ಮಾಳಿ ಸಮಾಜಕ್ಕೆ ನಿಗಮ ಸ್ಥಾಪಿಸಿದಿದ್ರೆ ಹೋರಾಟ

KannadaprabhaNewsNetwork |  
Published : Jul 07, 2025, 11:48 PM IST
ಅಥಣಿ ಪಟ್ಟಣದ ಗಚ್ಚಿನಮಠದ ಸಭಾಂಗಣದಲ್ಲಿ ಮಾಳಿ-ಮಾಲಗಾರ ಸಮಾಜದಿಂದ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಿತು. | Kannada Prabha

ಸಾರಾಂಶ

ಕಾಲು ಎಳೆಯುವ ಸಂಸ್ಕೃತಿ ಬಿಟ್ಟು ಸಮಾಜ ಸದೃಢ, ಸಮೃದ್ಧವಾಗಿ ಬೆಳೆಯಲು ಎಲ್ಲರ ಸಹಕಾರ ಅಗತ್ಯ

ಕನ್ನಡಪ್ರಭ ವಾರ್ತೆ ಅಥಣಿ

ಮಾಳಿ ಸಮಾಜಕ್ಕೆ ಸರ್ಕಾರ ಶೀಘ್ರವೇ ನಿಗಮ ಮಂಡಳಿ ರಚನೆ ಮಾಡಬೇಕು. ಇಲ್ಲವಾದರೆ ಮುಂಬರುವ ಚಳಿಗಾಲ ಅಧಿವೇಶನದಲ್ಲಿ ಆಮರಣಾಂತ ಉಪವಾಸ ಸಮಾಜದಿಂದ ಹಮ್ಮಿಕೊಳ್ಳಲಾಗುವುದು ಎಂದು ಮಾಳಿ-ಮಾಲಗಾರ ಸಮಾಜದ ರಾಜ್ಯಾಧ್ಯಕ್ಷ ಡಾ.ಸಿ.ಬಿ.ಕುಲಗುಡೆ ಹೇಳಿದರು.

ಸ್ಥಳೀಯ ಗಚ್ಚಿನಮಠದ ಸಭಾಂಗಣದಲ್ಲಿ ಭಾನುವಾರ ತಾಲೂಕು ಮಾಳಿ-ಮಾಲಗಾರ ಸಮಾಜದಿಂದ ನಡೆದ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದ ಧ್ವನಿಯಾಗಿ ಮಾತನಾಡುವ ಒಬ್ಬ ಜನಪ್ರತಿನಿಧಿ ಸಮಾಜದವರಿಲ್ಲ. ಹೀಗಾಗಿ ಸಮಾಜ ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಿದೆ. ಅದಕ್ಕೆ ಸಮಾಜದ ಬಂಧುಗಳು ಒಗ್ಗಟ್ಟಿನಿಂದ ಹೋರಾಟಕ್ಕೆ ಇಳಿಯಬೇಕು ಹೊರತು ಕಾಲು ಎಳೆಯುವ ಸಂಸ್ಕೃತಿ ಬಿಟ್ಟು ಸಮಾಜ ಸದೃಢ, ಸಮೃದ್ಧವಾಗಿ ಬೆಳೆಯಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ವಲಯ ಅರಣ್ಯಾಧಿಕಾರಿ ಪ್ರಶಾಂತ ಗೌರಾಣಿ ಮಾತನಾಡಿ, ಬಡ ವಿದ್ಯಾರ್ಥಿಗಳಿಗೆ ಡಿಸಿಸಿ ಬ್ಯಾಂಕಿನಿಂದ ಕಡಿಮೆ ಬಡ್ಡಿದರದಲ್ಲಿ ಉನ್ನತ ವಾಸಂಗಕ್ಕೆ ಹಣಕಾಸಿನ ನೆರವು ನೀಡಬೇಕೆಂದು ಬ್ಯಾಂಕ್‌ ಅಧ್ಯಕ್ಷರಲ್ಲಿ ವಿನಂತಿಸಿದರು. ಬೆಳಗಾವಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಅಪ್ಪಾಸಾಬ ಕುಲಗುಡೆ ಮಾತನಾಡಿ, ಪಕ್ಷಾತೀತವಾಗಿ ಸಮಾಜ ಸಂಘಟನೆಗೆ ಎಲ್ಲರೂ ಮುಂದಾಗಬೇಕು. ಇದರಿಂದ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ. ಅದೇ ರೀತಿ ವಿದ್ಯಾರ್ಥಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲು ಬ್ಯಾಂಕ್‌ ಸಭೆಯಲ್ಲಿ ಚರ್ಚಿಸಿ ನಿರ್ಣಯಿಸುವ ಭರವಸೆ ನೀಡಿದರು.

ಸಾನ್ನಿಧ್ಯ ವಹಿಸಿದ ಗಚ್ಚಿನಮಠದ ಶಿವಬಸವ ಸ್ವಾಮೀಜಿ, ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ಮಾತನಾಡಿ, ಬಸವಣ್ಣನವರ ಕಾಯಕ ತತ್ವವನ್ನು ಮಾಳಿ-ಮಾಲಗಾರ ಸಮಾಜ ಪಾಲಿಸುತ್ತಾ ಶ್ರಮಿಸುತ್ತಿದೆ. ಧಾರ್ಮಿಕ, ಸಾಮಾಜಿಕ ಸೇವಾ ಕಾರ್ಯದಲ್ಲಿ ನಿರಂತರವಾಗಿ ತೊಡಗಿಕೊಂಡ ಕೃಷಿಕ ಕುಟುಂಬವಾಗಿದೆ. ಸಮಾಜ ಸದೃಢವಾಗಿ ಬೆಳೆಯಲು ಅಂಬೇಡ್ಕರ್‌ ತತ್ವದಂತೆ ಶಿಕ್ಷಣ, ಸಂಘಟನೆ, ಹೋರಾಟ ಅವಶ್ಯವಾಗಿದೆ. ನಿಮ್ಮ ಹಕ್ಕು ಪಡೆಯಲು ಹೋರಾಟ ಅನಿವಾರ್ಯವಾಗಿದೆ. ಅದಕ್ಕೆ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಶಿಕ್ಷಣವಂತರನ್ನಾಗಿಸಬೇಕು. ಶಿಕ್ಷಣದಿಂದ ಸಮಾಜ ಕಟ್ಟಿರುವ ಮಹಾತ್ಮ ಜ್ಯೋತಿಬಾ ಪುಲೆ, ಸಾವಿತ್ರಿಬಾಯಿ ಪುಲೆಯವರ ಶ್ರಮ ಅಪಾರವಾಗಿದೆ ಎಂದರು. ಸಾನ್ನಿಧ್ಯ ವಹಿಸಿದ ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ, ಗಣ್ಯರಾದ ಕಾಡಪ್ಪ ಮಾಳಿ, ಎಸ್.ಕೆ.ಬುಟಾಳಿ, ರವಿ ಕುರಬೇಟ, ಶಿವಶಂಕರ ಮುಕರಿ ಮಾತನಾಡಿದರು.

ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷೆ ಶಿವಲಿಲಾ ಬುಟಾಳೆ, ತಾಲೂಕು ಮಾಳಿ ಸಮಾಜದ ಅಧ್ಯಕ್ಷ ಗಿರೀಶ ದಿವಾನಮಳ, ಬಸವರಾಜ ಬುಟಾಳೆ, ಆನಂದ ಲಗಳಿ, ರವಿ ಬಡಕಂಬಿ, ಪ್ರಶಾoತ ತೊಡಕರ, ಮಹಾಂತೇಶ ಮಾಳಿ, ರಾಜು ಹಳ್ಳದಮಳ, ಮಹಾದೇವ ಹೊನ್ನಳಿ ಸೇರಿ ಮತ್ತಿತರರಿದ್ದರು.

PREV