ಮಾಜಿ ಸಚಿವ ಸಿ.ಟಿ.ರವಿ ವ್ಯಂಗ್ಯ । ಎಂಎಲ್‌ಸಿ ಚುನಾವಣೆ ರಾಜಕೀಯ ಸಂದೇಶ ನೀಡಬೇಕು । ಸುರೇಶ್ ಗೆಲುವು ಖಚಿತ
ಎಷ್ಟು ಚರ್ಚೆ ಮಾಡಿದರೂ ಈ ನಾಟಕಕ್ಕೆ ಪ್ರಶಸ್ತಿ ಕೊಡುವುದಾದರೆ ದೇಶದ ಎಲ್ಲ ಪ್ರಶಸ್ತಿ ಮೀರಿದ ಪ್ರಶಸ್ತಿಯನ್ನು ಮುಖ್ಯಮಂತ್ರಿಗಳಿಗೆ ಕೊಡಬೇಕು, ಅವರು ಆಸ್ಕರ್ ಪ್ರಶಸ್ತಿಗೆ ಯೋಗ್ಯರು ಎಂದು ಮಾಜಿ ಸಚಿವ ಸಿ.ಟಿ.ರವಿ ವ್ಯಂಗ್ಯವಾಡಿದರು.
ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ, ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ವಿಧಾನ ಪರಿಷತ್ ಉಪಚುನಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿದರು.ಶ್ರೀನಿವಾಸಪುರ ಮತ್ತು ಕೋಲಾರ ತಾಲೂಕಿನಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಅಭ್ಯರ್ಥಿ ಕೆ.ಎಂ. ಸುರೇಶ್ ಪರ ಪ್ರಚಾರ ಮಾಡುತ್ತಿದ್ದೇವೆ. ವಿದ್ಯಾವಂತ ಮತದಾರರು ಹೆಚ್ಚಿನ ಪ್ರಮಾಣದಲ್ಲಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ, ದಾಖಲೆ ಮತಗಳ ಅಂತರದಲ್ಲಿ ಸುರೇಶ್ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ಪ್ರಶ್ನಿಸಿ, ಚುನಾವಣಾ ಆಯೋಗದ ಕಾರ್ಯ ಸರಿ ಇಲ್ಲ ಎನ್ನುತ್ತೀರಿ, ಅದೇ ವ್ಯವಸ್ಥೆಯಲ್ಲಿ ನೀವು ಕರ್ನಾಟಕ, ಕೇರಳ, ತೆಲಂಗಾಣ, ಜಾರ್ಖಂಡ್‌ನಲ್ಲಿ ಎರಡನೇ ಬಾರಿ, ಹಿಮಾಚಲ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದಿದ್ದೀರಿ. ವ್ಯವಸ್ಥೆ ಸರಿ ಇಲ್ಲ ಎಂದಾದರೆ ಮೊದಲು ರಾಜೀನಾಮೆ ಕೊಟ್ಟು ನಂತರ ವ್ಯವಸ್ಥೆಯನ್ನು ಪ್ರಶ್ನಿಸಿ ಎಂದರು.
ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು ನಮೂನೆ-೭ ನೀಡಿದ ಆರೋಪಕ್ಕೆ ಉತ್ತರಿಸಿ, "ನಮೂನೆ-೭ ಕೊಟ್ಟ ತಕ್ಷಣ ಮತದಾರರ ಪಟ್ಟಿ ಅಳಿಕೆಯಾಗುತ್ತದೆಯೇ? ಪರಿಶೀಲನೆ ಮಾಡಬೇಕಾದ ಜವಾಬ್ದಾರಿ ಮತಗಟ್ಟೆ ಮಟ್ಟದ ಅಧಿಕಾರಿಗಳದ್ದು, ಅವರು ಪಕ್ಷದ ಕಾರ್ಯಕರ್ತರಲ್ಲ " ಎಂದರು.
ಮತಗಟ್ಟೆ ಪ್ರತಿನಿಧಿ-೨ ಅವರು ಅರ್ಜಿ ಕೊಟ್ಟಿದ್ದಾರೆ, ಮತಗಟ್ಟೆ ಮಟ್ಟದ ಅಧಿಕಾರಿಗಳೇ ನಿರ್ಧಾರ ಕೈಗೊಳ್ಳುವವರು, ಅವರು ಅರ್ಜಿಯನ್ನು ಸ್ವೀಕರಿಸಬಹುದು, ತಿರಸ್ಕರಿಸಬಹುದು, ಎರಡಕ್ಕೂ ಕಾರಣ ಇರಬೇಕು, ಅರ್ಜಿ ಕೊಡುವುದೇ ಅಪರಾಧವಲ್ಲ, ನಮೂನೆ-೭ ಕೊಡುವುದೇ ಅಪರಾಧವಲ್ಲ ಎಂದರು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಸಂಯಮದ ಪಾಠ ಹೇಳಿಲ್ಲ, ಸಿಕ್ಕಿಬೀಳದಂತೆ ತಿನ್ನಿ ಎಂದಿದ್ದಾರೆ, ಇದು ಅಕ್ರಮಕ್ಕೆ ಕುಮ್ಮಕ್ಕು ನೀಡಿದಂತಿದೆ ಎಂದು ಟೀಕಿಸಿದರು.