದಲ್ಲಿ ಸಸಿ ನೆಡಲಾಯಿತು. ನಿಲ್ದಾಣದ ವ್ಯಾಪ್ತಿಯಲ್ಲೂ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಗಿದ್ದು, ರೈಲ್ವೆ ಸಿಬ್ಬಂದಿ ಮತ್ತು ಸ್ಥಳೀಯ ಅಧಿಕಾರಿಗಳು ಒಗ್ಗೂಡಿ ಸ್ವಚ್ಛತೆ ಮತ್ತು ಹಸಿರು ಪರಿಸರವನ್ನು ಕಾಯ್ದುಕೊಳ್ಳುವ ಪ್ರಯತ್ನದಲ್ಲಿ ತೊಡಗಿದರು. ಸಚಿವರ ಸ್ವಚ್ಛತಾ ಕಾರ್ಯಕ್ಕೆ ಶಾಸಕ ಮಹೇಶ್ ಟೆಂಗಿನಕಾಯಿ ಸಾಥ್ ನೀಡಿದರು. ಮಹಾಪ್ರಬಂಧಕ ಮುಕುಲ್ ಸರನ್ ಮಥೂರು, ಡಿಆರ್‌ಎಂ ಹುಬ್ಬಳ್ಳಿ ಬೆಲಾ ಮೀನಾ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಸ್ವಸ್ಥ ನಾರಿ ಅಭಿಯಾನ: ನಂತರ ಸ್ವಸ್ಥ ನಾರಿ ಶಕ್ತಿ ಕುಟುಂಬ ಅಭಿಯಾನಕ್ಕೆ ಹುಬ್ಬಳ್ಳಿಯ ಅಧಿಕಾರಿಗಳ ಕ್ಲಬ್‌ನಲ್ಲಿ ಚಾಲನೆ ನೀಡಲಾಯಿತು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾರ್ಗದರ್ಶನದಡಿಯಲ್ಲಿ ಅಭಿಯಾನವನ್ನು ನಡೆಸಲಾಯಿತು. ಮಹಿಳೆಯರ ಆರೋಗ್ಯ ಮತ್ತು ಮಕ್ಕಳ ಸುಸ್ಥಿತಿಯ ಕುರಿತು ಜಾಗೃತಿ ಮೂಡಿಸಲಾಯಿತು. ಸೆಂಟ್ರಲ್ ಆಸ್ಪತ್ರೆ ಹುಬ್ಬಳ್ಳಿ, ಎಚ್‌ಸಿಜಿ ಕ್ಯಾನ್ಸರ್ ಸೆಂಟರ್ ಹಾಗೂ ರಾಷ್ಟ್ರೋತ್ತಾನ ರಕ್ತ ಕೇಂದ್ರದ ಸಹಯೋಗದೊಂದಿಗೆ ವೈದ್ಯಕೀಯ ಶಿಬಿರವೂ ಇದೇ ವೇಳೆ ನಡೆಯಿತು.ಮಧುಮೇಹ, ರಕ್ತದೊತ್ತಡದ ಪರೀಕ್ಷೆ, ಬಾಯಿ, ಸ್ತನ ಹಾಗೂ ಗರ್ಭಾಶಯದ ಕ್ಯಾನ್ಸರ್ ಪರೀಕ್ಷೆ, ಕಣ್ಣಿನ ಪರೀಕ್ಷೆ, ಮಾನಸಿಕ ಆರೋಗ್ಯ ಸಮಾಲೋಚನೆ ಮತ್ತು ರಕ್ತದಾನ ಶಿಬಿರ ಸೇರಿದಂತೆ ವಿವಿಧ ಸೇವೆಗಳನ್ನು ನೀಡಲಾಯಿತು. ಹಲವಾರು ಉದ್ಯೋಗಿಗಳು ಹಾಗೂ ಅವರ ಕುಟುಂಬದವರು ಭಾಗವಹಿಸಿ ಈ ಸೇವೆಗಳ ಲಾಭ ಪಡೆದರು.