ಕುರುಬ, ಉಪ್ಪಾರ ಸಮಾಜವನ್ನು ಎಸ್ಟಿಯಲ್ಲಿ ಸೇರ್ಪಡೆಗೆ ವಿರೋಧ

KannadaprabhaNewsNetwork |  
Published : Sep 18, 2025, 01:10 AM IST

ಸಾರಾಂಶ

ಕುರುಬ ಹಾಗೂ ಉಪ್ಪಾರ ಸಮಾಜವನ್ನು ಎಸ್ಟಿಯಲ್ಲಿ ಸೇರ್ಪಡೆ ಮಾಡುವ ಹುನ್ನಾರವನ್ನು ಕೈ ಬಿಡಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಉಗ್ರವಾದ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ.

ಹುಬ್ಬಳ್ಳಿ: ಕುರುಬ ಮತ್ತು ಉಪ್ಪಾರ ಸಮಾಜವನ್ನು ಎಸ್‌ಟಿ ಸಮುದಾಯಕ್ಕೆ ಸೇರಿಸುವ ಹುನ್ನಾರ ನಡೆಸಿ, ವಾಲ್ಮೀಕಿ ಸಮಾಜಕ್ಕೆ ಅನ್ಯಾಯ ಮಾಡುವ ಷಡ್ಯಂತ್ರ ನಡೆಸಿದ್ದಾರೆ. ಕೂಡಲೇ ಅದನ್ನು ಕೈಬಿಡಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಧಾರವಾಡ ಜಿಲ್ಲಾ ಯುವ ಘಟಕದ ವತಿಯಿಂದ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.

ಇಲ್ಲಿನ ತಹಸೀಲ್ದಾರ್ ಕಚೇರಿ ಬಳಿ ಪ್ರತಿಭಟನೆ ನಡೆಸಿದ ಮುಖಂಡರು, ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ‌ ಮನವಿ ಸಲ್ಲಿಸಿದರು.‌

ಒಂದು ವೇಳೆ ಕುರುಬ ಹಾಗೂ ಉಪ್ಪಾರ ಸಮಾಜವನ್ನು ಎಸ್ಟಿಯಲ್ಲಿ ಸೇರ್ಪಡೆ ಮಾಡುವ ಹುನ್ನಾರವನ್ನು ಕೈ ಬಿಡಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಉಗ್ರವಾದ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ವಾಲ್ಮೀಕಿ ನಾಯಕ ಸಮುದಾಯದ ಯುವಕ ಗವಿಸಿದ್ದಪ್ಪ ನಾಯಕನ ಕೊಲೆ ಘಟನೆ ಖಂಡಿಸಿ ಹಾಗೂ ಮೃತನ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕೆಂದು ಇದೇ ವೇಳೆ ಆಗ್ರಹಿಸಿದರು.

ಆಗಸ್ಟ್ 3 ರಂದು ಕೊಪ್ಪಳದ ಜಿಲ್ಲಾ ಕೇಂದ್ರದ ಮುಖ್ಯ ರಸ್ತೆಯಲ್ಲಿ ಗವಿಸಿದ್ದಪ್ಪ ನಾಯಕನನ್ನು ದುಷ್ಕರ್ಮಿಗಳು ಅಮಾನುಷವಾಗಿ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದವರನ್ನು ಹಾಗೂ ಕೊಲೆಗೆ ಸಹಕಾರ ನೀಡಿದವರನ್ನು ಕೂಡಲೇ ಬಂಧಿಸಿ, ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಹತ್ಯೆಯಾದ ಗವಿಸಿದ್ದಪ್ಪ ನಾಯಕ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ನೌಕರಿ ಹಾಗೂ ಒಂದು ಕೋಟಿ ರುಪಾಯಿ ಪರಿಹಾರ ನೀಡಬೇಕು. ಕೊಲೆ ಪ್ರಕರಣದ ಆರೋಪಿಗೆ ಸೂಕ್ತ ಶಿಕ್ಷೆಯಾಗುವ ವರೆಗೂ ಗವಿಸಿದ್ದಪ್ಪನ ಕುಟುಂಬಕ್ಕೆ ಸೂಕ್ತ ಭದ್ರತೆ ನೀಡಬೇಕು. ಘಟನೆಯಿಂದ ಇಡೀ ರಾಜ್ಯವೇ ಬೆಚ್ಚಿಬಿದ್ದಿದ್ದು, ಕೊಲೆ ಪ್ರಕರಣದ ತನಿಖೆಯನ್ನು ಎನ್‌ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ)ಗೆ ವಹಿಸಬೇಕು ಎಂದು ಆಗ್ರಹಿಸಿದರು.

ನಂತರ ಸಂಘಟನೆಯ ಅಧ್ಯಕ್ಷ ಅಶೋಕ ವಾಲ್ಮೀಕಿ ನೇತೃತ್ವದಲ್ಲಿ ತಹಸೀಲ್ದಾರ್ ಮೂಲಕ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲಾಯಿತು. ಇದೇ ವೇಳೆ ತಹಸೀಲ್ದಾರ್ ಕಚೇರಿಗೆ ಆಗಮಿಸಿದ್ದ ಶಾಸಕ ಅರವಿಂದ ಬೆಲ್ಲದ ಅವರಿಗೂ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.

ಮುಖಂಡರಾದ ಮಂಜುನಾಥ ಹುಡೇದ, ಮಾರುತಿ ಬಿಳಗಿ, ಚಿದಾನಂದ ದಂಡಪ್ಪನವರ, ರವಿ ಮಳಗಿ, ಚಂದ್ರು ನೂಲ್ವಿ, ಚನ್ನಪ್ಪ ಕಾಳೆಯವರ, ಶ್ರೀನಾಥ ನರೇಗಲ್, ವಿಠ್ಠಲ ಬ್ಯಾಹಟ್ಟಿ, ಅನಿಲ ಬಾಣಿ, ಮಾರುತಿ ಚಾಕಲಬ್ಬಿ, ಭಾಸ್ಕರ ಮುತ್ತಗಿ, ಗೋವಿಂದ ವಾಲ್ಮೀಕಿ, ಮುತ್ತುರಾಜ ಬೆಳಹಾರ ಇದ್ದರು.

ಮಹಾತ್ಮರ ಪುತ್ಥಳಿ ದುರಸ್ತಿಗೊಳಿಸಿ: ಹುಬ್ಬಳ್ಳಿ ಇಂದಿರಾ ಗ್ಲಾಸ್‌ಹೌಸ್ ಆವರಣದಲ್ಲಿರುವ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಹಾಗೂ ಗೋಕುಲ ರಸ್ತೆಯ ಸಿಂಧೂರ ಲಕ್ಷ್ಮಣ ಸರ್ಕಲ್‌ನ ವೀರ ಸಿಂಧೂರ ಲಕ್ಷ್ಮಣರ ಪುತ್ಥಳಿಗಳು ಸಂಪೂರ್ಣ ಶಿಥಿಲಗೊಂಡಿದ್ದು, ಅವುಗಳನ್ನು ಅಕ್ಟೋಬರ್ 7ರೊಳಗೆ ದುರಸ್ಥಿಗೊಳಿಸುವ ಮೂಲಕ ಜಯಂತಿ ಆಚರಣೆಗೆ ಸಹಕಾರ ನೀಡಬೇಕು. ಈ ಕುರಿತು ಮಹಾನಗರ ಪಾಲಿಕೆಗೆ ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಮಹಾತ್ಮರ ಪುತ್ಥಳಿಗೆ ಗೌರವ ನೀಡದೇ ಹೋದಲ್ಲಿ ಬರುವ ದಿನಗಳಲ್ಲಿ ಹೋರಾಟ ಅನಿವಾರ್ಯವಾಗಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ