ಸಿದ್ದರಾಮಯ್ಯ ವಿರುದ್ಧದ ಷಡ್ಯಂತ್ರದ ರೂವಾರಿಗಳನ್ನು ಪತ್ತೆಹಚ್ಚಲಿ: ಜೋಶಿ

KannadaprabhaNewsNetwork |  
Published : Oct 26, 2026, 02:00 AM IST
ಪ್ರಹ್ಲಾದ ಜೋಶಿ | Kannada Prabha

ಸಾರಾಂಶ

ಸಿದ್ದರಾಮಯ್ಯ ಅವರನ್ನು ಅಪಮಾನಿಸಲು ತಮ್ಮದೇ ಪಕ್ಷದವರು ಷಡ್ಯಂತ್ರ ನಡೆಸಿದ್ದಾರೆ ಎಂಬ ಆರೋಪವಿರುವಾಗ, ಸರ್ಕಾರ ಅವರ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ನಡೆದಿದೆ ಎಂಬ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಯ ಬೆನ್ನಲ್ಲೇ, ಷಡ್ಯಂತ್ರದ ರೂವಾರಿಗಳನ್ನು ಮೊದಲು ಪತ್ತೆಹಚ್ಚಿ ಕ್ರಮ ಕೈಗೊಳ್ಳಲಿ. ಅದನ್ನು ಬಿಟ್ಟು ಪ್ರಕರಣದ ದಿಕ್ಕು ತಪ್ಪಿಸಲು ಕಾಂಗ್ರೆಸ್ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್ ಪ್ರಕರಣ ಕಾಂಗ್ರೆಸ್‌ನ ಆಂತರಿಕ ಸಂಘರ್ಷವನ್ನು ಬಯಲು ಮಾಡಿದೆ. ಸಿದ್ದರಾಮಯ್ಯ ಅವರನ್ನು ಅಪಮಾನಿಸಲು ತಮ್ಮದೇ ಪಕ್ಷದವರು ಷಡ್ಯಂತ್ರ ನಡೆಸಿದ್ದಾರೆ ಎಂಬ ಆರೋಪವಿರುವಾಗ, ಸರ್ಕಾರ ಅವರ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.

ಸ್ಟಿಂಗ್ ಆಪರೇಷನ್‌ಗೆ ಸಂಬಂಧಿಸಿದಂತೆ ದೆಹಲಿಯಲ್ಲೂ ಬಂಧನಗಳಾಗಿವೆ. ಮಾಹಿತಿ ಹಂಚಿಕೊಂಡ ಆರೋಪದ ಮೇಲೆ ಬಂಧನ ನಡೆಸುವ ಸರ್ಕಾರ, ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ನಡೆಸಿದವರ ವಿಚಾರದಲ್ಲಿ ಮೌನ ವಹಿಸಿರುವುದು ದ್ವಂದ್ವ ನೀತಿಯಾಗಿದೆ. ಅಧಿಕಾರಕ್ಕಾಗಿ ಮುಖ್ಯಮಂತ್ರಿಯನ್ನೇ ಕೆಳಗಿಳಿಸಲು ಇಂತಹ ರಾಜಕೀಯ ನಡೆಯುತ್ತಿರುವುದು ಸ್ವತಂತ್ರ ಭಾರತದ 75 ವರ್ಷಗಳ ಇತಿಹಾಸದಲ್ಲಿ ಅಪರೂಪದ ಬೆಳವಣಿಗೆ ಎಂದು ಟೀಕಿಸಿದರು.

ಸಮಾನತೆ ಹೇಳುವವರು ಪಾಲಿಸಲಿ: ರಾಜ್ಯದಲ್ಲಿ ಹಲವು ಕಡೆಗಳಲ್ಲಿ ನೀತಿ ಸಂಹಿತೆ ನೆಪದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನಿರಾಕರಣೆ ಕುರಿತು ಪ್ರತಿಕ್ರಿಯಿಸಿದ ಜೋಶಿ, ಹುಬ್ಬಳ್ಳಿಯಲ್ಲಿ ಸ್ಥಳೀಯ ಪೊಲೀಸರು ಅಗತ್ಯ ಅನುಮತಿ ನೀಡಿದ್ದಾರೆ ಎಂಬುದು ತಮ್ಮ ಗಮನಕ್ಕೆ ಬಂದಿದೆ ಎಂದರು. ಸಂವಿಧಾನ, ಸಹಿಷ್ಣುತೆ ಮತ್ತು ಸಮಾನ ಅವಕಾಶಗಳ ಬಗ್ಗೆ ಮಾತನಾಡುವವರು ಅಧಿಕಾರದಲ್ಲಿದ್ದಾಗಲೂ ಅದೇ ತತ್ವಗಳನ್ನು ಪಾಲಿಸಬೇಕು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ವಿಧಾನಮಂಡಲ ಹಾಗೂ ಸಾರ್ವಜನಿಕ ವೇದಿಕೆಗಳಲ್ಲಿ ಮಾಡಿದ ಭಾಷಣಗಳಿಗೆ ಅನುಗುಣವಾಗಿ ನಡೆದುಕೊಳ್ಳಲಿ ಎಂದು ಸವಾಲು ಹಾಕಿದರು.

ಬಿಜೆಪಿಯ ವಿಚಾರಧಾರೆಯನ್ನು ಜನರು ಸ್ವೀಕರಿಸಿರುವುದರಿಂದ ದೇಶದ ಹಲವು ರಾಜ್ಯಗಳಲ್ಲಿ ಪಕ್ಷ ಅಧಿಕಾರದಲ್ಲಿದೆ. ಜತೆಗೆ ಬಿಜೆಪಿ ದೇಶದ ಅತಿದೊಡ್ಡ ಪಕ್ಷವಾಗಿ ಇಂದು ಬೆಳೆದಿದೆ ಎಂದರು.

ರಾಹುಲ್ ಪ್ರವಾಸದ ಮಾಹಿತಿ ಬಹಿರಂಗಪಡಿಸಲಿ:

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿದೇಶ ಪ್ರವಾಸದ ಬಗ್ಗೆಯೂ ಪ್ರಶ್ನಿಸಿದ ಜೋಶಿ, ಅವರು ಎಲ್ಲಿಗೆ ತೆರಳುತ್ತಾರೆ, ಯಾರನ್ನು ಭೇಟಿಯಾಗುತ್ತಾರೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಬೇಕು ಎಂದರು. ವಿದೇಶ ಪ್ರವಾಸದ ವೇಳೆ ನಡೆಸುವ ಚಟುವಟಿಕೆಯನ್ನು ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತದೆ. ಆದರೆ, ರಾಹುಲ್ ಗಾಂಧಿ ಅವರ ಪ್ರವಾಸ ಹಾಗೂ ಭೇಟಿಗಳ ಮಾಹಿತಿ ಸ್ಪಷ್ಟವಾಗಿ ಲಭ್ಯವಾಗದಿರುವುದೇಕೆ ಎಂದು ಪ್ರಶ್ನಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೊನ್ನಾವರದಲ್ಲಿ ಅನಧಿಕೃತ ಬೋಟಿಂಗ್‌ ವ್ಯವಸ್ಥೆಗೆ ಆಕ್ರೋಶ
ಉಳಿಕೆಯ ಹಣ ಒಂದೇ ಕಡೆ ಹೂಡಿಕೆ ಸರಿಯಲ್ಲ: ಸಹನಾ ಬಾಳ್ಕಲ್