ದಲಿತ ಸಂಘಟನೆಗಳೆಲ್ಲಾ ಒಂದಾದ್ರೆ ನೊಂದವರಿಗೆ ನ್ಯಾಯ: ಶಾಸಕ ಕೆ.ಎಸ್.ಬಸವಂತಪ್ಪ

KannadaprabhaNewsNetwork | Published : Feb 25, 2024 1:47 AM

ಸಾರಾಂಶ

ದಲಿತ ಸಂಘಟನೆಗಳೆಲ್ಲವೂ ಒಂದಾಗಿ, ಸಂಘಟಿತ ಚಳವಳಿ ಕಟ್ಟಿದರೆ ನೊಂದ ಸಮಾಜಕ್ಕೆ ನ್ಯಾಯ ಒದಗಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಡಿಎಸ್ಸೆಸ್‌ನ 50ನೇ ಸಂಸ್ಥಾಪನ ವರ್ಷಾಚರಣೆಯ ಇಂದಿನ ಸಮಾರಂಭದಲ್ಲೇ ಇಂತಹದ್ದೊಂದು ಆಲೋಚನೆ, ಪ್ರಯತ್ನಕ್ಕೆ ಮುಂದಾಗಿ. ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿಸಿದ ಉದ್ದೇಶಕ್ಕೆ ಪೂರಕವಾಗಿ ದಮನಿತರು, ಶೋಷಿತರ ಧ್ವನಿಯಾಗಿ, ಅಂತಹವರಿಗೆ ಸಾಮಾಜಿಕ ನ್ಯಾಯ ಕೊಡಿಸುವ ಕೆಲಸವನ್ನು ಡಿಎಸ್ಸೆಸ್ ಮಾಡುವಂತಾಗಲಿ.

ಕನ್ನಡಪ್ರಭ ವಾರ್ತೆ ದಾವಣಗೆರೆ

ದಲಿತ ಸಂಘಟನೆಗಳ ಬಣಗಳು, ಹೆಸರುಗಳನ್ನೆಲ್ಲಾ ಬದಿಗಿಟ್ಟು, ಒಗ್ಗೂಡಿ ಹೋರಾಡಿದರೆ ಮಾತ್ರ ಶೋಷಿತ ಜನರಿಗೆ ನ್ಯಾಯ ಒದಗಿಸಲು ಸಾಧ್ಯ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ತಿಳಿಸಿದರು.

ನಗರದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಶನಿವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಯ 50ನೇ ಸಂಸ್ಥಾಪನಾ ದಿನದ ಸಂಭ್ರಮೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ 50 ವರ್ಷಗಳ ಹಿಂದೆ ಭದ್ರಾವತಿಯಲ್ಲಿ ಪ್ರೊ.ಬಿ.ಕೃಷ್ಣಪ್ಪ ದಲಿತ ಸಂಘರ್ಷ ಸಮಿತಿ ಹುಟ್ಟು ಹಾಕಿ ಶೋಷಿಕರ ಪರ ಹೋರಾಟ ಆರಂಭಿಸಿದ್ದರು. ನಂತರ ಪ್ರೊ.ಬಿ.ಕೆ. ಅಗಲಿಕೆಯ ನಂತರ ಡಿಎಸ್ಸೆಸ್ ವಿವಿಧ ಬಣಗಳಾಗಿ, ವಿವಿಧ ಮುಖಂಡ ನೇತೃತ್ವದಲ್ಲಿ ಹರಿದು ಹಂಚಿ ಹೋಗಿದೆ. ಮತ್ತೆ ಆ ಸಂಘಟನೆಗಳು, ಸಮಾನ ಮನಸ್ಕರೆಲ್ಲರೂ ಒಂದಾಗುವ ಮೂಲಕ ಮತ್ತೆ ದಲಿತ ಸಂಘರ್ಷ ಸಮಿತಿಗೆ ಹಳೆಯ ಲಯ ತರಬೇಕು ಎಂದು ಹೇಳಿದರು.

ದಲಿತ ಸಂಘಟನೆಗಳೆಲ್ಲವೂ ಒಂದಾಗಿ, ಸಂಘಟಿತ ಚಳವಳಿ ಕಟ್ಟಿದರೆ ನೊಂದ ಸಮಾಜಕ್ಕೆ ನ್ಯಾಯ ಒದಗಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಡಿಎಸ್ಸೆಸ್‌ನ 50ನೇ ಸಂಸ್ಥಾಪನ ವರ್ಷಾಚರಣೆಯ ಇಂದಿನ ಸಮಾರಂಭದಲ್ಲೇ ಇಂತಹದ್ದೊಂದು ಆಲೋಚನೆ, ಪ್ರಯತ್ನಕ್ಕೆ ಮುಂದಾಗಿ. ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿಸಿದ ಉದ್ದೇಶಕ್ಕೆ ಪೂರಕವಾಗಿ ದಮನಿತರು, ಶೋಷಿತರ ಧ್ವನಿಯಾಗಿ, ಅಂತಹವರಿಗೆ ಸಾಮಾಜಿಕ ನ್ಯಾಯ ಕೊಡಿಸುವ ಕೆಲಸವನ್ನು ಡಿಎಸ್ಸೆಸ್ ಮಾಡುವಂತಾಗಲಿ ಎಂದು ಹೇಳಿದರು.

ಡಿಎಸ್ಸೆಸ್ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಮಾತನಾಡಿ, ಐದು ದಶಕಗಳ ಹಿಂದೆ ದಲಿತರು, ಬಡವರಿಗೆ ಇರುತ್ತಿದ್ದ ಹಲವಾರು ಸಾಮಾಜಿಕ ಬಹಿಷ್ಕಾರ, ಸಾರ್ವಜನಿಕ ಬಹಿಷ್ಕಾರದಿಂದ ಮುಕ್ತಿ ನೀಡಿದ ದಿನ ಇದಾಗಿದ್ದು, ಇದೇ ದಿನ ದಲಿತ ಸಂಘರ್ಷ ಸಮಿತಿ ಹುಟ್ಟು ಹಾಕಿದ ದಿನವಾಗಿದೆ. ರಾಜ್ಯದಲ್ಲಿ ಬಡವರು, ದಲಿತರು, ಶೋಷಿತರು ಸಾಮಾಜಿಕ ಪಿಡುಗಿನಿಂದ ಮುಕ್ತವಾಗಿ ಜೀವಿಸುತ್ತಿದ್ದರೆ, ಅದಕ್ಕೆ ಕಾರಣ ಪ್ರೊ.ಕೃಷ್ಣಪ್ಪ ಕಾರಣೀಕರ್ತರು ಎಂದರು.

ದಾವಿವಿ ಹಿರಿಯ ಪ್ರಾಧ್ಯಾಪಕ, ಹಿರಿಯ ಚಿಂತಕ ಡಾ.ಎಚ್.ವಿಶ್ವನಾಥ ಮಾತನಾಡಿದರು. ಡಿಎಸ್ಸೆಸ್ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ, ಡಿಎಸ್ಸೆಸ್ ಅಂಬೇಡ್ಕರ್ ವಾದದ ರಾಜ್ಯ ಸಂಚಾಲಕ ಎಚ್.ಮಲ್ಲೇಶ, ಜಿಎತಾಲೂಕು ಸಂಚಾಲಕ ಅಣಜಿ ಹನುಮಂತಪ್ಪ, ಮಹಿಳಾ ಸಂಚಾಲಕಿ ಕೆ.ವಿಜಯಲಕ್ಷ್ಮಿ, ಶಿವಮೊಗ್ಗ ಜಿಲ್ಲಾ ಸಂಚಾಲಕ ಎಂ.ಏಳುಕೋಟಿ, ಬುಳಸಾಗರ ಸಿದ್ದರಾಮಣ್ಣ, ಜಗಳೂರು ಸಂಚಾಲಕ ಕುಬೇಂದ್ರಪ್ಪ, ಜಿಲ್ಲಾ ಸಂಘಟನಾ ಸಂಚಾಲಕ ಪ್ರದೀಪ ಕೆಟಿಜೆ ನಗರ, ಆರ್.ಮಂಜುನಾಥ, ತಾಲೂಕು ಸಂಘಟನೆ ಸಂಚಾಲಕ ನಿಂಗಪ್ಪ ಅಣಜಿ, ಬೇತೂರು ಹನುಮಂತ, ನೀರ್ಥಡಿ ಮಂಜು ಇತರರಿದ್ದರು.

Share this article