ಕನ್ನಡಪ್ರಭವಾರ್ತೆ ಚಿತ್ರದುರ್ಗಸಾಂಕ್ರಾಮಿಕ ರೋಗಗಳ ಬೇಗ ಪತ್ತೆ ಹಚ್ಚಿದರೆ ಉಲ್ಬಣ ತಡೆ ಸಾಧ್ಯವಾಗುತ್ತದೆ. ಪ್ರಾಣಿ ಹಾಗೂ ಕೀಟ ಜನ್ಯ ರೋಗಗಳ ಹರಡುವಿಕೆಯನ್ನು ತಡೆಗಟ್ಟಲು ಜಿಲ್ಲಾ ಕಣ್ಗಾವಲು ಸಮಿತಿಯಿಂದ ಹೆಚ್ಚಿನ ನಿಗಾವಹಿಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಈ ವರ್ಷ 294 ಹಾವು ಕಡಿತದ ಪ್ರಕರಣಗಳು ವರದಿಯಾಗಿವೆ. ಇವುಗಳ ಪೈಕಿ ನಾಲ್ಕು ಪ್ರಕರಣಗಳಲ್ಲಿ ಸಾವು ಸಂಭವಿಸಿರುವುದು ದುರದೃಷ್ಟಕರ ಸಂಗತಿ. ಜನರಿಗೆ ಹಾಗೂ ಶಾಲಾ ಮಕ್ಕಳಿಗೆ ಹಾವು ಕಡಿತದಂತಹ ಸಂದರ್ಭದಲ್ಲಿ ನೀಡಬೇಕಾದ ಪ್ರಥಮ ಚಿಕಿತ್ಸೆ ಹಾಗೂ ತಕ್ಷಣವೇ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಾವು ಕಚ್ಚಿದವರನ್ನು ದಾಖಲಿಸುವ ಬಗ್ಗೆ ಜಾಗೃತಿ ಮೂಡಿಸಬೇಕು. ನಾಯಿ ಕಡಿತ ಪ್ರಕರಣದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹಂತದಲ್ಲಿಯೇ ಎಲ್ಲಾ ಲಸಿಕೆ ಹಾಗೂ ಚುಚ್ಚುಮದ್ದು ನೀಡಬೇಕು ಎಂದು ಕುಮಾರಸ್ವಾಮಿ ಹೇಳಿದರು.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶದಂತೆ ಜಿಲ್ಲಾ ಕಣ್ಗಾವಲು, ಜಿಲ್ಲಾ, ತಾಲೂಕು ಹಾಗೂ ಪ್ರಾಥಮಿಕ ಆರೋಗ್ಯ ತ್ವರಿತ ಪ್ರತಿಕ್ರಿಯಾ ತಂಡಗಳನ್ನು ರಚಿಸಿ ಆದೇಶ ಹೊರಡಿಸಲಾಗುವುದು. ಸಮಗ್ರ ರೋಗಗಳನ್ನು ತಡೆಗಟ್ಟುವಲ್ಲಿ ಜಿಲ್ಲಾ ಕಣ್ಗಾವಲು ಸಮಿತಿ ಹಾಗೂ ಆರೋಗ್ಯ ಇಲಾಖೆಗೆ ಸೇರಿದಂತೆ ಎಲ್ಲಾ ಇಲಾಖೆಗಳು ಸಹಕಾರ ನೀಡಬೇಕು ಎಂದರು.ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಚಂದ್ರಶೇಖರ್ ಕಂಬಾಳಿ ಮಠ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಮಂಜುನಾಥ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ಚಂದ್ರಕಾಂತ್ ನಾಗಸಮುದ್ರ, ಆರ್.ಸಿ.ಎಚ್ ಅಧಿಕಾರಿ ಡಾ. ಅಭಿನವ್, ತಾಲೂಕು ಆರೋಗ್ಯಾಧಿಕಾರಿ ಬಿ.ವಿ. ಗಿರೀಶ್ ಸೇರಿದಂತೆ ಮತ್ತಿತರರು ಇದ್ದರು.