ರಾಮನಗರ: ನಗರದಲ್ಲಿ ಹದಗೆಟ್ಟ ರಸ್ತೆ ಅಭಿವೃದ್ಧಿ ಮತ್ತು ಯುಜಿಡಿ ನಿರ್ಮಾಣಕ್ಕಾಗಿ ವಿಶೇಷ ಅನುದಾನ ಹಾಗೂ ಸರ್ಕಾರಿ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡುವುದಾಗಿ ಶಾಸಕ ಹೆಚ್.ಎ.ಇಕ್ಬಾಲ್ ಹುಸೇನ್ ತಿಳಿಸಿದರು.
ನಗರ ಮೂಲಸೌಕರ್ಯ ಅಭಿವೃದ್ಧಿ ನಿಧಿ (ಯುಐಡಿಎಫ್) ಯೋಜನೆಯಡಿ 19 ಕೋಟಿ ರು. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಅರ್ಚಕರಹಳ್ಳಿ ವಾರ್ಡ್ ನಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಮನಗರಕ್ಕೆ ಭೇಟಿ ನೀಡಿದಾಗ ನಗರದ ಅಭಿವೃದ್ಧಿಗಾಗಿ 300 ಕೋಟಿ ರು.ಗಳ ವಿಶೇಷ ಅನುದಾನ ಕೋರಲಾಗಿತ್ತು. ಅದಕ್ಕೆ ಸ್ಪಂದಿಸಿದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ರವರು ವಿವಿಧ ಇಲಾಖೆಗಳ ಮೂಲಕ ಅನುದಾನ ಬಿಡುಗಡೆ ಮಾಡಿದ್ದಾರೆ. ಆದರೆ, ಇದು ಸಾಲದಾಗಿದೆ. ಹೊಸ ವಸತಿ ಬಡಾವಣೆಗಳು ವಿಸ್ತಾರವಾದಂತೆ ರಾಮನಗರ ಟೌನ್ ಬೆಳೆಯುತ್ತಿದೆ. ಹೀಗಾಗಿ ಅಲ್ಲಿ ರಸ್ತೆ, ಚರಂಡಿ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು ಮತ್ತಷ್ಟು ಅನುದಾನದ ಅವಶ್ಯಕತೆ ಇದೆ ಎಂದು ಹೇಳಿದರು.
ಯುಐಡಿಎಫ್ ಅನುದಾನ 67 ಕೋಟಿ ರು. ವೆಚ್ಚದ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ. ಇದೀಗ ಎರಡನೇ ಹಂತದಲ್ಲಿ ಬಾಕಿ ಉಳಿದಿದ್ದ ಐಜೂರು ಭಾಗದ ಐದು ವಾರ್ಡ್ ಗಳಲ್ಲಿ 10 ಕಿ.ಮೀ ಕಾಂಕ್ರಿಟ್ ರಸ್ತೆ ಹಾಗೂ ನಗರದ ಎಲ್ಲಾ ವಾರ್ಡ್ ವ್ಯಾಪ್ತಿಯಲ್ಲಿ 20 ಕಿ.ಮೀ ಚರಂಡಿ ಕಾಮಗಾರಿಗೆ ಚಾಲನೆ ನೀಡಿದ್ದೇನೆ ಎಂದರು.ಕುಡಿಯುವ ನೀರಿನ ಕಾಮಗಾರಿ ನಡೆಸುವ ಸಮಯದಲ್ಲಿ ರಸ್ತೆಗಳನ್ನು ಅಗೆಯಲಾಗಿತ್ತು. ಅದರ ಪರಿಣಾಮ ರಸ್ತೆಗಳು ಹದಗೆಟ್ಟಿದ್ದವು. ನಗರದಲ್ಲಿ ಮೂಲಭೂತ ಸೌಕರ್ಯಗಳನ್ನು ಪುನರ್ ನಿರ್ಮಾಣ ಮಾಡುವ ಸಂಕಲ್ಪ ಮಾಡಿದ್ದೆವು. ಅದರಂತೆ ನಮ್ಮ ಕಾಂಗ್ರೆಸ್ ಸರ್ಕಾರದಿಂದ ಯುಐಡಿಎಫ್ ಯೋಜನೆಯಡಿ 82 ಕೋಟಿ ರು. ಅನುದಾನ ದೊರೆತಿತ್ತು. ಈಗಾಗಲೇ ಮೊದಲ ಹಂತದಲ್ಲಿ 25 ವಾರ್ಡುಗಳಲ್ಲಿ ಕಾಮಗಾರಿ ಕೈಗೊಂಡಿದ್ದು, ಉಳಿದ ವಾರ್ಡ್ ಗಳಲ್ಲಿ 19 ಕೋಟಿ ರು. ವೆಚ್ಚದಲ್ಲಿ ಚರಂಡಿ ಮತ್ತು ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದೇವೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.
ನಗರಸಭಾ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ಮಾತನಾಡಿ, ಯುಐಡಿಎಫ್ ಅನುದಾನದಡಿ 82 ಕೋಟಿ ರು. ಕಾಮಗಾರಿ ನಗರಸಭೆ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿದೆ . ಅದರಲ್ಲಿ 40 ಕೋಟಿ ರು. ವೆಚ್ಚದಲ್ಲಿ ಸೀರಳ್ಳ ತಡೆಗೋಡೆ ಕೆಲಸ ನಡೆಯುತ್ತಿದೆ. ಐಜೂರು ಭಾಗದಲ್ಲಿ 19 ಕೋಟಿ ರು. ವೆಚ್ಚದ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಿದ್ದೇವೆ ಎಂದರು.ವಿವೇಕಾನಂದನಗರ ವಾರ್ಡ್ ಬಹಳ ವಿಸ್ತರಣೆ ಪ್ರದೇಶವಾಗಿರುವ ಜೊತೆಗೆ ವಸತಿ ಪ್ರದೇಶಗಳು ಹೆಚ್ಚುತ್ತಿವೆ. ಇದಕ್ಕೆ 2.75 ಕೋಟಿ ಅನುದಾನದಲ್ಲಿ ಅಭಿವೃದ್ದಿ ಕೆಲಸ ಕೈಗೆತ್ತಿಕೊಂಡಿದ್ದು, ಇನ್ನೂ ಅದಕ್ಕೆ ಸುಮಾರು 50 ಕೋಟಿ ರು. ಅನುದಾನದ ಅಗತ್ಯವಿದೆ. ಈ ಭಾಗದ ಹಿರಿಯರು ಸಹ ವಾರ್ಡ್ ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದಾರೆ.
ಈಗಾಗಲೇ ಇಂಜಿನಿಯರ್‌ಗೆ ಸೂಚನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ ವಾರ್ಡಿಗೆ ಹೆಚ್ಚು ಅನುದಾನ ಹಾಕಿ ಕೆಲಸ ಮಾಡಲಾಗುವುದು. ಈ ಬಗ್ಗೆ ಸರ್ಕಾರದ ಗಮನ ಸೆಳೆದು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ಸಹಕಾರ ಪಡೆದು ವಾರ್ಡ್ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಹೇಳಿದರು.ಈ ವೇಳೆ ಮಾಜಿ ಶಾಸಕ ಕೆ.ರಾಜು, ನಗರಸಭೆ ಉಪಾಧ್ಯಕ್ಷೆ ಆಯಿಷಾಬಾನು, ಆಯುಕ್ತರಾದ ಜಯಣ್ಣ, ಸದಸ್ಯರಾದ ಪವಿತ್ರ, ಬಿ.ಸಿ.ಪಾರ್ವತಮ್ಮ, ಮಂಜುನಾಥ್, ವಿಜಯಕುಮಾರಿ, ಸೋಮಶೇಖರ್ (ಮಣಿ), ಅಜ್ಮತ್, ನಿಜಾಮುದ್ದೀನ್ ಷರೀಫ್, ಗಿರಿಜಮ್ಮ, ಪಯ್ಯು, ನರಸಿಂಹ, ಆರೀಫ್, ಸಮದ್, ಬೈರೇಗೌಡ, ನಾಗಮ್ಮ, ಟಿಎಪಿಸಿಎಂಎಸ್ ಅಧ್ಯಕ್ಷ ದೊಡ್ಡಿಸುರೇಶ್, ಕಾಂಗ್ರೆಸ್ ಮುಖಂಡ ಆಂಜನಪ್ಪ, ಲಕ್ಷ್ಮಿಪತಿ , ಗುರುಪ್ರಸಾದ್, ಮುಷೀರ್, ವೆಂಕಟೇಶ್, ರಷೀದ್, ಪ್ರವೀಣ್, ದೇವರಾಜು, ಕಬ್ಬಡಿ ವಿಜಿ ಮತ್ತಿತರರು ಹಾಜರಿದ್ದರು.
ಕೋಟ್ ...............ರಾಮನಗರ ಟೌನಿನ ಸಮಗ್ರ ಅಭಿವೃದ್ಧಿಗೆ ಇನ್ನೂ 200-300 ಕೋಟಿ ರುಪಾಯಿ ಅನುದಾನದ ಅವಶ್ಯಕತೆ ಇದೆ. ಹೀಗಾಗಿ ಯಾವ್ಯಾವ ಇಲಾಖೆಗಳಿಂದ ಸಾಧ್ಯವೊ ಆಯಾಯ ಇಲಾಖೆಗಳ ಮೂಲಕ ಅನುದಾನವನ್ನು ತಂದು ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಲಾಗುವುದು. ಈಗ ನಗರೋತ್ಥಾನ - 4ರಲ್ಲಿ 12 ಕೋಟಿ 36 ಲಕ್ಷ ರುಪಾಯಿ ಅನುದಾನ ಬಾಕಿ ಉಳಿದಿದ್ದು, ಅದನ್ನೂ ಚೇಂಚ್ ಆಫ್ ವರ್ಕ್ ಮಾಡಿ ಅಭಿವೃದ್ಧಿ ಕಾರ್ಯ ಪೂರ್ಣಗೊಳಿಸಲಾಗುವುದು.
-ಇಕ್ಬಾಲ್ ಹುಸೇನ್, ಶಾಸಕರು, ರಾಮನಗರ ಕ್ಷೇತ್ರ4ಕೆಆರ್ ಎಂಎನ್ 5.ಜೆಪಿಜಿ
ರಾಮನಗರದ ಕೆಂಪೇಗೌಡ ವೃತ್ತದಲ್ಲಿ ರಸ್ತೆ ಅಭಿವೃದ್ಧಿಗೆ ಶಾಸಕ ಇಕ್ಬಾಲ್ ಹುಸೇನ್ ಭೂಮಿ ಪೂಜೆ ನೆರವೇರಿಸಿದರು.