ಪುರಸಭೆಯ ತುರ್ತು ಸಾಮಾನ್ಯ ಸಭೆಯಲ್ಲಿ ನಿರ್ಣಯ
ಕನ್ನಡಪ್ರಭ ವಾರ್ತೆ ಹರಪನಹಳ್ಳಿಇಲ್ಲಿಯ ಪ್ರವಾಸಿ ಮಂದಿರ ವೃತ್ತಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಹಾಗೂ ಪುರಸಭಾ ಸಭಾಂಗಣಕ್ಕೆ ಮಾಜಿ ಶಾಸಕ ದಿ.ಎಂ.ಪಿ.ರವೀಂದ್ರ ಅವರ ಹೆಸರನ್ನು ನಾಮಕರಣ ಮಾಡಲು ಬುಧವಾರ ನಡೆದ ಇಲ್ಲಿಯ ಪುರಸಭಾ ತುರ್ತು ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಮೊದಲಿಗೆ ಐ.ಬಿ. ವೃತ್ತಕ್ಕೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹೆಸರನ್ನು ನಾಮಕರಣ ಮಾಡುವಂತೆ ಡಿಎಸ್‌ಎಸ್‌ನವರು ಸಲ್ಲಿಸಿದ ಮನವಿಯನ್ನು ಸಭೆಯಲ್ಲಿ ಮಂಡಿಸಲಾಯಿತು.ಹಿರಿಯ ಸದಸ್ಯ ಎಂ.ವಿ. ಅಂಜಿನಪ್ಪ ಮಾತನಾಡಿ, ಅಂಬೇಡ್ಕರ್ ನೀಡಿದ ಸಂವಿಧಾನದ ಆಧಾರದ ಮೇಲೇಯೇ ನಾವೆಲ್ಲರೂ ಆಯ್ಕೆಯಾಗಿ ಬಂದಿದ್ದೇವೆ. ಸಂವಿಧಾನ ಕೊಟ್ಟಂತಹ ಅಂಬೇಡ್ಕರ್ ಅವರ ಹೆಸರನ್ನು ಐ.ಬಿ. ವೃತ್ತಕ್ಕೆ ನಾಮಕರಣ ಮಾಡುವುದು ಸೂಕ್ತ ಎಂದು ಹೇಳಿದರು.
ಲಾಟಿದಾದಾಪೀರ, ಜಾಕೀರ್ ಹುಸೇನ್, ಜಾವೇದ್, ಕಿರಣಶಾನ್ಬಾಗ್, ಹರಾಳು ಅಶೋಕ, ವಿನಯಗೌಳಿ , ಮಂಜುನಾಥ ಇಜಂತಕರ್, ಅಧ್ಯಕ್ಷೆ ಎಂ.ಪಾತೀಮಾಬಿ, ಉಪಾದ್ಯಕ್ಷ ಎಚ್.ಕೊಟ್ರೇಶ , ನಾಮನಿರ್ದೇಶಿತ ಸದಸ್ಯ ಎಚ್.ವಸಂತಪ್ಪ ಸೇರಿದಂತೆ ಸರ್ವರೂ ಪಕ್ಷ ಬೇದವಿಲ್ಲದೆ ಐ.ಬಿ. ವೃತ್ತಕ್ಕೆ ಅಂಬೇಡ್ಕರ ಹೆಸರನ್ನು ನಾಮಕರಣ ಮಾಡಲು ಸರ್ವಾನುಮತದ ಒಪ್ಪಿಗೆ ಸೂಚಿಸಿದಾಗ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.ಸಭಾಂಗಣಕ್ಕೆ ಎಂ.ಪಿ. ರವೀಂದ್ರ ಹೆಸರು:
ಪುರಸಭಾ ಸಭಾಂಗಣಕ್ಕೆ ಮಾಜಿ ಶಾಸಕ ದಿ.ಎಂ.ಪಿ. ರವೀಂದ್ರ ಹೆಸರನ್ನು ನಾಮಕರಣ ಮಾಡುವಂತೆ ಸದಸ್ಯ ಜಾಕೀರ್ ಹುಸೇನ್ ಪ್ರಸ್ತಾಪ ಮಾಡಿದಾಗ ಕೈ ಎತ್ತುವ ಮೂಲಕ ಬಹುಮತದ ಮೂಲಕ ನಿರ್ಣಯ ಕೈಗೊಳ್ಳಲಾಯಿತು.ಮೊದಲಿಗೆ ಪುರಸಭಾ ಸಭಾಂಗಣಕ್ಕೆ ಮಾಜಿ ಶಾಸಕ ದಿ.ಎಂ.ಪಿ.ರವೀಂದ್ರ ಅವರ ಹೆಸರನ್ನು ನಾಮಕರಣ ಮಾಡುವಂತೆ ಜಾಕೀರ ಹುಸೇನ್ ಸಲಹೆ ನೀಡಿದಾಗ ಹಿರಿಯ ಸದಸ್ಯ ಎಂ.ವಿ. ಅಂಜಿನಪ್ಪ ಹರಪನಹಳ್ಳಿಯಂತಹ ಹಿಂದುಳಿದ ತಾಲೂಕಿಗೆ 371 ಜೆ ಸೌಲಭ್ಯ ಸಿಗಲು ಎಂ.ಪಿ.ರವೀಂದ್ರ ಕಾರಣವಾಗಿದ್ದಾರೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಸಾಕಷ್ಟು ಅನುದಾನ ಬರುತ್ತಿದೆ. ಬಡ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗಿದೆ. ಈ ವಿಚಾರದಲ್ಲಿ ರಾಜಕೀಯ ಬೇಡ ಎಂದು ಹೇಳಿದರು.
ಬಿಜೆಪಿಯ ಜಾವೇದ್, ಮಾಜಿ ಶಾಸಕ ದಿ.ಡಿ.ನಾರಾಯಣದಾಸ್ ಅವರ ಹೆಸರನ್ನು ಸಭಾಂಗಣಕ್ಕೆ ನಾಮಕರಣ ಮಾಡುವಂತೆ ಸಲಹೆ ನೀಡಿದರು.ಆಗ ನಾಮನಿರ್ದೆಶಿತ ಸದಸ್ಯ ಎಚ್.ವಸಂತಪ್ಪ, 371ಜೆ ಸೌಲಭ್ಯ ಕೊಡಿಸಿದ ದೀಮಂತ ನಾಯಕ ಎಂ.ಪಿ.ರವೀಂದ್ರ ಅವರ ಹೆಸರನ್ನು ಸಭಾಂಗಣಕ್ಕೆ ಇಡುವುದು ಸೂಕ್ತ. ಇಂತಹ ವಿಚಾರದಲ್ಲಿ ಪಕ್ಷ ತರುವುದು ಬೇಡ ಎಂದರು. ಲಾಟಿದಾದಾಪೀರ, ಜಾಕೀರ ಸೇರಿದಂತೆ ಅನೇಕರು ಸಭಾಂಗಣಕ್ಕೆ ಎಂ.ಪಿ.ರವೀಂದ್ರ ಹೆಸರು ಸೂಕ್ತ ಎಂದು ವಾದಿಸಿದರು.
ಈ ಕುರಿತು ಚರ್ಚೆ ಮುಂದುವರೆದಾಗ ಅಂತಮವಾಗಿ ಅಧ್ಯಕ್ಷೆ ಫಾತೀಮಾಭಿ ಮತಕ್ಕೆ ಹಾಕಿದಾಗ ಬಿಜೆಪಿಯ ನಾಲ್ವರು ಸದಸ್ಯರಲ್ಲಿ ಕಿರಣಶಾನ್ ಬಾಗ್, ಗೌಳಿ ವಿನಯಕುಮಾರ, ಹರಾಳು ಅಶೋಕ ತಟಸ್ಥವಾಗಿ ಉಳಿದರೆ, ಜಾವೇದ್ ಮಾತ್ರ ಮಾಜಿ ಶಾಸಕ ದಿ.ಡಿ.ನಾರಾಯಣದಾಸ್ ಹೆಸರನ್ನು ಇಡಿ ಎಂದು ವಾದಿಸಿದರು. ಉಳಿದ 11 ಸದಸ್ಯರು ಕೈ ಎತ್ತುವ ಮೂಲಕ ಪುರಸಭಾ ಸಬಾಂಗಣಕ್ಕೆ ಮಾಜಿ ಶಾಸಕ ದಿ.ಎಂ.ಪಿ.ರವೀಂದ್ರ ಹೆಸರನ್ನು ನಾಮಕರಣ ಮಾಡಲು ಸೂಚಿಸಿದಾಗ ಸಭೆ ಬಹುಮತದ ಮೂಲಕ ಸಭಾಂಗಣಕ್ಕೆ ಎಂ.ಪಿ.ರವೀಂದ್ರ ಹೆಸರನ್ನು ನಾಮಕರಣ ಮಾಡಲು ನಿರ್ಣಯ ಕೈಗೊಂಡಿತು.ಐ.ಬಿ. ವೃತ್ತಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಹೆಸರಿಡಲು ಸರ್ವಾನುಮತವಾದರೆ ಪುರಸಭಾ ಸಭಾಂಗಣಕ್ಕೆ ಮಾಜಿ ಶಾಸಕ ಎಂ.ಪಿ. ರವೀಂದ್ರ ಹೆಸರಿಡಲು ಬಿಜೆಪಿಯ ನಾಲ್ವರು ಸದಸ್ಯರ ಹೊರತು ಪಡಿಸಿ ಬಹುಮತದ ನಿರ್ಣಯ ಕೈಗೊಳ್ಳಲಾಯಿತು.
ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ಇಲ್ಲಿ ಕೈಗೊಂಡಿರುವ ನಿರ್ಣಯಗಳನ್ನು ಜಿಲ್ಲಾಧಿಕಾರಿಯವರಿಗೆ ಕಳಿಸಿಕೊಡಲಾಗುವುದು ಎಂದು ಹೇಳಿದರು. ಉಪಾಧ್ಯಕ್ಷ ಎಚ್.ಕೊಟ್ರೇಶ ಇದ್ದರು.