ನರಗುಂದ: ಪ್ರಸ್ತುತ ದಿನಗಳಲ್ಲಿ ಜನರು ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದಾರೆ. ಆದರೆ ಆ ಶಿಕ್ಷಣದ ಮೌಲ್ಯ ಚಾಣಕ್ಯನ ವಿಚಾರಗಳನ್ನು ಹೊಂದಿದ್ದರೆ, ಮಕ್ಕಳ ಹಾಗೂ ರಾಷ್ಟ್ರದ ಭವಿಷ್ಯ ಉಜ್ವಲವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಸುಕ್ಷೇತ್ರ ವಿರಕ್ತಮಠದ ಶಿವಕುಮಾರ ಶ್ರೀಗಳು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳು ಅಂಕಗಳನ್ನು ಗಳಿಸುತ್ತಿದ್ದಾರೆ. ಅಂಕದಷ್ಟೇ ಅವನಲ್ಲಿ ತಿಳಿವಳಿಕೆ, ವಿಚಾರವಂತಿಕೆ, ಗುರುವಿನಲ್ಲಿ ಭಕ್ತಿ ಮಾರ್ಗ ಇರಬೇಕಾಗುತ್ತದೆ. ಇವು ನಿಮ್ಮ ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತವೆ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಮಂಜಣ್ಣ ಬೆಳಗಾವಿ ಮಾತನಾಡಿ, ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಶಿಕ್ಷಕರ ಮತ್ತು ಪಾಲಕರ ಸಹಕಾರ ಬಹಳ ಮುಖ್ಯ ಎಂದರು.ಸಾಂಸ್ಕೃತಿಕ ಚಟುವಟಿಕೆ ಮತ್ತು ಕ್ರೀಡೆಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಹಾಗೂ ಬಹುಮಾನ ವಿತರಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಚಟುವಟಿಕೆ ನಡೆಯಿತು. ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ ಗೀತೆಗೆ ಮಕ್ಕಳು ಸಾಮೂಹಿಕ ನೃತ್ಯ ಮಾಡಿದರು.
ಹತ್ತನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಶ್ವೇತಾ ಬೂಸಪ್ಪನವರ ಹಾಗೂ ಆದರ್ಶ ವಿದ್ಯಾರ್ಥಿಗಳಾದ ಸುಮನ ಪೂಜಾರ, ತಬ್ಬಲಚಿ ಅವರನ್ನು ಸನ್ಮಾನಿಸಲಾಯಿತು.ಸಂಗಣ್ಣ ಕಳಸಾ, ಶ್ರೀಪಾದ ವಿಶ್ವೇಶ್ವರ, ನಿಂಗಪ್ಪ ನಾಗನೂರ, ಸಂಗಪ್ಪ ಪೂಜಾರ, ಮಹಾಂತೇಶ ಹಂಪಣ್ಣವರ, ಬಸವರಾಜ ಬೋಳಶೆಟ್ಟಿ, ಪ್ರಕಾಶ ದ್ಯಾವನಗೌಡ್ರ, ಚಂದ್ರಗೌಡ ಕಲ್ಲನಗೌಡ್ರ, ಕೆ.ಎನ್. ನೀಲಪ್ಪನವರ, ಬಿ.ಆರ್. ಅಧಿಕಾರಿ ಬಿ.ಎಫ್. ಮಜ್ಜಗಿ ಹಾಗೂ ವಿದ್ಯಾರ್ಥಿಗಳು ಇದ್ದರು.
ಮುಖ್ಯ ಶಿಕ್ಷಕ ಎಸ್.ಎಂ. ಕೆಂಚನಗೌಡ್ರ ಸ್ವಾಗತಿಸಿದರು. ಶಿಕ್ಷಕಿ ಲಕ್ಷ್ಮೀಬಾಯಿ ಕುಂಬಾರ ಕಾರ್ಯಕ್ರಮ ನಿರೂಪಿಸಿದರು.