ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ರಾಜಋಷಿ ಶ್ರೀ ಮಹರ್ಷಿ ಭಗೀರಥ ಜಯಂತಿ ಅಂಗವಾಗಿ ನಡೆದ ಬೆಳ್ಳಿರಥ ಬೃಹತ್ ಮೆರವಣಿಗೆಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಚಾಲನೆ ನೀಡಿದರು. ದೇವಲ ಮಹರ್ಷಿ ವೃತ್ತದಿಂದ ಮಂಗಳವಾದ್ಯ, ಡೊಲ್ಲು, ತಮಟೆ ಸೇರಿದಂತೆ ವಿವಿಧ ಕಲಾತಂಡ ಹಾಗೂ ಸತ್ತಿಗೆಗಳೊಂದಿಗೆ ಡಾ.ವಿಷ್ಣುವರ್ಧನ್ ರಸ್ತೆ, ಡಾ.ರಾಜಕುಮಾರ ರಸ್ತೆ, ಮಸೀದಿ ವೃತ್ತ, ಡಾ.ಅಂಬೇಡ್ಕರ್ ರಸ್ತೆ, ಎಡಿಬಿ ವೃತ್ತ, ಐಬಿ ರಸ್ತೆಯಲ್ಲಿ ಮೆರವಣಿಗೆ ಮೂಲಕ ತೆರಳಿ ನ್ಯಾಷನಲ್ ಸ್ಕೂಲ್ ಆವರಣಕ್ಕೆ ತಲುಪಿದರು.ಮೆರವಣಿಗೆಯುದ್ದಕ್ಕೂ ವಿವಿಧ ಗ್ರಾಮದವರು ದೊಣ್ಣೆ ಒರಸೆ ಪ್ರದರ್ಶಿಸಿದರು. ಪಟಾಕಿ ಸಿಡಿಸುವ ಮೂಲಕ ಯುವಕರು ಹಾಗೂ ಮುಖಂಡರು ಡಿ.ಕೆ ಸೌಂಡ್ ಗೆ ಕುಣಿದು ಕುಪ್ಪಳಿಸುವ ಮೂಲಕ ಸಂಭ್ರಮಿಸಿದರು. ಈ ವೇಳೆ ನಟ ದಿ.ಪುನೀತ್ ರಾಜಕುಮಾರ ಭಾವಚಿತ್ರ ಹಿಡಿದು ಕುಣಿದು ಕುಪ್ಪಳಿಸಿದರು.ಮಾರ್ಗ ಮಧ್ಯೆ ಆಗಮಿಸಿದ್ದ ಹನೂರು ಶಾಸಕ ಎಂ.ಆರ್.ಮಂಜುನಾಥ್ ಬೆಳ್ಳಿರಥದಲ್ಲಿದ್ದ ಭಗೀರಥದ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿ ಮಾತನಾಡಿ, ಹನೂರು ಕ್ಷೇತ್ರದ ಅಭಿವೃದ್ಧಿ ಮಾಡಲು ನನಗೆ ಅವಕಾಶವನ್ನು ಮಾಡಿಕೊಟ್ಟಂತಹ ಕ್ಷೇತ್ರದ ಅಭಿವೃದ್ಧಿಗೊಳಿಸಲು ಭಗೀರಥ ಪ್ರಯತ್ನ ಮಾಡುತ್ತೇನೆ. ಜೊತೆಗೆ ಉಪ್ಪಾರ ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ಪ್ರಯತ್ನಿಸಲಾಗುವುದು. ಜಯಂತಿ ಆಚರಣೆ ಜೊತೆ ಭಗೀರಥರ ತತ್ಪಾದರ್ಶ ರೂಪಿಸಿಕೊಳ್ಳಬೇಕು. ಮಕ್ಕಳನ್ನು ಕಡ್ಡಾಯವಾಗಿ ಸುಶಿಕ್ಷಿತರನ್ನಾಗಿ ಮಾಡಬೇಕು ಎಂದರು.ಮಾಜಿ ಸಚಿವ ಎನ್.ಮಹೇಶ್, ಮಾಜಿ ಶಾಸಕರು ಆರ್.ನರೇಂದ್ರ, ಜಿ.ಎನ್.ನಂಜುಂಡಸ್ವಾಮಿ, ಎಸ್.ಬಾಲರಾಜು ಆಗಮಿಸಿ ಭಗೀರಥ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಚಾಮುಲ್ ಅಧ್ಯಕ್ಷರು ನಂಜುಂಡಸ್ವಾಮಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರು ರಾಜೇಂದ್ರ ಕುಂತೂರು ಮೋಳೆ,ನಗರಸಭೆ ಅಧ್ಯಕ್ಷ ರೇಖಾ, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್ ಹಾಗೂ ಸದಸ್ಯರು,ರಾಜ್ಯ ಉಪ್ಪಾರ ನಿಗಮ ಮಾಜಿ ಅಧ್ಯಕ್ಷ ಶಿವಕುಮಾರ್, ಜಿ.ಪಂ ಮಾಜಿ ಸದಸ್ಯರು ಕೊಪ್ಪಾಳಿ ಮಹದೇವನಾಯಕ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ತೋಟೇಶ್, ಕಾರ್ಯದರ್ಶಿ ಬಸ್ತೀಪುರ ರವಿ, ಪಿಎಸಿಎಸ್ಎಸ್ ನಿರ್ದೇಶಕ ಮಂಜುನಾಥ್, ಉಪ್ಪಾರ ಸಂಘ ಅಧ್ಯಕ್ಷ ರಮೇಶ್,ಉಪವಿಭಾಗಾಧಿಕಾರಿ ಮಹೇಶ್, ತಹಶಿಲ್ದಾರ್ ಬಸವರಾಜು, ಬಿಇಓ ಮಂಜುಳ ಇನ್ನಿತರರು ಇದ್ದರು.