ಗದಗ: ಹಿರಿಯ ನಾಗರಿಕ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅಧಿಕಾರಿಗಳು ಪುಣ್ಯವಂತರು. ಹಿರಿಯರು ದೇವರ ಸ್ವರೂಪಿಗಳಾಗಿದ್ದಾರೆ. ಅವರು ಬದುಕಿನಲ್ಲಿ ಸವಾಲನ್ನು ಯಶಸ್ವಿಯಾಗಿ ಸಾಗಿಸಿದ್ದಾರೆ. ಅವರನ್ನು ದೇವರ ಸಮಾನವಾಗಿ ನೋಡಿಕೊಂಡರೇ ಪುಣ್ಯ ಪ್ರಾಪ್ತಿ ಆಗುತ್ತದೆ. ವಯೋವೃದ್ಧರಿಗೆ, ಅಂಗವೀಕಲರಿಗೆ ಸಹಾಯ ಮಾಡಿ ಸಶಕ್ತ ಭಾರತವನ್ನಾಗಿ ಮಾಡೋಣ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಬುಧವಾರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಭಾರತ ಸರ್ಕಾರದಿಂದ ರಾಷ್ಟ್ರೀಯ ವಯೋಶ್ರೀ ಯೋಜನೆ ಅಡಿಯಲ್ಲಿ ನಮ್ಮ ಹಿರಿಯ ನಾಗರಿಕರಿಗೆ ಅಗತ್ಯವಾದ ನೆರವಿನ ಸಾಧನ ಹಾಗೂ ಸಹಾಯಕ ಉಪಕರಣ ಫಲಾನುಭವಿಗಳಿಗೆ ಸಾಂಕೇತಿಕವಾಗಿ ವಿತರಿಸಿ ಮಾತನಾಡಿದರು.ಒಂದೇ ವೇದಿಕೆಯಲ್ಲಿ ನೂರಾರು ಹಿರಿಯರನ್ನು ನೋಡಿ ಸಂತೋಷವಾಗುತ್ತಿದೆ. ಇನ್ನೊಂದು ಕಡೆ ಹಿರಿತನದಲ್ಲಿ ಎದುರಿಸುತ್ತಿರುವ ಕಷ್ಟ ನೋಡಿ ದುಃಖವಾಗುತ್ತಿದೆ. ಹುಟ್ಟು ಆಕಸ್ಮಿಕ, ಸಾವು ಕೂಡ ಆಕಸ್ಮಿಕವಾಗಿದೆ. ಬದುಕು ಮಾತ್ರ ನಮ್ಮ ಕೈಯಲ್ಲಿದೆ. ಬದುಕಿನಲ್ಲಿ ಅರ್ಥಪೂರ್ಣವಾಗಿ ಜೀವನ ಸಾಗಿಸಬೇಕು. ಬಡತನವಿರಲಿ, ಸಿರಿತನವಿರಲಿ ಪ್ರತಿಯೊಬ್ಬ ಮನುಷ್ಯನ ಬದುಕು ಸಾರ್ಥಕತೆಯಿಂದ ಕೂಡಿರಬೇಕು.ಇದರಿಂದ ಮನುಷ್ಯ ಶ್ರೇಷ್ಠನಾಗುತ್ತಾನೆ ಎಂದರು.
ಮನುಷ್ಯ ಹುಟ್ಟಿದಾಗ ತಂದೆ-ತಾಯಿ, ಬಂಧು-ಬಳಗದ ಆಶ್ರಯವಿಲ್ಲದೇ ಬೆಳೆಯಲು ಸಾಧ್ಯವಿಲ್ಲ. ಎಲ್ಲ ಸಂಬಂಧಗಳಿಗಿಂತ ತಾಯಿ ಸಂಬಂಧ ಶ್ರೇಷ್ಠವಾಗಿದೆ. ತಾಯಿ ಗರ್ಭದಿಂದ ಭೂ ತಾಯಿ ಗರ್ಭದವರೆಗೆ ನಮ್ಮ ಸಂಬಂಧ ಇರುತ್ತದೆ. ಇದರ ನಡುವೆ ಒಬ್ಬರನ್ನೊಬ್ಬರನ್ನು ಪ್ರೀತಿಸುವ ಬದುಕನ್ನು ಕಟ್ಟಿಕೊಳ್ಳಬೇಕು. ವಯ್ಯಸ್ಸಾದಂತೆ ಮಗುವಿನ ಗುಣ ಹಿರಿಯರಲ್ಲಿ ಬರುತ್ತವೆ. ಹಿರಿಯರು ಆತ್ಮ ಶಕ್ತಿ ಗಟ್ಟಿಗೋಳಿಸಿಕೊಳ್ಳಬೇಕು. ಹಿರಿಯರು ಸಂತೋಷ, ಸಮಾಧಾನದಿಂದ ಇರಬೇಕು ಎಂದರು.ಕೇಂದ್ರ ಸರ್ಕಾರ ಹಿರಿಯರ ಉರುಗೋಲಾಗಿ ನಿಂತಿದೆ. ನಾನು ಸಿಎಂ ಆಗಿದ್ದಾಗ ಹಿರಿಯ ನಾಗರಿಕರ ಸಂದ್ಯಾ ಸುರಕ್ಷಾ, ಅಂಗವೀಕಲರ ಪೆನ್ಷನ್ ಹಣ ಹೆಚ್ಚು ಮಾಡಿದೆ. ಕ್ಯಾನ್ಸರ್ ನ ಕಿಮೋಥೆರಪಿ ಹಣ ₹30 ಸಾವಿರದಿಂದ ₹60 ಸಾವಿರಕ್ಕೆ, ಕಿಡ್ನಿ ಡಯಾಲಸಿಸ್ ₹30 ಸಾವಿರದಿಂದ ₹60 ಸಾವಿರಕ್ಕೆ ಹೆಚ್ಚಳ ಮಾಡಿದ ತೃಪ್ತಿ ಇದೆ. ಪೌರ ಕಾರ್ಮಿಕರನ್ನು ಕಾಯಂಗೊಳಿಸಿದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ದುರಗೇಶ.ಕೆ.ಆರ್ ಮಾತನಾಡಿ, ಕೇಂದ್ರ ಸರ್ಕಾರ ಹಿರಿಯ ನಾಗರಿಕರಿಗಾಗಿ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದೆ. ಜಿಲ್ಲೆಯ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೋಳ್ಳಬೇಕು ಎಂದರು.ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, 660 ಕ್ಕೂ ಹೆಚ್ಚು ಫಲಾನುಭವಿಗಳಿಗೆ ₹64 ಲಕ್ಷ ವೆಚ್ಚದಲ್ಲಿ ಕೇಂದ್ರ ಸರ್ಕಾರ ಸಲಕರಣೆ ನೀಡುತ್ತಿರುವುದು ಸಂತಸದ ವಿಷಯವಾಗಿದೆ. ಇಂದೊಂದು ಉತ್ತಮ ಕಾರ್ಯಕ್ರಮವಾಗಿದೆ. ಗದಗ ಜಿಲ್ಲೆಯಲ್ಲಿನ ಯಾವುದೇ ಫಲಾನುಭವಿಗಳು ಸರ್ಕಾರದ ಸೌಲಭ್ಯದಿಂದ ವಂಚಿತವಾಗಬಾರದು ಎಂದರು.
ಶಾಸಕ ಡಾ.ಚಂದ್ರು ಕೆ.ಲಮಾಣಿ ಮಾತನಾಡಿ, ಮೂರು ತಿಂಗಳ ಹಿಂದೆ ಜಿಲ್ಲೆಯ ಪ್ರತಿಯೊಂದು ತಾಲೂಕಾಸ್ಪತ್ರೆಯಲ್ಲಿ 60 ವರ್ಷ ಮೆಲ್ಪಟ್ಟ ಎಲ್ಲರನ್ನು ಗುರುತಿಸಿ 663 ಸಲಕರಣೆ ವಿತರಿಸಲಾಗುತ್ತಿದೆ. 60 ವರ್ಷ ಆದ ನಂತರ ವಯೋ ಸಹಜ ಕಾಯಿಲೆ ಬರುತ್ತವೆ. ಹಿರಿಯರು ಆರೋಗ್ಯದ ಕಡೆ ಹೆಚ್ಚು ಒತ್ತು ನೀಡಬೇಕು. 50 ವರ್ಷದ ನಂತರ ಬಿಪಿ, ಶುಗರ್, ಕ್ಯಾನ್ಸರ್ ಬರುವುದು ಇಂದಿನ ದಿನಮಾನಗಳಲ್ಲಿ ಸಹಜವಾಗಿದೆ. ಹಿರಿಯರು ನಡೆಯುವಾಗ ಎಚ್ಚರಿಕೆ ವಹಿಸಬೇಕು. ಒಮ್ಮೆ ಬಿದ್ದರೇ ಮೊದಲಿನ ತರ ನಡೆಯಲು ಸಾಧ್ಯವಾಗದಿರಬಹುದು ಎಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಾಬರ್ಚಿ, ತಹಸೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಪದ್ಮಾವತಿ.ಜಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಕೆ. ಮಹಾಂತೇಶ ಸೇರಿದಂತೆ ಮುಂತಾದವರು ಇದ್ದರು.