ಪ್ರತಿಭಾವಂತರ ಗುರುತಿಸಿ ಪ್ರೋತ್ಸಾಹಿಸಿ: ಶಾಸಕ ಯು.ಬಿ. ಬಣಕಾರ

KannadaprabhaNewsNetwork |  
Published : Jun 16, 2025, 02:23 AM ISTUpdated : Jun 16, 2025, 02:24 AM IST
ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. | Kannada Prabha

ಸಾರಾಂಶ

12ನೇ ಶತಮಾನದಲ್ಲಿ ಬಸವಾದಿ ಶರಣರು ವಚನಗಳ ಮೂಲಕ ಸಮಾಜ ಪರಿವರ್ತನೆಗೆ ಶ್ರಮಿಸಿದರು.

ರಟ್ಟೀಹಳ್ಳಿ: ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಆದ್ಯ ಕರ್ತವ್ಯ. ಇದು ಕೇವಲ ಪ್ರಚಾರಕ್ಕಾಗಿ ಅಲ್ಲ. ಇನ್ನುಳಿದ ಮಕ್ಕಳಿಗೆ ಪ್ರೇರಣೆಯಾಗಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡುತ್ತದೆ ಎಂದು ಶಾಸಕ ಯು.ಬಿ. ಬಣಕಾರ ಅಭಿಪ್ರಾಯಪಟ್ಟರು.

ಪಟ್ಟಣದ ಲಯನ್ಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 2024-25ನೇ ಸಾಲಿನ ತಾಲೂಕಿನ ಎಲ್ಲ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಹಾಗೂ ಪದವಿ ಕಾಲೇಜುಗಳಲ್ಲಿ ಪ್ರಥಮ ಸ್ಥಾನ ಪಡೆದ ಎಸ್ಎಸ್ಎಲ್‌ಸಿ ಮತ್ತು ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಾದಿ ಶರಣರು ವಚನಗಳ ಮೂಲಕ ಸಮಾಜ ಪರಿವರ್ತನೆಗೆ ಶ್ರಮಿಸಿದರು ಎಂದರು.

ಶಿಕ್ಷಣ ಕ್ಷೇತ್ರದಲ್ಲಿ ಸಾಮಾನ್ಯರಲ್ಲಿ ಅಸಾಮಾನ್ಯ ವಿದ್ಯಾರ್ಥಿಗಳನ್ನು ಗುರುತಿಸುವ ಶಕ್ತಿ ಪ್ರತಿಯೊಬ್ಬರಲ್ಲಿ ಬೇಕು. ಆ ನಿಟ್ಟಿನಲ್ಲಿ ತಾಲೂಕು ಸಾಹಿತ್ಯ ಪರಿಷತ್ ಸಮಾಜಮುಖಿ ಕಾರ್ಯ ಮಾಡಿರುವುದು ಅತ್ಯಂತ ಶ್ಲಾಘನೀಯ ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಎನ್.ಸಿ. ಕಠಾರೆ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ, ಗಣೇಶ ವೆರ್ಣೇಕರ್, ಡಾ. ಮಂಜುನಾಥ ತಲ್ಲೂರ, ಕಿಟ್ಟಪ್ಪ ಬಾಜಿರಾಯರ, ರಾಜು ಹರವಿಶೆಟ್ಟರ್, ಚಾಮರಾಜ ಕಮ್ಮಾರ, ಚನ್ನವೀರ ಚಕ್ರಸಾಲಿ, ಅಶೋಕ ಕೊಂಡ್ಲಿ, ಲಿಂಗರಾಜ ಮೂಲಿಮನಿ, ಎಂ.ಸಿ. ತುಮ್ಮಿನಕಟ್ಟಿ, ಹನುಮಂತಗೌಡ ಭರಮಣ್ಣನವರ, ಸಿ.ಡಿ. ಕರಿಯಣ್ಣನವರ ಮುಂತಾದವರು ಇದ್ದರು.ಸುಸಂಸ್ಕೃತ ವ್ಯಕ್ತಿ ಸಮಾಜದ ಶಕ್ತಿ

ರಾಣಿಬೆನ್ನೂರು: ಸುಸಂಸ್ಕೃತ, ಜ್ಞಾನ ಪಡೆದ ವ್ಯಕ್ತಿ ಸಮಾಜದ ಶಕ್ತಿಯಾಗುತ್ತಾನೆ ಎಂದು ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ನುಡಿದರು.ನಗರದ ಚನ್ನೇಶ್ವರ ಮಠದಲ್ಲಿ ಏರ್ಪಡಿಸಿದ್ದ ಜ್ಞಾನವಾಹಿನಿ ಮಾಸಿಕ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಮನುಷ್ಯ ಕರ್ಮಾನುಸಾರ ತನಗೆ ಒಲಿದು ಬಂದ ಕಾಯಕವನ್ನು ಮಾಡುತ್ತಾ ಸಂಪತ್ತನ್ನು ಗಳಿಸಬೇಕು. ಅದು ಸದ್ಬಳಕೆಯಾಗುವುದರಲ್ಲಿ ಅದರ ಸಾರ್ಥಕತೆಯಿದೆ. ಸಂಪತ್ತಿನ ಸದ್ಬಳಕೆಗೆ ಗುರುಸೇವೆಯನ್ನು ಬಿಟ್ಟು ಇನ್ನುಳಿದ ಮಾರ್ಗಗಳುಂಟೆ? ಅಹಂಭಾವವನ್ನು ಇಟ್ಟು ಗುರುಸೇವೆಯನ್ನು ಮಾಡಬೇಕು. ಸಿಕ್ಕಿರುವ ಅಧಿಕಾರವನ್ನು ಸದ್ಬಳಕೆ ಮಾಡಬೇಕು ಎಂದರು.ಇದೇ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆಯಾದ ವೀರೇಶ ಮೋಟಗಿ ಅವರಿಗೆ ಗುರುರಕ್ಷೆ ನೀಡಿ ಸನ್ಮಾನಿಸಲಾಯಿತು.

ಅಮೃತಗೌಡ ಹಿರೇಮಠ, ಜಗದೀಶ ಮಳಿಮಠ, ಡಾ. ಪ್ರಶಾಂತ ವಿ.ಜೆ., ಸಿದ್ದಲಿಂಗಯ್ಯ ಉಜ್ಜಿನಮಠ, ಅಶ್ವಿನಿ, ಅಶ್ವಿನಿಕುಮಾರ, ಸೋಮಶೇಖರಯ್ಯ ಅಜ್ಯೋಡಿಮಠ ಮತ್ತಿತರರಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ