ಮಳವಳ್ಳಿ: ಅಂಗನವಾಡಿ ಕೇಂದ್ರದ ಮೂಲಕ ತಾಯಿ ಹಾಗೂ ಮಗುವಿನ ಪೌಷ್ಠಿಕತೆ ವೃದ್ಧಿಸಲು ಸರ್ಕಾರದ ವತಿಯಿಂದ ನೀಡುವ ಆಹಾರ ಪದಾರ್ಥಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೆಶಕಿ ದೀಪಾ ತಿಳಿಸಿದರು.
ತಾಲೂಕಿನ ಅಂಚೇದೊಡ್ಡಿ ಆಂಜನೇಯ ಸಮುದಾಯ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ಸಂಯುಕ್ತಾಶ್ರಯದಲ್ಲಿ ಪೌಷ್ಠಿಕ ಆಹಾರ ಸಪ್ತಾಹ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.‘ಸಂಪೋಷಿತ ಕಿಶೋರಿ ಸಶಕ್ತನಾರಿ’ ಎಂಬ ಘೋಷಣಾ ವಾಕ್ಯದೊಂದಿಗೆ ಪೌಷ್ಠಿಕ ಆಹಾರ ಸಪ್ತಾಹವನ್ನು ಆಯೋಜಿಸಲಾಗುತ್ತಿದೆ. ಅಪೌಷ್ಠಿಕಾಂಶದಿಂದ ಬಳಲುತ್ತಿರುವ ತಾಯಿ ಮತ್ತು ಮಗುವಿನ ಸಾವಿನ ಸಂಖ್ಯೆ ಕ್ಷೀಣಿಸುವ ಉದ್ದೇಶದಿಂದ ಸರ್ಕಾರದಿಂದ ಶಿಶು ಅಭಿವೃದ್ಧಿ ಯೋಜನೆಯಡಿ ತಾಯಿ ಮತ್ತು ಮಗುವಿನ ಆರೈಕೆಗೆ ಮೊಟ್ಟೆ, ಕಾಳು ಸೇರಿ ಪರಿಷ್ಕರಿಸಿದ ಆಹಾರ ನೀಡಲಾಗುತ್ತಿದೆ ಎಂದರು.
ಮಗು ಹುಟ್ಟಿದ ನಂತರ ಆರು ತಿಂಗಳವರೆಗೆ ತಾಯಿಯ ಎದೆ ಹಾಲು ನೀಡುವುದು ಎಷ್ಟು ಮುಖ್ಯವೋ, ಅದೇ ರೀತಿ ಮುಂದಿನ ಹಂತಗಳಲ್ಲಿ ಮಗುವಿನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯಲ್ಲಿ ಪೌಷ್ಠಿಕಯುಕ್ತ ಆಹಾರ ನೀಡುವುದು ಅಷ್ಟೇ ಮುಖ್ಯ ಎಂದು ಹೇಳಿದರು.ಸ್ಥಳೀಯ ಆಹಾರಕ್ಕೆ ಪ್ರಾಮುಖ್ಯತೆ ನೀಡಬೇಕು, ಆಯಾ ಪ್ರದೇಶದ ಆಹಾರ, ಹಣ್ಣು, ಸೊಪ್ಪು, ಬೇಯಿಸಿದ ತರಕಾರಿಗಳನ್ನು ಮಕ್ಕಳಿಗೆ ಹೆಚ್ಚಾಗಿ ನೀಡಬೇಕು. ಮಗುವಿಗೆ ಪಚನಶಕ್ತಿ ಕಡಿಮೆ ಇರುವುದರಿಂದ ನಾರಿನಾಂಶವಿರುವ ಆಹಾರವನ್ನು ಹೆಚ್ಚಾಗಿ ನೀಡುವ ಜೊತೆಗೆ ಮೊಳೆಕೆ ಬರಿಸಿದ ಹಸಿರು ಬಟಾಣಿ, ಹೆಸರುಕಾಳು, ಹುರುಳಿ, ಕಾಳುಗಳನ್ನು ಚನ್ನಾಗಿ ಒಣಗಿಸಿ ಪುಡಿಮಾಡಿ ಅದನ್ನು ಹಾಲಿನಲ್ಲಿ ಬೆರಸಿ ಅದಕ್ಕೆ ತುಸು ಬೆಲ್ಲಹಾಕಿ ತಿನ್ನಿಸಬೇಕೆ ಹೊರತು ಅಂಗಡಿ ತಿಂಡಿ, ತಿನಿಸುಗಳಿಂದ ಮಕ್ಕಳನ್ನು ದೂರವಿಡಬೇಕೆಂದು ಸಲಹೆ ನೀಡಿದರು.
ತಾಲೂಕು ವೈದ್ಯಾಧಿಕಾರಿ ಡಾ. ವೀರಭದ್ರಪ್ಪ ಮಾತನಾಡಿ, ಮನೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನೀರು ನಿಲ್ಲದಂತೆ ಎಚ್ಚರ ವಹಿಸಬೇಕು, ಶುದ್ಧ ಹಾಗೂ ಬಿಸಿಯಾದ ಆಹಾರವನ್ನು ಸೇವಿಸಬೇಕು, ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು, ಜ್ವರ ಕಂಡು ಬಂದರೆ ತಕ್ಷಣದಲ್ಲಿಯೇ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕೆಂದು ತಿಳಿಸಿದರು.ಅಂಗನವಾಡಿ ಕಾರ್ಯಕರ್ತೆ ಜ್ಯೋತಿ ಮಾತನಾಡಿ, ಹೆಚ್ಚು ಪೌಷ್ಠಿಕಾಂಶವುಳ್ಳ ಆಹಾರ ಪದಾರ್ಥಗಳನ್ನು ಸಮರ್ಪಕವಾಗಿ ಬಳಸಬೇಕೆಂದು ತಿಳಿವಳಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಶಿಶುಅಭಿವೃದ್ಧಿ ಯೋಜನಾಧಿಕಾರಿ ಡಾ. ಸುರೇಶ್, ಅಂಗನವಾಡಿ ಕಾರ್ಯಕರ್ತೆಯರಾದ ನಾಗಮ್ಮ, ಜ್ಯೋತಿ, ಲತಮ್ಮ, ಮಹದೇವಮ್ಮ, ಸೇರಿ ಕಂದೇಗಾಲ ವೃತ್ತದ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.