ಕನ್ನಡಪ್ರಭ ವಾರ್ತೆ ಮಂಡ್ಯ
ಅಪೌಷ್ಟಿತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಪೌಷ್ಟಿಕಾಂಶಯುಕ್ತ ಆಹಾರ ಕೊಡಿಸುವುದು ಅಧಿಕಾರಿಗಳ ಕರ್ತವ್ಯ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ್ದ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮ ಸಂಬಂಧ ಜುಲೈ- ಸೆಪ್ಟೆಂಬರ್ 2025ರ ವರೆಗಿನ ತ್ರೈಮಾಸಿಕ ವಿವಿಧ ಇಲಾಖೆಗಳ ಕಾರ್ಯಕ್ರಮವಾರು ಸಾಧಿಸಲಾಗಿರುವ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ 55 ಸಾವಿರಕ್ಕೂ ಹೆಚ್ಚು ಮಂದಿ ಅಲ್ಪಸಂಖ್ಯಾತ ಮಕ್ಕಳಿದ್ದು, ಇವರಲ್ಲಿ ಅಪೌಷ್ಟಿತೆಯಿಂದ ಬಳಸುತ್ತಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಪೌಷ್ಟಿಕಾಂಶವುಳ್ಳ ಆಹಾರ ಪದಾರ್ಥಗಳನ್ನು ಚೈತನ್ಯಗೊಳಿಸಬೇಕು. ಅಂಗನವಾಡಿಗಳಲ್ಲೂ ಪೌಷ್ಟಿಕಾಂಶಗಳನ್ನು ಕೊಡಿಸಬೇಕು. ಪ್ರಧಾನ ಮಂತ್ರಿಗಳ ಮಾತೃವಂದನ ಯೋಜನೆಯನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಂತೆ ಸೂಚಿಸಿದರು.ಹೆಚ್ಚಿನದಾಗಿ ಅಲ್ಪಸಂಖ್ಯಾತ ಮಕ್ಕಳ ಶಿಕ್ಷಣದ ಕುರಿತಾಗಿ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು. ಅನೇಕ ಮಕ್ಕಳು 7ನೇ ತರಗತಿವರೆಗೂ ಉರ್ದು ಮಾಧ್ಯಮದಲ್ಲಿ ಕಲಿತು ಪ್ರೌಢ ಶಿಕ್ಷಣಕ್ಕೆ ಕನ್ನಡ ಅಥವಾ ಆಂಗ್ಲ ಮಾಧ್ಯಮಕ್ಕೆ ಸೇರಿಕೊಳ್ಳುತ್ತಾರೆ. ಇದರಿಂದ ಶಿಕ್ಷಣದಲ್ಲಿ ಹಿನ್ನಡೆ ಕಾಣುತ್ತಿದ್ದಾರೆ. ಶಿಕ್ಷಕರು ಅಂತಹ ಮಕ್ಕಳ ಮೇಲೆ ವಿಶೇಷ ಕಾಳಜಿ ವಹಿಸಬೇಕು ಎಂದರು.
ಅಲ್ಪಸಂಖ್ಯಾತ ಮಕ್ಕಳ ಕಳೆದ ಎರಡು ವರ್ಷಗಳ ಎಸ್ಸೆಸ್ಸೆಲ್ಸಿ ಫಲಿತಾಂಶ ನೋಡಿದರೆ ಅನೇಕ ಅಲ್ಪಸಂಖ್ಯಾತ ಮಕ್ಕಳು ಅನುತ್ತೀರ್ಣರಾಗಿದ್ದಾರೆ. ಸದರಿ ಮಕ್ಕಳು ಎಸ್ಸೆಸ್ಸೆಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಲು ಕಾರಣವೇನು ಎಂದು ಪರೀಶೀಲನೆ ನಡೆಸಿ ಜೊತೆ ಅವರ ಫಲಿತಾಂಶ ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ಹೆಚ್ಚಾಗಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಮಕ್ಕಳು ಶಾಲೆಯನ್ನು ಅಲ್ಲಿಗೆ ಮೊಟಕುಗೊಳಿಸಿ ಸಣ್ಣ ಪುಟ್ಟ ಅಂಗಡಿಗಳಲ್ಲಿ ದುಡಿಯಲು ಹೋಗುತ್ತಾರೆ. ಶಿಕ್ಷಕರು ಅಂತಹ ಮಕ್ಕಳನ್ನು ಗುರುತಿಸಿ ಅವರ ಪೋಷಕರೊಂದಿಗೆ ಮಾತನಾಡಿ ಅವರನ್ನು ಮರಳಿ ಶಾಲೆಗೆ ತರಬೇಕು. ಜಿಲ್ಲೆಯಲ್ಲಿ ಇರುವ ಎಲ್ಲಾ ಅಲ್ಪಸಂಖ್ಯಾತ ಶಾಲೆಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಶಿಕ್ಷಕರ ಲಭ್ಯತೆ ಇರುವಂತೆ ಖಾತ್ರಿಪಡಿಸಿಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ 6 ಅಲ್ಪಸಂಖ್ಯಾತ ಹಾಸ್ಟೆಲ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರಸಕ್ತ ಸಾಲಿನಲ್ಲಿ ಶೇ.86 ರಷ್ಟು ಫಲಿತಾಂಶವನ್ನು ಹಾಸ್ಟೆಲ್‌ಗಳು ದಾಖಲಿಸಿದೆ. ಅಧಿಕಾರಿಗಳು ಮುತುವರ್ಜಿ ವಹಿಸಿ ಮಕ್ಕಳ ಫಲಿತಾಂಶವನ್ನು ಶೇ.100 ರಷ್ಟು ಗೊಳಿಸುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.ತಾಂತ್ರಿಕ ಶಿಕ್ಷಣದ ಕಡೆ ಮುಖ ಮಾಡುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಆಸಕ್ತ ವಿಷಯಗಳಲ್ಲಿ ಕೌಶಲ್ಯ ತರಬೇತಿ ಕೊಡಿಸಿ, ಪ್ರಸ್ತುತ ಜಿಲ್ಲೆಯಲ್ಲಿ 800ಕ್ಕೂ ಹೆಚ್ಚು ಅಲ್ಪಸಂಖ್ಯಾತ ನಿರುದ್ಯೋಗಿಗಳು ನೋಂದಣಿ ಆಗಿದ್ದರೆ, ಕಾಲೇಜುಗಳಲ್ಲಿ ಯುವನಿಧಿಯ ಕುರಿತಾಗಿ ಹೆಚ್ಚಿನ ಪ್ರಚಾರ ಕೈಗೊಂಡು ಇನ್ನೂ ಹೆಚ್ಚಿನ ಅರ್ಹ ಅಲ್ಪಸಂಖ್ಯಾತ ನಿರುದ್ಯೋಗಿಗಳನ್ನು ನೋಂದಣಿ ಮಾಡಿಸುವಂತೆ ಸೂಚಿಸಿದರು.
ಬ್ಯಾಂಕ್‌ಗಳು ಉದ್ಯಮ ಪ್ರಾರಂಭಿಸಲು ಇಚ್ಚಿಸುವ ಅಲ್ಪಸಂಖ್ಯಾತರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಹಾಗೂ ಕಾಲೇಜುಗಳಲ್ಲಿ ಶೈಕ್ಷಣಿಕ ಸಾಲ ಸೌಲಭ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು. ವಿವಿಧ ಇಲಾಖೆಗಳಿಂದ ಸರ್ಕಾರ ಅಲ್ಪಸಂಖ್ಯಾತರಿಗೆ ಮೀಸಲಿಟ್ಟಿರುವ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಶ್ರಮಿಸಿ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸೂಚಿಸಿದರು.ಸಭೆಯಲ್ಲಿ ಅಪರ ಪೊಲೀಸ್ ಅಧಿಕ್ಷಕ ತಿಮ್ಮಯ್ಯ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಮಂಜುಳಾ, ಶಾಲಾ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಲೋಕೇಶ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅರುಣ್‌ಕುಮಾರ್ ಹಾಗೂ ಮುಖಂಡರಾದ ಅಮ್ಜದ್ ಪಾಷಾ ಸೇರಿದಂತೆ ಮುಖಂಡರು ಇದ್ದರು.