ದೆಹಲಿಯಲ್ಲಿ ಕರ್ನಾಟಕ ಭವನ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

KannadaprabhaNewsNetwork | Updated : Apr 03 2025, 12:04 PM IST

ಸಾರಾಂಶ

  ದೆಹಲಿಯಲ್ಲಿ ಪುನರ್‌ ನಿರ್ಮಾಣಗೊಂಡಿರುವ ಕರ್ನಾಟಕ ಭವನ, ಕೇಂದ್ರ ಹಾಗೂ ರಾಜ್ಯದ ನಡುವೆ ರಾಯಭಾರ ಕಚೇರಿಯಾಗಿ ಕೆಲಸ ಮಾಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಶಾಭಾವ ವ್ಯಕ್ತಪಡಿಸಿದ್ದಾರೆ.  

  ನವದೆಹಲಿ :  ರಾಜಧಾನಿ ದೆಹಲಿಯಲ್ಲಿ ಪುನರ್‌ ನಿರ್ಮಾಣಗೊಂಡಿರುವ ಕರ್ನಾಟಕ ಭವನ, ಕೇಂದ್ರ ಹಾಗೂ ರಾಜ್ಯದ ನಡುವೆ ರಾಯಭಾರ ಕಚೇರಿಯಾಗಿ ಕೆಲಸ ಮಾಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಶಾಭಾವ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ಬುಧವಾರ ಸಂಜೆ ₹138 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಕರ್ನಾಟಕ ಭವನ ಉದ್ಘಾಟಿಸಿ ಅವರು ಮಾತನಾಡಿದರು. ಈ ಹಿಂದೆ ಇದು ಮೈಸೂರು ಭವನವಾಗಿತ್ತು. ದೆಹಲಿಯಲ್ಲಿ ಒಟ್ಟು ಮೂರು ಕರ್ನಾಟಕ ಭವನಗಳು ಇವೆ. ಸುಭದ್ರ ರಾಜ್ಯ ನಿರ್ಮಾಣದಲ್ಲಿ ಎಲ್ಲರ ಭಾಗವಹಿಸುವಿಕೆ ಅಗತ್ಯವಾಗಿದ್ದು, ಕೇಂದ್ರ ಸರ್ಕಾರದ ಬಳಿ ಹಲವು ಕೆಲಸ ಕಾರ್ಯಗಳಿಗಾಗಿ ಅಧಿಕಾರಿಗಳು, ಸಚಿವರು, ಶಾಸಕರು ದೆಹಲಿಗೆ ಬರಬೇಕಾಗುತ್ತದೆ. ಇವರೆಲ್ಲರಿಗೂ ಕರ್ನಾಟಕ ಭವನ ತಂಗಲು ಸಹಾಯವಾಗುತ್ತದೆ ಎಂದರು. ಅಲ್ಲದೆ, ಕರ್ನಾಟಕ ಭವನ-2ರ ಪುನರ್ ನಿರ್ಮಾಣ ಮಾಡುವ ಯೋಜನೆಯೂ ಇದೆ ಎಂದು ತಿಳಿಸಿದರು.

ಕೊರೋನಾ ಸೇರಿ ಹಲವು ಸಂಕಷ್ಟಗಳಿಂದಾಗಿ ಕಟ್ಟಡ ಕಾಮಗಾರಿಗೆ ವಿಳಂಬವಾಯಿತು. ಈಗ ಭವ್ಯ ಕಟ್ಟಡ ನಿರ್ಮಾಣಗೊಂಡಿದೆ. ಕರ್ನಾಟಕ ಭವನ ಬೆಳೆದು ಬಂದ ಇತಿಹಾಸ ಕುರಿತು ಬೋಡ್೯ ಹಾಕಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಸೂಚಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಜೊತೆಗೆ, ಖರ್ಗೆಯವರ ಸಲಹೆಯಂತೆ ಶಾಸಕರು ತಂಗಲು ಇನ್ನಷ್ಟು ಅನುಕೂಲಗಳನ್ನು ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು.

ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ‌.ಶಿವಕುಮಾರ್, ಇದೊಂದು ಪವಿತ್ರವಾದ ಕಾರ್ಯಕ್ರಮ. ನಮ್ಮ ರಾಯಭಾರಿಯಾಗಿ ಯಾರೇ ಬಂದರೂ ರಾಜ್ಯದ ಕೆಲಸ ಮಾಡಿಕೊಂಡು ಬಂದಿದ್ದಾರೆ. ಖರ್ಗೆಯವರು ಹೇಳಿದ ಹಾಗೆ ಇದರ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಆಗಬೇಕಿದೆ ಎಂದರು.

ತುಂಬಾ ಅಚ್ಚು ಕಟ್ಟಾಗಿ ಭವನ ನಿರ್ಮಾಣ ಆಗಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಇನ್ನಷ್ಟು ಉತ್ತಮ ಸೌಲಭ್ಯ ಒದಗಿಸಲು ಪ್ರಯತ್ನ ಮಾಡುತ್ತೇವೆ. ಈ ನಿಟ್ಟಿನಲ್ಲಿ ಪಕ್ಷಾತೀತವಾಗಿ ಕೆಲಸ ನಿರ್ವಹಿಸುತ್ತೇವೆ ಎಂದು ಭರವಸೆ ನೀಡಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ನಾನು ಕಾರ್ಮಿಕ ಸಚಿವನಾಗಿದ್ದಾಗ ಕರ್ನಾಟಕ ಭವನದಲ್ಲಿ ಕೆಟ್ಟ ಅನುಭವ ಆಯಿತು. ನಾನು ಮಂತ್ರಿಯಾಗಿ ಬಂದ ಮೇಲೆ ನನಗೆ ಇಲ್ಲಿ ರೂಮ್ ಸಿಗಲೇ ಇಲ್ಲ. ಹೀಗಾಗಿ, ಸುಸಜ್ಜಿತ ಭವನದ ಅವಶ್ಯಕತೆ ಇತ್ತು. ಇದೀಗ ನಿರ್ಮಾಣಗೊಂಡಿದೆ. ಇಲ್ಲೀಗ ಕ್ಯಾಂಟೀನ್ ನ್ನು ಸರಿಯಾಗಿ ಮಾಡಬೇಕು. ಭವ್ಯ ಕಟ್ಟಡ ನಿರ್ಮಾಣಕ್ಕೆ ತಕ್ಕಂತೆ ಊಟದ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸಿ ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ಕೊಟ್ಟರು. ಜೊತೆಗೆ, ಕರ್ನಾಟಕ ಭವನ ಬೆಳೆದು ಬಂದ ಇತಿಹಾಸ ತಿಳಿಸುವ ಕೆಲಸ ಆಗಬೇಕಿದ್ದು, ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಸೂಚನೆ ಕೊಟ್ಟರು.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಕಳೆದ ಐದು ದಶಕದಲ್ಲಿ ದೆಹಲಿಗೆ ಬರುವವರ ಸಂಖ್ಯೆ ಹೆಚ್ಚಿದೆ. ಹಲವು ಕಾರಣಗಳಿಂದ ಭವನದ ನಿರ್ಮಾಣ ಕಾರ್ಯ ತಡವಾಗಿದ್ದು, ನಮ್ಮ ಸರ್ಕಾರ ಬಂದ ಮೇಲೆ ಕಾಮಗಾರಿ ವೇಗ ಪಡೆದುಕೊಂಡಿತು. ಈಗ ಹೊಸ ಕಟ್ಟಡದ ನಿರ್ಮಾಣ ಆಗಿದೆ. ಸಿಬ್ಬಂದಿ ನೇಮಕಾತಿ ಇನ್ನೂ ಹೆಚ್ಚು ಮಾಡಬೇಕಿದೆ ಎಂದರು.

Share this article