;Resize=(412,232))
ಬೆಂಗಳೂರು : ‘ಹಿಂದೆ ಬೆಂಗಳೂರು ನಗರಾಭಿವೃದ್ಧಿ ಮಂತ್ರಿ ಆಗಿದ್ದ ಈ ವ್ಯಕ್ತಿ ಎಷ್ಟು ಸೊಸೈಟಿ ನುಂಗಿದ್ದಾರೆ ಎನ್ನುವುದು ಗೊತ್ತಿದೆ. ಈ ಪಟ್ಟಿ ಧಾರಾವಾಹಿ ರೀತಿ ಬಿಡುತ್ತೇನೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತೇನೆ’ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ಗುಡುಗಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ ಕುಮಾರಸ್ವಾಮಿ ಫ್ಯಾಕ್ಟರಿ ಕಟ್ಟುವುದಾದರೆ ಜಾಗ, ಅನುಮತಿ ಕೊಡುತ್ತೇವೆ ಎಂಬ ಶಿವಕುಮಾರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಮುಖ್ಯಮಂತ್ರಿ ಆಗಿದ್ದಾಗ ಏನೆಲ್ಲ ಸುಧಾರಣೆಗಳನ್ನು ತಂದಿದ್ದೇನೆ ಎಂಬುದನ್ನು ಅವರು ತಿಳಿದುಕೊಳ್ಳಲಿ. ಕಾಂಪೀಟ್ ವಿಥ್ ಚೈನಾ ಯೋಜನೆಯಡಿ 9 ಕೈಗಾರಿಕಾ ಕ್ಲಸ್ಟರ್‌ಗಳನ್ನು ಘೋಷಿಸಿದ್ದೆ. ಲಕ್ಷಾಂತರ ಮಂದಿಗೆ ಉದ್ಯೋಗ ನೀಡುವ ಯೋಜನೆ ಅದಾಗಿತ್ತು. ಕೈಗಾರಿಕೆ ಸ್ಥಾಪಿಸುವವರಿಗೆ 25 ಸಾವಿರ ಕೋಟಿ ರು. ಸಬ್ಸಿಡಿ ನೀಡುವ ಯೋಜನೆ ಇತ್ತು. ಆದರೆ, ಇವರು ಸೇರಿ ನನ್ನ ಸರ್ಕಾರ ತೆಗೆದರು. ಇವರ ಯೋಗ್ಯತೆಗೆ ರಸ್ತೆ ಗುಂಡಿ ಮುಚ್ಚಲು ಆಗುತ್ತಿಲ್ಲ. ಯಾಕೆ ಅವರಿಂದ ಆಗುತ್ತಿಲ್ಲ ಎಂದು ಡಿ.ಕೆ.ಶಿವಕುಮಾರ್‌ಗೆ ತಿರುಗೇಟು ನೀಡಿದರು.
ಡಿ.ಕೆ.ಶಿವಕುಮಾರ್ ಅವರ ಬಹಿರಂಗ ಚರ್ಚೆಗೆ ಆಹ್ವಾನ ಕುರಿತ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಚರ್ಚೆ ಮಾಡುವಷ್ಟು ಯೋಗ್ಯತೆ ಆ ವ್ಯಕ್ತಿಗೆ ಇಲ್ಲ. ಬಹಿರಂಗ ಚರ್ಚೆ ಅವರೊಂದಿಗೆ ಮಾಡಲು ಸಾಧ್ಯವೇ? ಎಂದರು.
ನಾನು ಮುಖ್ಯಮಂತ್ರಿ ಆಗಿದ್ದಾಗ ಏನೇನು ಕೆಲಸ ಮಾಡಿದ್ದೇನೆ ಎಂಬುದನ್ನು ಅವರು ನೋಡಲಿ. ಕೇಂದ್ರದಲ್ಲಿ ನನ್ನ ಖಾತೆಗಳು ಏನು? ಅವುಗಳ ಕಾರ್ಯ ವ್ಯಾಪ್ತಿ ಏನೆಂಬುದನ್ನು ಮೊದಲು ತಿಳಿಯಲಿ. ನನ್ನ ಇಲಾಖೆ ಕಾರ್ಖಾನೆ ತರುವ ಇಲಾಖೆ ಅಲ್ಲ. ಕೆಲ ನೀತಿಗಳನ್ನು ರೂಪಿಸುವ ಕೆಲ ಉತ್ತೇಜನಕಾರಿ ಸೌಲಭ್ಯ ನೀಡುವ ಇಲಾಖೆ. ಅದರಂತೆ ನಾನು ಕೆಲಸ ಮಾಡುತ್ತಿದ್ದೇನೆ. ಬೆಂಗಳೂರು ನಗರಕ್ಕೆ 4,500 ಎಲೆಕ್ಟ್ರಿಕ್ ಬಸ್ ನೀಡಿದ್ದೇನೆ. ರಾಜಕ್ಕೆ ಇನ್ನೂ ಹಲವು ಯೋಜನೆ ಹಾಕಿಕೊಂಡಿದ್ದೇನೆ ಎಂದು ವಿವರಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕುಮಾರಸ್ವಾಮಿ, ನಾನೇಕೆ ಅನುದಾನ ಕೇಳಲಿ? ಜನ 136 ಸ್ಥಾನ ಕೊಟ್ಟಿರುವುದು ನಿಮಗೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಕೇಂದ್ರದಿಂದ ಮೋದಿ ಹಣ ಕೊಡಲಿಲ್ಲ ಎಂದು ಕೈ ಕಟ್ಟಿ ಕೂತಿರಲಿಲ್ಲ. ಕೊಡಗಿನಲ್ಲಿ ಪ್ರವಾಹ ಬಂದಾಗ ಒಂದು ಸಾವಿರ ಮನೆ ಕಟ್ಟಿಸಿದ್ದೇನೆ. ಕೇಂದ್ರ ಹಣ ಕೊಡಲಿಲ್ಲ ಎಂದು ಸುಮ್ಮನೆ ಕೂರಲಿಲ್ಲ. ಇವರಿಗೆ ಅಂತಹ ಯೋಗ್ಯತೆ ಹಾಗೂ ಇಚ್ಛಾಸಕ್ತಿ ಇಲ್ಲ ಎಂದು ತಿರುಗೇಟು ನೀಡಿದರು.
‘ಬಿ’ ಖಾತಾದಿಂದ ‘ಎ’ ಖಾತಾ ಪರಿವರ್ತನೆ ಎನ್ನುವುದೇ ಬೋಗಸ್. ಖಜಾನೆ ಖಾಲಿ ಆಗಿರುವುದರಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ದುಡ್ಡು ಹೊಡೆಯಲು ಈ ಸುಲಿಗೆ ಕಾರ್ಯಕ್ರಮ ತಂದಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.ಯಾರೂ ಖಾತಾ ಬದಲಾವಣೆ ಮಾಡಿಸಿಕೊಳ್ಳಲು ಹಣ ಕಟ್ಟಬೇಡಿ. ಎರಡು ವರ್ಷಗಳಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಕಡಿಮೆ ದರದಲ್ಲಿ ನಿಮಗೆ ಖಾತೆ ಮಾಡಿಕೊಡುತ್ತೇವೆ. ಈ ಸರ್ಕಾರದ ಬೋಗಸ್ ಆಮಿಷಕ್ಕೆ ಮರುಳಾಗಬೇಡಿ ಎಂದೂ ಅವರು ಮನವಿ ಮಾಡಿದ್ದಾರೆ.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಹಗಲು ದರೋಡೆ ಮಾಡುತ್ತಿದೆ. ಜನರನ್ನು ಸುಲಿಗೆ ಸರಕನ್ನಾಗಿ ಮಾಡಿಕೊಂಡಿದೆ. ನಿಮ್ಮನ್ನು ಉಳಿಸುವ, ನಿಮ್ಮ ಹಿತ ಕಾಯುವ ಜವಾಬ್ದಾರಿ ನಮ್ಮದು. ಎರಡು ವರ್ಷ ಕಳೆದ ಬಳಿಕ ನಮ್ಮ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಆಗ ಅತ್ಯಂತ ಸರಳ, ಸುಲಭವಾಗಿ ಖಾತೆ ಮಾಡಿಕೊಡುತ್ತೇವೆ. ನಿಮಗೆ ಯಾವುದೇ ಹಣಕಾಸಿನ ಹೊರೆ ಆಗುವುದಿಲ್ಲ ಎಂದು ಹೇಳಿದರು.ಇದು 6ನೇ ದೋಖಾ ಗ್ಯಾರಂಟಿ:ಈಗಾಗಲೇ ಬೆಲೆ ಏರಿಕೆ ಮತ್ತು ತೆರಿಗೆ ಹೇರಿಕೆಯಿಂದ ಜನತೆ ಬಸವಳಿದಿದ್ದಾರೆ. ಈ ಹೊತ್ತಲ್ಲಿ ರಾಜ್ಯ ಸರ್ಕಾರ ‘ಎ’ ಖಾತಾ ಬಗ್ಗೆ ದೀಪಾವಳಿ ಕೊಡುಗೆ ಎಂದು ಪುಟಗಟ್ಟಲೆ ಜಾಹೀರಾತು ನೀಡಿದೆ. ‘ಎ’ ಖಾತಾ ಎನ್ನುವ ದೋಖಾ ಕಾರ್ಯಕ್ರಮವನ್ನು 6ನೇ ಗ್ಯಾರಂಟಿಯಾಗಿ ಜನರಿಗೆ ದೀಪಾವಳಿ ಉಡುಗೊರೆ ಕೊಟ್ಡಿದ್ದೇವೆ ಎಂದು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಹೇಳಿದ್ದಾರೆ. ದೀಪಾವಳಿ ಕೊಡುಗೆ ಎಂದರೆ ಜನರಿಂದ ಲಕ್ಷ ಲಕ್ಷ ಪೀಕುವುದೇ ಎಂದು ಇದೇ ವೇಳೆ ಕುಮಾರಸ್ವಾಮಿ ಪ್ರಶ್ನಿಸಿದರು.ಬಿಜೆಪಿ-ಜೆಡಿಎಸ್ ಪಕ್ಷದ ಮೈತ್ರಿ ಅಭಾದಿತ:
ಬಿಜೆಪಿ-ಜೆಡಿಎಸ್ ಮೈತ್ರಿ ಅಭಾದಿತವಾಗಿ ಮುಂದುವರೆಯಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎನ್‌ಡಿಎ ಅಂಗಪಕ್ಷಗಳಾಗಿರುವ ಎರಡೂ ಪಕ್ಷಗಳ ಮೈತ್ರಿ ಮುಂದುವರೆಯಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.ಈ ಹಿಂದೆ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ಇದ್ದಾಗ ವಿಜಯನಗರದ ಕೃಷ್ಣದೇವರಾಯನ ಆಡಳಿತ ನೆನಪಿಸುವಂತಿತ್ತು ಎಂದು ಜನರೇ ಮಾತನಾಡುತ್ತಿದ್ದರು. ಕಾಂಗ್ರೆಸ್‌ನವರು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ದುಡ್ಡಿನ ಮದದಿಂದ ಹೇಳುತ್ತಿದ್ದಾರೆ. ಹಣ ನೀಡಿ ವೋಟು ಹಾಕಿಸಿಕೊಳ್ಳಬಹುದು ಎಂಬ ಭ್ರಮೆಯಲ್ಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ರಾಜ್ಯದ ಜನ ಚುನಾವಣೆ ಎದುರು ನೋಡುತ್ತಿದ್ದಾರೆ. 2 ವರ್ಷಗಳ ಬಳಿಕ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ. ನಾನು ಯಾವುದೇ ಕಾಂತ್ರಿಯ ಬಗ್ಗೆ ಮಾತನಾಡಿಲ್ಲ. ಕಾಂತ್ರಿಯೂ ಇಲ್ಲ, ಭ್ರಾಂತಿಯೂ ಇಲ್ಲ, ವಾಂತಿಯೂ ಇಲ್ಲ. ಭಗವಂತನ ಆಶೀರ್ವಾದಿಂದ ಆರೋಗ್ಯ ಸುಧಾರಿಸಿದ್ದು, ಗಟ್ಟಿಮುಟ್ಟಾಗಿ ಇದ್ದೇನೆ ಎಂದರು.ಕಳೆದ ವಿಧಾನಸಭೆ ಚುನಾವಣೆ ವೇಳೆ ಪಂಚರತ್ನ ಕಾರ್ಯಕ್ರಮಗಳ ಘೋಷಣೆ ಮಾಡಿದರೂ ಜನ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲಿಲ್ಲ. ಸ್ವಾಭಿಮಾನದಿಂದ ಜನರು ಬದುಕವಂತಹ ವಾತಾವರಣ ನಿರ್ಮಿಸುವ ಅಗತ್ಯವಿದೆ. ಎರಡು ವರ್ಷದ ಬಳಿಕ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಹಲವು ಜನಪರ ಯೋಜನೆಗಳು ಮನಸಿನಲ್ಲಿದ್ದು, ಅವುಗಳನ್ನು ಅನುಷ್ಠಾನಗೊಳಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಕುಮಾರಸ್ವಾಮಿ ಉತ್ತರಿಸಿದರು.