- 74ನೇ ಜನ್ಮದಿನ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ, ಸನ್ಮಾನ ಸ್ವೀಕಾರ । ಸಚಿವ ಎಸ್ಸೆಸ್ಸೆಂಗೂ ತಿರುಗೇಟು
ಕನ್ನಡಪ್ರಭ ವಾರ್ತೆ ದಾವಣಗೆರೆ ದಾವಣಗೆರೆ ನಗರ, ಜಿಲ್ಲೆಯನ್ನು ಬಿಟ್ಟು ನಾನು ಎಲ್ಲಿಗೂ ಹೋಗುವುದಿಲ್ಲ. ಇನ್ನೂ ಐದಾರು ವರ್ಷ ಸಕ್ರಿಯವಾಗಿದ್ದು, ಮತ್ತೆ ಜನರ ಸೇವೆ, ಅಭಿವೃದ್ಧಿ ಕೆಲಸ ಮಾಡುವೆ. ಸದಾ ನಿಮ್ಮೆಲ್ಲರ ಜೊತೆಗೇ ಇರುತ್ತೇನೆ ಎಂದು ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ಘೋಷಿಸಿದರು.
ನಗರದ ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ಮಂಗಳವಾರ ಜಿ.ಎಂ. ಸಿದ್ದೇಶ್ವರ ಅಭಿಮಾನಿ ಬಳಗ ಹಮ್ಮಿಕೊಂಡಿದ್ದ ತಮ್ಮ 74ನೇ ಜನ್ಮದಿನಾಚರಣೆಯಲ್ಲಿ ಕೇಕ್ ಕತ್ತರಿಸಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ನಾನು ಇನ್ನೂ ಕಾರ್ಯಕರ್ತರ ಋಣ ತೀರಿಸಬೇಕು. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು. ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಪ್ರಯತ್ನ ನನ್ನದು ಎಂದರು.ರೈತರ ಬಗ್ಗೆ ಈಗ ಪ್ರೀತಿ ಅಂತಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ನನ್ನ ಬಗ್ಗೆ ಟೀಕಿಸಿದ್ದಾರೆ. ನಾನೊಬ್ಬ ಅಪ್ಪಟ ರೈತನಾಗಿದ್ದು, ಇಂದಿಗೂ ಕೃಷಿ ಮಾಡುತ್ತೇನೆ. ಭದ್ರಾ ಬಲದಂಡೆ ಕಾಲುವೆಯಲ್ಲಿ ಅವೈಜ್ಞಾನಿಕ ಕಾಮಗಾರಿ ಕೈಗೊಂಡಿದ್ದರಿಂದ ಸಹಜವಾಗಿಯೇ ಜಿಲ್ಲೆಯ ಅಚ್ಚುಕಟ್ಟು ರೈತರ ಧ್ವನಿಯಾಗಿ ಶಾಸಕ ಬಿ.ಪಿ.ಹರೀಶ, ಎಸ್.ಎಂ. ವೀರೇಶ ಹನಗವಾಡಿ, ನಾನು ಸೇರಿದಂತೆ ಅನೇಕರು ಅಂದು ಕಾಡಾ ಸಭೆಗೆ ಹೋಗಿ, ಕಾಮಗಾರಿ ತಡೆಯುವಂತೆ ಒತ್ತಡ ಹೇರಿದ್ದೇವೆ. ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಭೇಟಿಗೆ ಹೋಗಿದ್ದೂ ನಿಜ ಎಂದು ಸ್ಪಷ್ಟಪಡಿಸಿದರು.
ಸಂಸದನಾಗಿ 20 ವರ್ಷ ಹೆಂಡತಿ, ಮಕ್ಕಳು, ಕುಟುಂಬವನ್ನು ಬಿಟ್ಟು, ಕ್ಷೇತ್ರ, ಜನರ ಕೆಲಸ ಪ್ರಾಮಾಣಿಕವಾಗಿ ಮಾಡಿದ್ದೇನೆ. ನನ್ನ ಕ್ಷೇತ್ರದ ಮತದಾರರೇ ದೇವರೆಂದು ತಿಳಿದು ನನ್ನ ಕರ್ತವ್ಯ ನಿರ್ವಹಿಸಿದ್ದೇನೆ. ಸೋತಾಗ ನೀನೂ ಐದು ವರ್ಷ ಮನೆಯಲ್ಲಿ, ಮಿಲ್ ಅಂತಾ ಕಾಲ ಕಳೆಯಲಿಲ್ಲವೇ? ಹಾಗೆಯೇ, ನಾನೂ ಐದು ವರ್ಷ ಇದೇ ದಾವಣಗೆರೆಯಲ್ಲೇ ಕಳೆಯುವೆ. ಮುಂದೆ ನಿಮ್ಮೆಲ್ಲರ ಮಾತುಗಳಿಗೆ ಉತ್ತರ ನೀಡುತ್ತೇನೆ ಎಂದು ಸಿದ್ದೇಶ್ವರ ತಿರುಗೇಟು ನೀಡಿದರು.
ಕೇಂದ್ರ ಮಂತ್ರಿಯಾಗಲು ಬಿಎಸ್‌ವೈ, ಅನಂತಕುಮಾರ ಕಾರಣ:
ಯಡಿಯೂರಪ್ಪ ಬಳಿ ನನ್ನ ಬಗ್ಗೆ ಯಾರೋ ಪುಣ್ಯಾತ್ಮ ಸುಳ್ಳುಗಳನ್ನೇ ನಮ್ಮ ಸಂಬಂಧವನ್ನೇ ಕಟ್ ಮಾಡಿದ್ದಾನೆ. 20 ವರ್ಷದಿಂದ ಚನ್ನಗಿರಿ, ಹೊನ್ನಾಳಿಗೆ ಹೋದಾಗ ನಾನು ಅಭಿವೃದ್ಧಿಯ ಹರಿಕಾರ, ಜಿಲ್ಲೆಗೆ ಅತಿ ಹೆಚ್ಚು ಅನುದಾನ ತಂದ ಸಂಸದ, ಸಿದ್ದೇಶಣ್ಣ ಅಂದಿದ್ದರು. ತಾವು ವಿಧಾನಸಭೆಯಲ್ಲಿ ಸೋತ ನಂತರ ಸಿದ್ದೇಶಪ್ಪನಿಗೆ ಟಿಕೆಟ್ ಕೊಡಬೇಡಿ, ಸಿದ್ದೇಶಪ್ಪನ ಸಹೋದರರು, ಮಕ್ಕಳು, ಕುಟುಂಬ ಹೀಗೆ ಯಾರಿಗೂ ಟಿಕೆಟ್ ಕೊಡಬೇಡಿ ಅಂತಾ ಲಗಾನ್ ಟೀಂ ಅಂತಲೇ ಕರೆಯಲ್ಪಡುವ ತಂಡ ಹೋಗಿತ್ತು ಎಂದು ಅವರು ದೂರಿದರು.
ನನ್ನ ಕ್ಷೇತ್ರದ ಜನರು ನನ್ನ ಪತ್ನಿಗೆ 6.09 ಲಕ್ಷ ಮತ ನೀಡಿ, ಆಶೀರ್ವದಿಸಿದ್ದಾರೆ. ಇಷ್ಟೆಲ್ಲಾ ಜನರ ಪ್ರೀತಿ, ವಿಶ್ವಾಸವಿಟ್ಟಿದ್ದಾರೆ. ನಾನು ಎಲ್ಲಿಗೂ ಹೋಗುವುದಿಲ್ಲ. ದಾವಣಗೆರೆಯಲ್ಲೇ ಜನರ ಸೇವೆ ಮಾಡಲು ಇನ್ನೂ ಐದಾರು ವರ್ಷ ನನಗೆ ಆಯುಷ್ಯ, ಆರೋಗ್ಯ ಕೊಡುವಂತೆ ದೇವರಲ್ಲಿ ನಿತ್ಯ ಬೇಡುತ್ತಿದ್ದೇನೆ ಎಂದು ಜಿ.ಎಂ. ಸಿದ್ದೇಶ್ವರ ತಿಳಿಸಿದರು.
(ಬಾಕ್ಸ್) * ಪಾಲಿಕೆ ಕಾಂಗ್ರೆಸ್ಸಿಗೆ ಯಾಕಪ್ಪಾ ಬಿಟ್ಟುಕೊಟ್ರಿ?
ಪಾಲಿಕೆಯಲ್ಲಿ ಕಾಂಗ್ರೆಸ್ಸಿಗೆ ಬಹುಮತ ಇದ್ದಾಗಲೂ 4 ವರ್ಷ ಬಿಜೆಪಿ ಅಧಿಕಾರದಲ್ಲಿರಲು ಶ್ರಮಿಸಿದ್ದು ನಾನು. ಅಂದು ಐವರು ಪಕ್ಷೇತರರನ್ನು ಪಕ್ಷಕ್ಕೆ ತಂದು, ಎಂಎಲ್‌ಸಿಗಳನ್ನು ಹೆಲಿಕಾಫ್ಟರ್‌ನಲ್ಲಿ ಕರೆಸಿ, ಮತ ಹಾಕಿಸಿ, ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದಲ್ಲಿ ಇರುವಂತೆ ನೋಡಿಕೊಂಡಿದ್ದೆ. ನಾವು ಏನೂ ಮಾಡಿಲ್ಲ ಅಂತಾ ದೊಡ್ಡದಾಗಿ ಹೇಳುವ ನೀನು ಯಾಕಪ್ಪಾ ಕೊನೆಯ 5ನೇ ವರ್ಷ ಪಾಲಿಕೆಯಲ್ಲಿ ಬಿಜೆಪಿ ಹಿಡಿತ ತಪ್ಪಿ, ಕಾಂಗ್ರೆಸ್ ಅಧಿಕಾರ ನಡೆಸಲು ಅವಕಾಶ ಮಾಡಿಕೊಟ್ಟೆ ಎಂದು ಕಿಡಿಕಾರಿದರು. ನಾವು ಎಂದಿಗೂ ಪಕ್ಷಕ್ಕೆ ದ್ರೋಹ ಬಗೆದವರಲ್ಲ. ಬಗೆಯುವುದೂ ಇಲ್ಲ ಎಂದು ಮಾಜಿ ಸಚಿವ ಎಸ್.ಎ.ರವೀಂದ್ರನಾಥ ವಿರುದ್ಧವೂ ಸಿದ್ದೇಶ್ವರ ವಾಗ್ದಾಳಿ ಮುಂದುವರಿದಿತ್ತು.
- - -(-ಫೋಟೋಗಳಿವೆ)