ಹುಬ್ಬಳ್ಳಿ:
ಇಲ್ಲಿನ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನ ವಿಸರ್ಜನೆ ಸೋಮವಾರ ಸಡಗರ, ಸಂಭ್ರಮದಿಂದ ನಡೆಯಿತು.5 ಗಂಟೆಗೂ ಹೆಚ್ಚು ಕಾಲ ಮೆರವಣಿಗೆ ನಡೆಯಿತು. ಸಂಜೆ 5.30ರ ಸುಮಾರಿಗೆ ವಿಸರ್ಜನೆ ಮಾಡಲಾಯಿತು. ಈ ಮೂಲಕ 3 ದಿನದ ಈದ್ಗಾ ಮೈದಾನದ ಗಣೇಶೋತ್ಸವ ನಿರ್ವಿಘ್ನವಾಗಿ ಮುಕ್ತಾಯಗೊಂಡಿತು. ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಮೆರವಣಿಗೆಯುದ್ಧಕ್ಕೂ ಭಾರೀ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.
ಮಹಾನಗರ ಪಾಲಿಕೆಯ ಷರತ್ತಿನಂತೆ ಮಧ್ಯಾಹ್ನ 12ರೊಳಗೆ ಗಣೇಶ ಮೂರ್ತಿಯನ್ನು ಈದ್ಗಾ ಮೈದಾನದಿಂದ ಹೊರಗೆ ತರಲಾಯಿತು. ವಿಸರ್ಜನಾ ಮೆರವಣಿಗೆಗೆ ಆರ್‌ಎಸ್‌ಎಸ್ ಪ್ರಮುಖರಾದ ಮಂಗೇಶ ಬೇಂಡೆ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಚಾಲನೆ ನೀಡಿದರು. ವಿವಿಧ ಜಾನಪದ ಕಲಾತಂಡಗಳ ಪ್ರದರ್ಶನದೊಂದಿಗೆ ಅದ್ಧೂರಿ ಮೆರವಣಿಗೆ ನಡೆಯಿತು. ಪಂಚವಾದ್ಯ, ಡೋಲು, ಝಾಂಜ್ ಹಾಗೂ ಡಿಜೆ ಮೇಳಗಳು ಮೆರವಣಿಗೆಗೆ ಮೆರುಗು ತಂದವು. ರಸ್ತೆಯುದ್ದಕ್ಕೂ ಭಗವಾಧ್ವಜ, ಕೇಸರಿ ಬಾವುಟ ರಾರಾಜಿಸುತ್ತಿದ್ದವು. ಸಂಗೀತಕ್ಕೆ ತಕ್ಕಂತೆ ಭಜವಾಧ್ವಜ ಹಾರಾಡಿಸುತ್ತ ಅಬಾಲಾವೃದ್ಧರಾದಿಯಾಗಿ ಎಲ್ಲರೂ ಕುಣಿದು ಕುಪ್ಪಳಿಸಿದರು.ಗಣೇಶ, ಹನುಮಾನ್ ಹಾಗೂ ಶ್ರೀರಾಮನಿಗೆ ಜೈಕಾರ ಮುಗಿಲು ಮುಟ್ಟಿತ್ತು. ಗಣಪತಿ ಬಪ್ಪಾ ಮೋರಯಾ... ಪುಡಚಾ ವರ್ಷಿ ಲೌಕರ ಯಾ ಎಂಬ ಜಯಘೋಷ ಜೋರಾಗಿತ್ತು. ಮೆರವಣಿಗೆಯು ಚೆನ್ನಮ್ಮ ಮೈದಾನದಿಂದ ಆರಂಭವಾಗಿ ಹಳೇ ಬಸ್ ನಿಲ್ದಾಣ ಮಾರ್ಗವಾಗಿ ನಗರದ ಇಂದಿರಾಗಾಜಿನ ಮನೆಯ ವರೆಗೆ ಸಾಗಿತು. ಆನಂತರ ಪಕ್ಕದ ಬಾವಿಯಲ್ಲಿ ಗಣೇಶ ಮೂರ್ತಿ ವಿಸರ್ಜಿಸಲಾಯಿತು.
ಪ್ರಸಾದದ ವ್ಯವಸ್ಥೆ:ಮೆರವಣಿಗೆ ಸಾಗುವ ಮಾರ್ಗಮಧ್ಯೆದಲ್ಲಿ ಅಲ್ಲಲ್ಲಿ ಪುಲಾವ್, ನೀರು, ಮಜ್ಜಿಗೆ, ಮೋದಕ ಸೇರಿದಂತೆ ವಿವಿಧ ಸಿಹಿ ತಿಂಡಿಗಳ ವಿತರಣೆ ಕಾರ್ಯವೂ ಸಾಂಗೋಪಾಂಗವಾಗಿ ನಡೆಯಿತು.
ಶಾಸಕ ಮಹೇಶ ಟೆಂಗಿನಕಾಯಿ, ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಮೇಯರ್ ರಾಮಣ್ಣ ಬಡಿಗೇರ, ಸ್ವರ್ಣಾ ಗ್ರೂಪ್ ಆಫ್ ಕಂಪನೀಸ್‌ನ ವ್ಯವಸ್ಥಾಪಕ ನಿರ್ದೇಶಕ ವಿಎಸ್‌ವಿ ಪ್ರಸಾದ, ರಾಣಿ ಚೆನ್ನಮ್ಮ ಗಜಾನನ ಉತ್ಸವ ಮಹಾಮಂಡಳದ ಅಧ್ಯಕ್ಷ ಸಂಜೀವ ಬಡಸ್ಕರ್, ಸುಭಾಷಸಿಂಗ್ ಜಮಾದಾರ, ಸಂತೋಷ ಚವ್ಹಾಣ, ತಿಪ್ಪಣ್ಣ ಮಜ್ಜಗಿ, ಬಸವರಾಜ ಕುಂದಗೋಳ ಮಠ ಸೇರಿದಂತೆ ಹಿಂದೂಪರ ಸಂಘಟನೆಗಳ ಹಾಗೂ ಬಿಜೆಪಿ ಕಾರ್ಯಕರ್ತರು, ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.ಮುತಾಲಿಕ ವಿಶೇಷ ಪೂಜೆ:
ಈ ನಡುವೆ ಮೆರವಣಿಗೆ ಪ್ರಾರಂಭವಾಗುವ ಮುನ್ನವೇ ಶ್ರೀರಾಮಸೇನೆಯ ಅಧ್ಯಕ್ಷ ಪ್ರಮೋದ ಮುತಾಲಿಕ ಆಗಮಿಸಿ ಗಣೇಶನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ತೆರಳಿದರು.ಮಾರ್ಗ ಬದಲಾವಣೆ:
ಈದ್ಗಾ ಮೈದಾನ ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ನಗರದಲ್ಲಿ ವಾಹನಗಳ ಸಂಚಾರಕ್ಕಾಗಿ ಮಾರ್ಗ ಬದಲಾವಣೆ ಮಾಡಲಾಗಿತ್ತು. ಆದರೂ ಟ್ರಾಫಿಕ್ ಜಾಮ್ ಎಲ್ಲ ರಸ್ತೆಗಳಲ್ಲೂ ಕಂಡು ಬಂತು. ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಬೇರೆಡೆಯಿಂದ ಆಗಮಿಸಿದ್ದ ಪ್ರಯಾಣಿಕರು ಇಳಿಯಲು ಪ್ರತ್ಯೇಕ ನಿಲ್ದಾಣದ ವ್ಯವಸ್ಥೆ ಮಾಡಲಾಗಿತ್ತು. ದೂರದ ಊರಿಂದ ಆಗಮಿಸಿದ್ದವರು ಹೈರಾಣಾಗಿದ್ದು ಕಂಡು ಬಂತು. ಮಧ್ಯಾಹ್ನ 12ರಿಂದ 4.30ರ ವರೆಗೆ ನೀಲಿಜನ್ ರಸ್ತೆ, ದೇಸಾಯಿ ಸರ್ಕಲ್, ಮೂರುಸಾವಿರ ಮಠದ ರಸ್ತೆ, ಕೊಪ್ಪೀಕರ ರಸ್ತೆಗಳು ಸಂಪೂರ್ಣ ಟ್ರಾಫಿಕ್ ಜಾಮ್ ಆಗಿದ್ದವು. ದ್ವಿಚಕ್ರ, ಕಾರು ಸವಾರರು ಹೈರಾಣಾಗಿದ್ದರು.ಬಿಗಿ ಬಂದೋಬಸ್ತ್...ರಾಣಿ ಚೆನ್ನಮ್ಮ ಮೈದಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಗಣೇಶನ ವಿಸರ್ಜನೆ ಹಿನ್ನೆಲೆಯಲ್ಲಿ 5 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಪೊಲೀಸ್ ಕಮಿಷನರ್ ಎನ್. ಶಶಿಕುಮಾರ ಅವರೇ ಬಂದೋಬಸ್ತಿನ ನೇತೃತ್ವ ವಹಿಸಿ ಸ್ಥಳದಲ್ಲೇ ಠಿಕಾಣಿ ಹೂಡಿದ್ದರು. ಡಿಸಿಪಿ, ಎಸಿಪಿ, ಇನ್‌ಸ್ಪೆಕ್ಟರ್‌ಗಳ ತಂಡ, ಪ್ಯಾರಾಮಿಲಿಟರಿ, ರ‍್ಯಾಪಿಡ್ ಆಕ್ಷನ್ ಪೋರ್ಸ್ ಸ್ಥಳದಲ್ಲಿದ್ದವು. ಸುತ್ತಲಿನ ಕಟ್ಟಡಗಳ ಮೇಲೆ ಪೊಲೀಸರ ಜತೆಗೆ ಕ್ಯಾಮೆರಾ ಕಣ್ಣುಗಳು ಕೆಲಸ ಮಾಡುತ್ತಿದ್ದವು. ಅಲ್ಲದೆ, ನೂರಕ್ಕೂ ಹೆಚ್ಚು ಎಎಸ್‌ಎಫ್ ಸಿಬ್ಬಂದಿ ಮೈದಾನದ ಸುತ್ತಲೂ ಭದ್ರತೆಗೆ ನಿಯೋಜನೆಗೊಂಡಿದ್ದರು.ಹೆಜ್ಜೆ ಹಾಕಿದ ರವಿ, ಟೆಂಗಿನಕಾಯಿ!
ಈದ್ಗಾ ಮೈದಾನದ ಮೆರವಣಿಗೆಯಲ್ಲಿ ಮಾಜಿ ಸಚಿವ ಸಿ.ಟಿ. ರವಿ, ಶಾಸಕ ಮಹೇಶ ಟೆಂಗಿನಕಾಯಿ ಕುಣಿದು ಕುಪ್ಪಳಿಸಿದರು. ಇದು ನೆರೆದಿದ್ದ ಯುವಕರಲ್ಲಿ ಮತ್ತಷ್ಟು ಹುಮ್ಮಸ್ಸು ಮೂಡಿಸಿದಂತಾಯಿತು.ಹುಬ್ಬಳ್ಳಿ ರಾಣಿ ಚೆನ್ನಮ್ಮ ಮೈದಾನ (ಈದ್ಗಾ) ದಲ್ಲಿ ನಡೆದ ಗಣೇಶೋತ್ಸವ ಅತ್ಯಂತ ಶಾಂತಿಯುತ ಹಾಗೂ ಸೌಹಾರ್ದಯುತವಾಗಿ ನಡೆಯಿತು. ತ್ವರಿತವಾಗಿ ಪರವಾನಗಿ ನೀಡಲು ಸಹಕಾರ ನೀಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಹಾನಗರ ಪಾಲಿಕೆ ಅಧಿಕಾರಿ ವರ್ಗ, ಸೂಕ್ತ ಬಂದೋಬಸ್ತ್ ವಹಿಸಿದ ಪೊಲೀಸ್ ಇಲಾಖೆ, ಗಣೇಶೋತ್ಸವ ಯಶಸ್ವಿಗೊಳಿಸಲು ಸಹಕರಿಸಿದ ಮಹಾಮಂಡಳದ ಕಾರ್ಯಕರ್ತರಿಗೆ, ಸದ್ಭಕ್ತರಿಗೆ ಧನ್ಯವಾದಗಳು ಎಂದು ಡಾ. ವಿಎಸ್‌ವಿ ಪ್ರಸಾದ ಹೇಳಿದರು.