ಹಾನಗಲ್ಲ: ಪಟ್ಟಣಕ್ಕೆ 5 ದಿನಕ್ಕೊಮ್ಮೆ ನೀರು ಎಂಬ ಸುದ್ದಿಯನ್ನು ಗಮನಿಸಿದ ತಹಸೀಲ್ದಾರ್ ಎಸ್. ರೇಣುಕಾ ಕುಡಿಯುವ ನೀರಿನ ಶುದ್ಧೀಕರಣ ಘಟಕ ಹಾಗೂ ನೀರು ಸಂಗ್ರಹಿಸುವ ಆನಿಕೆರೆಗೆ ಪುರಸಭೆ ಮುಖ್ಯಾಧಿಕಾರಿಗಳೊಂದಿಗೆ ಭೇಟಿ ನೀಡಿ 3 ದಿನಕ್ಕೊಮ್ಮೆ ನೀರು ಪೂರೈಕೆಗೆ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ.ಬುಧವಾರ ಪಟ್ಟಣದ ನೀರಿನ ಶುದ್ಧೀಕರಣ ಘಟಕ ಹಾಗೂ ನೀರು ವಿತರಣಾ ಘಟಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವಿದ್ಯುತ್ ವ್ಯತ್ಯಯ ಹಾಗೂ ಫಿಲ್ಟರ್ ಬೆಡ್ ಸಾಮರ್ಥ್ಯದ ಕೊರತೆ ಕಾರಣವಾಗಿ ಪಟ್ಟಣಕ್ಕೆ ನೀರು ಬಿಡುವಲ್ಲಿ ವ್ಯತ್ಯಯವಾಗುತ್ತಿರುವ ಸತ್ಯ ತಿಳಿದಿದೆ. ಅದೇ ಅಸಹಾಯಕತೆಯನ್ನು ಪುರಸಭೆ ಮುಖ್ಯಾಧಿಕಾರಿಗಳು ಹೇಳಿಕೊಂಡಿದ್ದಾರೆ. ಈಗಿರುವ ಶುದ್ಧೀಕರಣ ಘಟಕದ ಸಾಮರ್ಥ್ಯ ಕೇವಲ 40 ಲಕ್ಷ ಲೀಟರ್ ಇದೆ. ಆದರೆ ಪಟ್ಟಣಕ್ಕೆ ನಿತ್ಯ ನೀರು ಒದಗಿಸಲು ಕನಿಷ್ಠ 80 ಲಕ್ಷ ಲೀಟರ್ ಸಾಮರ್ಥ್ಯದ ಫಿಲ್ಟರ್ ಬೆಡ್ ಬೇಕು ಎನ್ನಲಾಗಿದೆ.ಈಗ ₹38 ಕೋಟಿ ವೆಚ್ಚದಲ್ಲಿ ಧರ್ಮಾ ಜಲಾಶಯದಿಂದ ಫಿಲ್ಟರ್ ಬೆಡ್‌ಗೆ ನೇರವಾಗಿ ನೀರು ಹರಿಸುವ ಯೋಜನೆ ಕಾಮಗಾರಿ ನಡೆಯುತ್ತಿದೆ. ಇದು ಮುಗಿಯಲು ಒಂದು ವರ್ಷದ ಅವಧಿ ಬೇಕಾಗಬಹುದು ಎನ್ನಲಾಗಿದೆ. 18 ಕಿಮೀ ಪೈಪ್‌ಲೈನ್ ಹಾಗೂ ಈಗಿರುವ ಫಿಲ್ಟರ್ ಬೆಡ್ ಘಟಕ ಉನ್ನತೀರಿಸುವ ಕಾರ್ಯ ನಡೆಯುತ್ತದೆ. ಆಗ ಪ್ರತಿ ದಿನ ನೀರು ಕೊಡಲು ಸಾಧ್ಯ.ಸಧ್ಯಕ್ಕೆ ನೀರಿನ ಸಂಗ್ರಹಕ್ಕೆ ಬಳಸಲಾಗುತ್ತಿರುವ ಆನಿಕೆರೆಯಲ್ಲಿ ಇನ್ನೂ 4 ತಿಂಗಳಿಗಾಗುವಷ್ಟು ನೀರಿನ ಸಂಗ್ರಹವಿದೆ. ಈಗಾಗಲೆ ಮಳೆಗಾಲ ಆರಂಭವಾದಂತಿದೆ. ಈ ವರ್ಷ ನೀರಿನ ಕೊರತೆ ಆಗದು. ಆದರೆ ವಿದ್ಯುತ್ ಆಗಾಗ ವ್ಯತ್ಯಯವಾಗುತ್ತಿದ್ದರೆ ನೀರು ಕೊಡುವಲ್ಲಿಯೂ ಅನಿವಾರ್ಯವಾಗಿ ವ್ಯತ್ಯಯವಾಗಲಿದೆ ಎಂದ ಸತ್ಯ ಬೆಳಕಿಗೆ ಬಂದಿದೆ.
ಶೀಘ್ರ ನೀರಿನ ಸಮಸ್ಯೆ ಪರಿಹಾರ: ಫಿಲ್ಟರ್ ಬೆಡ್ ಹಾಗೂ ನೀರು ವಿತರಣಾ ಘಟಕದ ಪರಿಶೀಲನೆ ನಡೆಸಲಾಗಿದೆ. ಇಲ್ಲಿ ಯಾವುದೇ ತಾಂತ್ರಿಕ ಸಮಸ್ಯೆಗಳಿಲ್ಲ. ಆದರೆ ಫಿಲ್ಟರ್ ಬೆಡ್ ಉನ್ನತೀಕರಿಸುದರೆ ಮಾತ್ರ ನೀರು ಕೊಡುವ ಸಮಸ್ಯೆಗೆ ಪರಿಹಾರ ಸಿಗಬಲ್ಲದು. ಇದರ ನಡುವೆಯೂ ಹೆಸ್ಕಾಂ ಅಧಿಕಾರಿಗಳೊಂದಿಗೆ ಮಾತನಾಡಿ ಪರ್ಯಾಯ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ತಿಳಿಸಲಾಗಿದೆ. ಶೀಘ್ರ ನೀರಿನ ಸಮಸ್ಯೆ ಪರಿಹಾರವಾಗುವುದು ಎಂದು ತಹಸೀಲ್ದಾರ್ ಎಸ್. ರೇಣುಕಾ ತಿಳಿಸಿದರು.ಕೊರೆಯಾಗದಂತೆ ಕ್ರಮ: ಅತ್ಯಂತ ಹರಸಾಹಸದಿಂದ ಪಟ್ಟಣಕ್ಕೆ ತೊಂದರೆಯಾಗದಂತೆ ನೀರು ಒದಗಿಸುವ ಕೆಲಸ ನಡೆಯುತ್ತಿದೆ. ತಹಸೀಲ್ದಾರರು ಖುದ್ದಾಗಿ ನಮ್ಮಲ್ಲಿನ ಫಿಲ್ಟರ್ ಬೆಡ್ ಸಮಸ್ಯೆ ನೋಡಿದ್ದಾರೆ. ಆನಿಕರೆಯನ್ನು ಸಕಾಲಿಕವಾಗಿ ತುಂಬಿಸಿಟ್ಟುಕೊಂಡು ಹಾನಗಲ್ಲಿಗೆ ನೀರಿನ ಕೊರೆಯಾಗದಂತೆ ಕ್ರಮ ಜರುಗಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ ತಿಳಿಸಿದರು.