ಕೆಂಪೇಗೌಡರ ಪ್ರತಿಮೆ ನಿರ್ಮಾಣಕ್ಕೆ ಮಡಿಕೇರಿಯಲ್ಲಿ ಜಾಗ ಗುರುತಿಸಿ: ಡಾ.ಮಂತರ್ ಗೌಡ

KannadaprabhaNewsNetwork |  
Published : Jun 28, 2024, 12:48 AM IST
ಚಿತ್ರ : 27ಎಂಡಿಕೆ1 : ಚಿತ್ರಕಲಾ ಶಿಕ್ಷಕರಾದ ಬಿ.ಆರ್.ಸತೀಶ್ ರಚಿಸಿದ ಕೆಂಪೇಗೌಡರ ಭಾವಚಿತ್ರ. | Kannada Prabha

ಸಾರಾಂಶ

ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡಲು ಮಡಿಕೇರಿಯ ಹೃದಯ ಭಾಗದಲ್ಲಿ ಜಾಗ ಗುರುತಿಸುವಂತೆ ಜಿಲ್ಲಾಡಳಿತಕ್ಕೆ ಶಾಸಕ ಮಂತರ್‌ ಗೌಡ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಬೆಂಗಳೂರು ನಿರ್ಮಾತೃ, ಆದರ್ಶ ಆಡಳಿತಗಾರ, ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯ ಹೃದಯ ಭಾಗದಲ್ಲಿ ನಿರ್ಮಾಣ ಮಾಡುವಂತಾಗಲು ಜಾಗ ಗುರುತಿಸುವಂತೆ ಜಿಲ್ಲಾಡಳಿತಕ್ಕೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಮಂತರ್ ಗೌಡ ತಿಳಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಒಕ್ಕಲಿಗರ ಸಂಘ ಮತ್ತು ಕೊಡಗು ಗೌಡ ಸಮಾಜಗಳ ಸಹಕಾರದೊಂದಿಗೆ ನಗರದ ಗಾಂಧಿ ಭವನದಲ್ಲಿ ಗುರುವಾರ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿ ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬೆಂಗಳೂರು ನಿರ್ಮಾಣದಲ್ಲಿ ಕೆಂಪೇಗೌಡರ ಕೊಡುಗೆ ಅಪಾರವಾಗಿದೆ. ಆ ನಿಟ್ಟಿನಲ್ಲಿ ಕೆಂಪೇಗೌಡ ಅವರ ಪ್ರತಿಮೆ ನಿರ್ಮಿಸುವಂತಾಗಲು ಜಾಗ ಗುರುತಿಸಿದಲ್ಲಿ, ವಿವಿಧ ಸಂಘಟನೆಗಳ ಜೊತೆಗೂಡಿ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಲಾಗುವುದು ಎಂದು ಶಾಸಕರು ಹೇಳಿದರು.

ಬೆಂಗಳೂರು ಬೆಳೆಯುತ್ತಿದೆ. ಮಾಹಿತಿ ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ತನ್ನದೇ ಆದ ಸ್ಥಾನ ಹೊಂದಿದೆ. ಕುಡಿಯುವ ನೀರು ಸೇರಿದಂತೆ ಇತರ ಮೂಲ ಸೌಲಭ್ಯ ಕಲ್ಪಿಸಬೇಕಿದೆ. ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ. ಹಿಂದೆ ನಿರ್ಮಿಸಿದ ಕಬ್ಬನ್ ಪಾರ್ಕ್ ಮತ್ತು ಲಾಲ್‌ಬಾಗ್ ಬೆಂಗಳೂರಿನ ಚಂದವನ್ನು ಹೆಚ್ಚಿಸಿದೆ ಎಂದರು.

ಕೆಂಪೇಗೌಡರ ಜೀವನ ಚರಿತ್ರೆಯನ್ನು ಅಧ್ಯಯನ ಮಾಡುವ ನಿಟ್ಟಿನಲ್ಲಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳುವಂತಾಗಬೇಕು ಎಂದು ಶಾಸಕರು ಸಲಹೆ ಮಾಡಿದರು.

ಮುಂದಿನ ದಿನಗಳಲ್ಲಿ ಎಲ್ಲ ಸಂಘಟನೆಗಳು ಸೇರಿ ಕೆಂಪೇಗೌಡ ಅವರ ಜಯಂತಿಯನ್ನು ಮತ್ತಷ್ಟು ಅದ್ಧೂರಿಯಾಗಿ ಆಚರಿಸೋಣ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಗೌಡ ಸಮಾಜಗಳ ಒಕ್ಕೂಟದ ನಿರ್ದೇಶಕರಾದ ಕುಯ್ಯಮುಡಿ ಅಶ್ವಿನಿಕುಮಾರ್ ಅವರು ಮಾತನಾಡಿ, ಆದರ್ಶ ಆಡಳಿತಗಾರ, ದೂರದೃಷ್ಟಿಯ ಚಿಂತಕ ಕೆಂಪೇಗೌಡರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರು ಅಥವಾ ಮೈಸೂರಿನಲ್ಲಿ ‘ಕೆಂಪೇಗೌಡರ ಅಧ್ಯಯನ ಕೇಂದ್ರ’ ಆರಂಭಿಸಬೇಕು ಎಂದು ಅವರು ಸಲಹೆ ಮಾಡಿದರು.

ಅಂತಾರಾಷ್ಟ್ರೀಯ ನಗರವಾದ ಬೆಂಗಳೂರು ಇಡೀ ಪ್ರಪಂಚದಲ್ಲಿಯೇ ವೇಗವಾಗಿ ಬೆಳೆಯುತ್ತಿದೆ. ಇಸ್ರೋ ಸೇರಿದಂತೆ 20 ರಾಷ್ಟ್ರೀಯ ಸಂಸ್ಥೆಗಳನ್ನು ಒಳಗೊಂಡಿರುವ ನಗರವಾಗಿರುವುದು ವಿಶೇಷವಾಗಿದೆ ಎಂದರು.

ಬೆಂಗಳೂರು ನಿರ್ಮಾಣದಲ್ಲಿ ಕೆಂಪೇಗೌಡರು ಅಗಾಧ ದೂರದೃಷ್ಟಿಯನ್ನು ಹೊಂದಿದ್ದರು. ವಿಜಯನಗರ ಮಾದರಿಯಲ್ಲಿ ಬೆಂಗಳೂರನ್ನು ಅಭಿವೃದ್ಧಿಪಡಿಸಲು ಶ್ರಮಿಸಿದರು ಎಂದರು.

ಕೆಂಪೇಗೌಡರ ಕೆರೆ ಇಂದು ಕೆಂಪೇಗೌಡರ ಬಸ್ ನಿಲ್ದಾಣವಾಗಿದೆ. ಆ ನಿಟ್ಟಿನಲ್ಲಿ ಬೆಂಗಳೂರು ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಬೆಂಗಳೂರು ಮಿತಿಮೀರಿ ಬೆಳೆಯುತ್ತಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರು ಸೇರಿದಂತೆ ಹಲವು ಮೂಲಸೌಲಭ್ಯಗಳನ್ನು ಕಲ್ಪಿಸಬೇಕಿದೆ ಎಂದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ ಬೆಂಗಳೂರು ನಿರ್ಮಾಣ ಮಾಡಿದ ಕೆಂಪೇಗೌಡರ ಆಡಳಿತದ ಕೆಲಸಗಳು ಇಂದಿಗೂ ಸಹ ಸಾರ್ವಕಾಲೀಕವಾಗಿದೆ ಎಂದರು.

ಬೆಂಗಳೂರಿನ ಹೆಬ್ಬಾಳ, ಪಶುವೈದ್ಯ ಮಹಾವಿದ್ಯಾಲಯ, ಜೆ.ಕೆವಿಕೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೀಗೆ ಬಳ್ಳಾರಿ ರಸ್ತೆ ಮಾರ್ಗ ಸರ್ಕಾರಿ ಜಾಗವನ್ನು ಕಾಯ್ದಿರಿಸಿದ್ದು ವಿಶೇಷವಾಗಿದೆ. ಬೆಂಗಳೂರು ಕೆರೆಗಳನ್ನು ಉಳಿಸಿ ಅಂತರ್‌ಜಲ ಸಂರಕ್ಷಣೆಗೆ ಒತ್ತು ನೀಡಿದ್ದರು. ಇದು ಕೆಂಪೇಗೌಡರ ಆದರ್ಶ ಕಾರ್ಯಗಳಲ್ಲಿ ಒಂದಾಗಿದೆ ಎಂದು ಹೇಳಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಎಷ್ಟು ಕೆರೆಗಳಿದ್ದವು, ಈಗ ಎಷ್ಟು ಕೆರೆಗಳಿವೆ ಎಂಬ ಬಗ್ಗೆ ಅವಲೋಕನ ಮಾಡಬೇಕಿದೆ. ಮಳೆಯ ನೀರನ್ನು ವೈಜ್ಞಾನಿಕವಾಗಿ ಸಂರಕ್ಷಿಸುವಲ್ಲಿ ಕೆಂಪೇಗೌಡರ ಕಾಲದಲ್ಲಿ ಅಭಿವೃದ್ಧಿ ಪಡಿಸಿರುವುದು ಶ್ಲಾಘನೀಯ ಕಾರ್ಯ. ಆದರ್ಶ ಆಡಳಿತಗಾರ ಕೆಂಪೇಗೌಡ ಅವರು ಜನಸ್ನೇಹಿ ಆಡಳಿತ ನೀಡಲು ಶ್ರಮಿಸಿದ್ದಾರೆ ಎಂದರು.

ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ಜಿಲ್ಲಾ ಅಧ್ಯಕ್ಷರಾದ ಎಸ್.ಎನ್.ಚಂಗಪ್ಪ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಸೂರ್ತಲೆ ಸೋಮಣ್ಣ ಅವರು ಮಾತನಾಡಿದರು.

ಚಿತ್ರಕಲಾ ಶಿಕ್ಷಕರಾದ ಬಿ.ಆರ್.ಸತೀಶ್ ಅವರು ಸಭಾ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಚಿತ್ರವನ್ನು ಬಿಡಿಸುವ ಮೂಲಕ ಗಮನಸೆಳೆದರು.

ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ವ್ಯಾಪ್ತಿಯಲ್ಲಿ ಕೆಂಪೇಗೌಡರ ಜೀವನ ಚರಿತ್ರೆ ಕುರಿತು ಏರ್ಪಡಿಸಿದ್ದ ಪ್ರಬಂಧ ಮತ್ತು ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ವಿಧಾನ ಪರಿಷತ್ ಮಾಜಿ ಸದಸ್ಯರಾದ ಎಸ್.ಜಿ.ಮೇದಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪುಟ್ಟರಾಜು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ಸಿ.ರಂಗಧಾಮಪ್ಪ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇತರರು ಇದ್ದರು.

ಮೈಸೂರಿನ ರಾಘವೇಂದ್ರ ಪ್ರಸಾದ್ ತಂಡದವರು ಕೆಂಪೇಗೌಡರ ಕುರಿತು ಹಾಡು ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಸ್ವಾಗತಿಸಿದರು. ಶಿಕ್ಷಕರಾದ ಕುಮಾರ ನಿರೂಪಿಸಿದರು. ಮಣಜೂರು ಮಂಜುನಾಥ್ ವಂದಿಸಿದರು.

PREV

Recommended Stories

ಮಹರ್ಷಿ ವಾಲ್ಮೀಕಿ ಕವಿಕುಲದ ಸಾರ್ವಭೌಮ: ಸಾಲವಾಡಗಿ
ಅಪಘಾತದಲ್ಲಿ ಪತ್ರಕರ್ತ ಕಾನಗೊಂಡ ಸಾವು