ಅಂಬೇಡ್ಕರ್ ಅನುಸರಿಸಿದರೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ: ಶಾಸಕ ನಾರಾಯಣಸ್ವಾಮಿ

KannadaprabhaNewsNetwork | Published : Apr 15, 2025 12:55 AM

ಸಾರಾಂಶ

ಸಮಾಜದಲ್ಲಿ ಇಂದಿಗೂ ಅಂಬೇಡ್ಕರ್ ಎಂದರೆ ಅವರಾ ಬರೀ ಎಸ್‌ಸಿ ಸಮುದಾಯಕ್ಕೆ ಮಾತ್ರ ಸೀಮಿತರು ಎನ್ನುವ ಭಾವನೆ ಇದೆ, ಆದರೆ ವಾಸ್ತವವಾಗಿ ಅಂಬೇಡ್ಕರ್ ಎಲ್ಲಾ ಸಮುದಾಯಗಳಿಗೂ ಸಂವಿಧಾನದಲ್ಲಿ ಸಮಾನವಾಗಿ ಮೀಸಲಾತಿ ಕಲ್ಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಡಾ.ಬಿ.ಆರ್‌. ಅಂಬೇಡ್ಕರ್ ರವರ ಶಿಸ್ತು, ಬದ್ದತೆ, ಸಂಯಮವನ್ನು ಇಂದಿನ ಜನತೆ ಪಾಲಿಸಿದರೆ ಬಹುತೇಕ ಸಮಸ್ಯೆಗಳಿಗೆ ಪರಿಹಾರವನ್ನು ಕಾಣಬಹುದು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.ಪಟ್ಟಣದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಡಾ. ಅಂಬೇಡ್ಕರ್ ಅವರ 134ನೇ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಂಬೇಡ್ಕರ್ ಕೊನೆ ದಿನಗಳಲ್ಲಿ ಸಂವಿಧಾನವನ್ನು ರಚನೆ ಮಾಡದಿದ್ದಿದ್ದರೆ ಇಷ್ಟು ವರ್ಷಗಳ ಕಾಲ ಅವರು ನಮ್ಮೊಂದಿಗೆ ಜೀವಿಸುತ್ತಿದ್ದರು. ಆದರೆ ಅವರು ಸುಮ್ಮನೆ ಕೂರದೆ ಛಲಬಿಡದೆ ಇಡೀ ವಿಶ್ವವೇ ಮೆಚ್ಚುವಂತೆ ಸಂವಿಧಾನ ರಚಿಸಿದರು. ಆದರೆ ಸಮಾಜದಲ್ಲಿ ಇಂದಿಗೂ ಅಂಬೇಡ್ಕರ್ ಎಂದರೆ ಅವರಾ ಬರೀ ಎಸ್‌ಸಿ ಸಮುದಾಯಕ್ಕೆ ಮಾತ್ರ ಸೀಮಿತರು ಎನ್ನುವ ಭಾವನೆ ಇದೆ, ಆದರೆ ವಾಸ್ತವವಾಗಿ ಅಂಬೇಡ್ಕರ್ ಎಲ್ಲಾ ಸಮುದಾಯಗಳಿಗೂ ಸಂವಿಧಾನದಲ್ಲಿ ಸಮಾನವಾಗಿ ಮೀಸಲಾತಿ ಕಲ್ಪಿಸಿದ್ದಾರೆ ಎಂದರು.ಭಾರತದ ಬಿಟ್ಟು ಹೊರ ದೇಶಗಳಲ್ಲಿಯೂ ಯಾವುದಾದರೂ ಜಯಂತಿ ಆಚರಿಸುವರು ಎಂದರೆ ಅದು ಅಂಬೇಡ್ಕರ್ ಜಯಂತಿ ಮಾತ್ರ. ಇಂತಹ ಜಾತ್ಯತೀತ ನಾಯಕನನ್ನು ಒಂದು ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸುವುದರಲ್ಲಿ ಅರ್ಥವಿಲ್ಲ. ಪಟ್ಟಣದಲ್ಲಿ ಈ ಬಾರಿ ಅಂಬೇಡ್ಕರ್ ಜಯಂತಿಯಲ್ಲಿ ಎಲ್ಲಾ ಸಮುದಾಯಗಳು ಒಂದಾಗಿ ಭಾಗವಹಿಸುವ ಮೂಲಕ ಜಯಂತಿಗೆ ನಿಜವಾದ ಅರ್ಥ ನೀಡಿದ್ದಾರೆ. ನಾನು ಜಾತ್ಯತೀತ ನಾಯಕನಾಗಿ ಎಲ್ಲರ ಹಿತವನ್ನು ಕಾಯುವೆ. ಮುಂದಿನ ವರ್ಷ ಏ. 14ಕ್ಕೆ ಬೃಹತ್ ಅಂಬೇಡ್ಕರ್ ಭವನ ನಿರ್ಮಾಣ ಮಾಡುವೆ ಎಂದು ಭರವಸೆ ನೀಡಿದರು.ಇದೇ ವೇಳೆ ಹಲವು ಸಮಾಜ ಸೇವಕರನ್ನು ಸನ್ಮಾನಿಸಲಾಯಿತು. ಬಳಿಕ 134ನೇ ಅಂಬೇಡ್ಕರ್ ಜಯಂತಿಯ ಪ್ರಯುಕ್ತ ಕ್ಷೇತ್ರ ವಿವಿಧ ಗ್ರಾಮಗಳಿಂದ ಬಂದಿದ್ದ 134 ಸ್ತಬ್ದಚಿತ್ರಗಳ ಮೆರವಣಿಗೆ ಆಕರ್ಷಣಿಯವಾಗಿತ್ತು. ಅಲ್ಲದೆ ಶಾಸಕರೂ ಸಹ ಸ್ತಬ್ದಚಿತ್ರಗಳ ಮೆರವಣಿಗೆಯಲ್ಲಿ ಕೆಲಕಾಲ ಕುಣಿದು ರಂಜಿಸಿದರು.ಈ ವೇಳೆ ಪುರಸಭೆ ಅಧ್ಯಕ್ಷ ಗೋವಿಂದ, ತಹಸೀಲ್ದಾರ್ ವೆಂಕಟೇಶ್, ತಾಪಂ ಇಒ ರವಿಕುಮಾರ್, ಮುಖ್ಯಾಧಿಕಾರಿ ಸತ್ಯನಾರಾಯಣ, ಬಿಇಒ ಗುರುಮೂರ್ತಿ, ದಲಿತ ಮುಖಂಡರಾದ ಸೂಲಿಕುಂಟೆ ಆನಂದ್, ಹುಣಸನಹಳ್ಳಿ ವೆಂಕಟೇಶ್, ನಾರಾಯಣ್, ಕನ್ನಡ ಸಂಘದ ಅಧ್ಯಕ್ಷ ಪಲ್ಲವಿಮಣಿ, ನೌಕರ ಸಂಘದ ಅಧ್ಯಕ್ಷ ರವಿ, ಪುರಸಭೆ ಸದಸ್ಯರಾದ ಶಂಷುದ್ದಿನ್ ಬಾಬು, ರಾಕೇಶಗೌಡ, ಕುಂಬಾರಪಾಳ್ಯ ಮಂಜುನಾಥ್, ಎಲ್.ರಾಮಕೃಷ್ಣ ಇತರರು ಇದ್ದರು.

Share this article