ಕನ್ನಡಪ್ರಭ ವಾರ್ತೆ ರಾಯಬಾಗ
ಅಯೋಧ್ಯೆಯ ಶ್ರೀ ರಾಮಮಂದಿರದಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ, ರಾಯಬಾಗದಲ್ಲಿ ಶಾಸಕ ಐಹೊಳೆ ಅವರ ಜನ್ಮದಿನ ಒಂದೇ ದಿನ ನಡೆಯುತ್ತಿರುವುದು ಯೋಗಾಯೋಗವಾಗಿದೆ ಎಂದು ಚಿಕ್ಕೋಡಿ ಸಂಪಾದನಾ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಹೇಳಿದರು.ಸೋಮವಾರ ಪಟ್ಟಣದ ಮಹಾವೀರ ಭವನದಲ್ಲಿ ಹಮ್ಮಿಕೊಂಡಿದ್ದ ಶಾಸಕ ಡಿ.ಎಂ. ಐಹೊಳೆ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯವನ್ನು ವಹಿಸಿ ಮಾತನಾಡಿದ ಅವರು, ಕ್ಷೇತ್ರದ ಜನರ, ರೈತರ ಸಂಕಷ್ಟ ಅರಿತು ಅವರಿಗೆ ಸ್ಪಂದಿಸುವ ಗುಣ ಹೊಂದಿರುವ ಐಹೊಳೆ ಅವರು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಮೆಚ್ಚುವಂತದ್ದು. ನೀರಾವರಿ, ಶಿಕ್ಷಣ, ಸಹಕಾರ ಕ್ಷೇತ್ರಗಳಲ್ಲಿ ಸಾಕಷ್ಟು ಕಾರ್ಯ ಮಾಡಿದ್ದಾರೆ. ಅವರಿಗೆ ಇನ್ನು ಹೆಚ್ಚಿನ ಕೆಲಸ ಮಾಡಲು ದೇವರು ಆಯ್ಯುಷ್, ಆರೋಗ್ಯ ನೀಡಲಿ ಎಂದು ಹಾರೈಸಿದರು.
ಶಾಸಕ ಡಿ.ಎಂ.ಐಹೊಳೆ ಮಾತನಾಡಿ, ಕ್ಷೇತ್ರದ ಜನರ ಪ್ರೀತಿ, ವಿಶ್ವಾಸ ತಮಗೆ ಶ್ರೀರಕ್ಷೆಯಾಗಿದೆ. ಕ್ಷೇತ್ರದ ಮತದಾರರ ಆಶೀರ್ವಾದದಿಂದ ನಾಲ್ಕು ಬಾರಿ ಶಾಸಕನಾಗಿದ್ದೇನೆ. ನನ್ನ ಕೊನೆಯುಸಿರು ಇರುವವರೆಗೆ ಕ್ಷೇತ್ರದ ಜನರ ಸೇವೆ ಮಾಡುತ್ತ, ಕ್ಷೇತ್ರದಲ್ಲಿ ಇನ್ನು ಹೆಚ್ಚಿನ ಅಭಿವೃದ್ಧಿ ಕೈಗೊಂಡು, ರಾಜ್ಯದಲ್ಲಿಯೇ ರಾಯಬಾಗ ಮತಕ್ಷೇತ್ರ ಒಂದು ಮಾದರಿ ಕ್ಷೇತ್ರವನ್ನಾಗಿ ಮಾಡುವುದಾಗಿ ಹೇಳಿದರು.ಸೌವದತ್ತಿ ಓಂಕಾರ ಆಶ್ರಮದ ಶಿವಶಂಕರ ಸ್ವಾಮೀಜಿ, ಭೆಂಡವಾಡದ ಗುರುಸಿದ್ಧ ಸ್ವಾಮೀಜಿ, ಪರಮಾನಂದವಾಡಿಯ ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ, ಇಂಚಲಕರಂಜಿಯ ಮಹೇಶಾನಂದ ಸ್ವಾಮೀಜಿ, ಪಾಲಭಾಂವಿಯ ಮುರಘೇಂದ್ರ ಸ್ವಾಮೀಜಿ, ರಾಯಬಾಗದ ಅನಂತಾನಂದ ಸ್ವಾಮೀಜಿ, ಪಿಎಸ್‌ಐ ಆನಂದ ಬಿ, ಸಿಬಿಕೆಎಸ್‌ಎಸ್‌ಕೆ ನಿರ್ದೇಶಕ ಭರತೇಶ ಬನವಣೆ, ಬಸವರಾಜ ಸನದಿ, ರಾಮು ನಿಶಾನಂದಾರ, ಸದಾಶಿವ ಘೋರ್ಪಡೆ, ಅಣ್ಣಾಸಾಹೇಬ ಖೆಮಲಾಪೂರೆ, ಬಸವರಾಜ ಡೊಣವಾಡೆ, ಸದಾನಂದ ಹಳಿಂಗಳಿ, ಮಾಯವ್ವ ಐಹೊಳೆ, ಸುಶೀಲಾ ಐಹೊಳೆ, ಅರುಣ ಐಹೊಳೆ, ಶಿವಾನಂದ ಐಹೊಳೆ, ಮಹೇಶ ಕರಮಡಿ ಸೇರಿದಂತೆ ಸಾವಿರಾರು ಅಭಿಮಾನಿಗಳು ಭಾಗವಹಿಸಿದ್ದರು.
ಶಾಸಕರು ಕುಟುಂಬದವರ ಮತ್ತು ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದರು. ಅಧಿಕಾರಿಗಳು, ಬಿಜೆಪಿ ಮುಖಂಡರು, ಅಭಿಮಾನಿಗಳು ಶಾಸಕರಿಗೆ ಹೂಗುಚ್ಛ ನೀಡಿ ಶುಭ ಹಾರೈಸಿದರು. ಬೆಳಗ್ಗೆ ಸುಕ್ಷೇತ್ರ ಚಿಂಚಲಿ ಮಾಯಕ್ಕದೇವಿ ದರ್ಶನ ಪಡೆದರು.