ಪೌರ ಕಾರ್ಮಿಕರಿಗೆ ನಿವೇಶನ ನೀಡಲು ಜಾಗ ಗುರುತಿಸಿ: ಶಂಕರ ಅಂಕನಶೆಟ್ಟಿಪುರ

KannadaprabhaNewsNetwork |  
Published : Oct 14, 2026, 01:30 AM IST
51ಸಿಎಚ್‌ಎನ್‌51ಚಾಮರಾಜನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರೊಂದಿಗೆ ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಶಂಕರ ಅಂಕನಶೆಟ್ಟಿಪುರ ಸಂವಾದ ನಡೆಸಿದರು. | Kannada Prabha

ಸಾರಾಂಶ

ಜಿಲ್ಲೆಯ ವಿವಿಧ ಗ್ರಾಮಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಿವೇಶನ, ಮನೆಗಳಿಲ್ಲದ ಪೌರಕಾರ್ಮಿಕರಿಗೆ ಆಯಾ ಗ್ರಾಮಠಾಣಾ ವ್ಯಾಪ್ತಿಯಲ್ಲಿ ಜಾಗ ಗುರುತಿಸುವ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಶಂಕರ ಅಂಕನಶೆಟ್ಟಿಪುರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲೆಯ ವಿವಿಧ ಗ್ರಾಮಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಿವೇಶನ, ಮನೆಗಳಿಲ್ಲದ ಪೌರಕಾರ್ಮಿಕರಿಗೆ ಆಯಾ ಗ್ರಾಮಠಾಣಾ ವ್ಯಾಪ್ತಿಯಲ್ಲಿ ಜಾಗ ಗುರುತಿಸುವ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಶಂಕರ ಅಂಕನಶೆಟ್ಟಿಪುರ ತಿಳಿಸಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರೊಂದಿಗೆ ನೇರ ಸಂವಾದ ನಡೆಸಿ, ಕುಂದುಕೊರತೆಗಳನ್ನು ಆಲಿಸಿ ಬಳಿಕ ಮಾತನಾಡಿದರು.

ಸಫಾಯಿ ಕರ್ಮಚಾರಿ ಆಯೋಗದ ವತಿಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಪೌರಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸಲು ಸಮಸ್ಯೆಗಳನ್ನು ಆಲಿಸಲಾಗುತ್ತಿದೆ. ಸಾಕಷ್ಟು ಪೌರಕಾರ್ಮಿಕರು ನಿವೇಶನ, ಮನೆ ನೀಡುವಂತೆ ಅಹವಾಲು ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ ಪೌರಕಾರ್ಮಿಕರ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿಗಳು ನಿವೇಶನ, ಮನೆಗಳಿಲ್ಲದ ಪೌರಕಾರ್ಮಿಕರಿಗೆ ಆದ್ಯತೆ ಮೇರೆಗೆ ವಸತಿ ಸೌಲಭ್ಯ ನೀಡುವುದಾಗಿ ಘೋಷಿಸಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿ ಗ್ರಾಮಠಾಣಾ ವ್ಯಾಪ್ತಿಯಲ್ಲಿ ಪೌರಕಾರ್ಮಿಕರಿಗೆ ಸೌಲಭ್ಯ ಒದಗಿಸಲು ಆಯಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಜಂಟಿ ಸರ್ವೇ ನಡೆಸಿ ಜಾಗ ಗುರುತಿಸಲು ಮುಂದಾಗುವಂತೆ ಸೂಚಿಸಿದರು.

ಪೌರಕಾರ್ಮಿಕರಿಗೆ ನಿವೇಶನ, ವಸತಿ, ಇ-ಸ್ವತ್ತು, ವೇತನ ಪಾವತಿ, ಆರೋಗ್ಯ ರಕ್ಷಣೆಯಂತಹ ಜ್ವಲಂತ ಸಮಸ್ಯೆಗಳಿವೆ. ಒಂದೊಮ್ಮೆ ಪೌರಕಾರ್ಮಿಕರು ಮುನಿದರೆ ಯಾವ ಊರು, ಗ್ರಾಮ, ಪಟ್ಟಣಗಳು ಶುದ್ಧಿಯಾಗುವುದಿಲ್ಲ. ಅವರ ಸಮಸ್ಯೆಗಳನ್ನು ಹಂತಹಂತವಾಗಿಯಾದರೂ ಪರಿಹರಿಸಲು ಅಧಿಕಾರಿಗಳು ತುರ್ತು ಕ್ರಮ ವಹಿಸಬೇಕು ಎಂದರು.

ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಐದು ಸಾವಿರ ಜನಸಂಖ್ಯೆಗೆ ಓರ್ವ ಪೌರಕಾರ್ಮಿಕರು ಹಾಗೂ 5 ಸಾವಿರಕ್ಕಿಂತ ಹೆಚ್ಚಿದ್ದರೆ ಮತ್ತೊಬ್ಬರನ್ನು ನಿಯೋಜಿಸಿಕೊಳ್ಳಲು ಅವಕಾಶವಿದೆ. ಕೆಲ ಗ್ರಾಮಪಂಚಾಯಿತಿಯಲ್ಲಿ ಪೌರಕಾರ್ಮಿಕರ ಕೊರತೆಯಿದೆ. ಕೆಲವೆಡೆ ಪೌರಕಾರ್ಮಿಕರ ಅನುಮೋದನೆಯಾಗದಿರುವುದರಿಂದ ಅಧಿಕ ಕಾರ್ಯದೊತ್ತಡವಿದೆ. ಹಾಗಿದ್ದರೂ ಪಂಚಾಯಿತಿಗಳು ಸಕಾಲಕ್ಕೆ ವೇತನ ಪಾವತಿಸುತ್ತಿಲ್ಲದಿರುವುದು ಕಂಡುಬಂದಿದೆ. ಮುಂದಿನ ದಿನಗಳಲ್ಲಿ ವೇತನ ವಿಳಂಬವಾಗದಂತೆ ನೋಡಿಕೊಳ್ಳಬೇಕು. ಸಂಬಂಧಪಟ್ಟ ಅಧಿಕಾರಿಗಳು ಜಿಲ್ಲೆಯಲ್ಲಿ ಅನುಮೋದನೆಯಾಗದ ಪೌರಕಾರ್ಮಿಕರ ಪಟ್ಟಿ ತಯಾರಿಸಿ ಆಯೋಗಕ್ಕೆ ವರದಿ ಸಲ್ಲಿಸುವಂತೆ ಸದಸ್ಯರು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಹೊನ್ನರಾಜು ಮಾತನಾಡಿ ನಿವೇಶನ, ಮನೆ ಇಲ್ಲದವರಿಗೆ ಜಾಗ ಗುರುತಿಸುವ ಕಾರ್ಯ ಪ್ರಗತಿಯಲ್ಲಿದ್ದು, ಒಟ್ಟಾರೆ 25 ಸಾವಿರ ಮನೆಗಳ ಅವಶ್ಯವಿದೆ. 5 ಸಾವಿರ ಜನಸಂಖ್ಯೆ ಮೀರಿದ ಗ್ರಾಮ ಪಂಚಾಯಿತಿಗಳಲ್ಲಿ ಹೆಚ್ಚುವರಿ ಪೌರಕಾರ್ಮಿಕರ ನಿಯೋಜನೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ನಿವೃತ್ತಿ ಹಾಗೂ ಮರಣ ಹೊಂದಿದ ಪೌರಕಾರ್ಮಿಕರ ಕುಟುಂಬಕ್ಕೆ ಉಪಧನ ನೀಡಲು 15ನೇ ಹಣಕಾಸು ಆಯೋಗಕ್ಕೆ ಅನುದಾನ ಬಿಡುಗಡೆಗೆ ಬೇಡಿಕೆ ಸಲ್ಲಿಸಲಾಗುವುದು ಎಂದರು.

ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮದ್ದೂರು: ಕಬ್ಬು ಬೆಳೆಗಾರರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ
ಕಲಬೆರಕೆ ಪ್ರಕರಣ: ಸಿಬಿಐ ತನಿಖೆಗೆ ಒತ್ತಾಯಿಸಿ ಮನ್ಮುಲ್ ಒಕ್ಕೂಟಕ್ಕೆ ಮುತ್ತಿಗೆ