ಯಲ್ಲಾಪುರ:
ದೇಶದ ಜನ ಇನ್ನೂ ಎಚ್ಚರಗೊಳ್ಳದೇ ಕಾಂಗ್ರೆಸ್ ಬೆಂಬಲಿಸಿದರೆ ಮುಂದಿನ ದಿನಗಳಲ್ಲಿ ದೇಶವೇ ವಿಭಜನೆಯಾದೀತು. ಕಾಂಗ್ರೆಸ್ ತುಷ್ಟೀಕರಣ ನೀತಿ ತೀರಾ ಅಪಾಯಕಾರಿ ಮಟ್ಟಕ್ಕೇರಿದೆ. ದೇಶದ್ರೋಹಿಗಳನ್ನು ಬಂಧಿಸಿ ಕ್ರಮಕೈಗೊಳ್ಳುವ ಬದಲಿಗೆ ಅವರನ್ನು ಪೋಷಿಸುತ್ತಿದೆ ಎಂದು ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೇಮನೆ ಹೇಳಿದರು.ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಯ್ಯದ್ ನಾಸೀರ್ ಹುಸೇನ್ ಗೆದ್ದ ವೇಳೆ ವಿಧಾನಸೌದದ ಆವರಣದಲ್ಲಿ ಪಾಕ್ ಪರ ಘೋಷಣೆ ಕೂಗಿರುವುದನ್ನು ಖಂಡಿಸಿ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಗುರುವಾರ ತಾಲೂಕು ಬಿಜೆಪಿ ಘಟಕ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿ, ರಾಜ್ಯಪಾಲರಿಗೆ, ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಸಲ್ಲಿಸಿ ಮಾತನಾಡಿದರು.ಪಾಕಿಸ್ತಾನ ಪರ ಘೋಷಣೆ ಕೂಗಿದರೂ ಅಂತಹವರ ಮೇಲೆ ಕ್ರಮಕೈಗೊಳ್ಳದೇ, ಮಾಧ್ಯಮದವರನ್ನು ಏಕವಚನದಲ್ಲಿ ಗದರಿಸುವ ನಾಸೀರ್‌ಖಾನ್ ನಡೆ ಕಾಂಗ್ರೆಸ್ ಸಂಸ್ಕೃತಿ ಪ್ರತಿಬಿಂಬಿಸುತ್ತದೆ. ಮಾಧ್ಯಮದವರು ಕರ್ನಾಟಕದಲ್ಲಿ ಎಚ್ಚರಿಕೆಯಿಂದಿರಬೇಕಾದ ಕಾಲಘಟ್ಟ ತಲುಪಿದೆ. ಮಾಧ್ಯಮದ ೩-೪ ವ್ಯಕ್ತಿಗಳ ಮೇಲೆ ಕಾಂಗ್ರೆಸ್ ಕಾನೂನು ಕ್ರಮಕೈಗೊಳ್ಳಲು ಮುಂದಾಗಿದೆ. ಮಾತೆತ್ತಿದರೆ ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸ್ ಭಾರತ ವಿರೋಧಿ ಮನಃಸ್ಥಿತಿಯ ಪಾಕಿಸ್ತಾನದ ಲೇಖಕಿಯನ್ನು ರಾಜ್ಯಕ್ಕೆ ಆಮಂತ್ರಿಸುತ್ತಿರುವುದು ಅದರ ನೀತಿಗೆ ನಿದರ್ಶನವಾಗಿದೆ ಎಂದು ಕಿಡಿಕಾರಿದರು.ಸುದೈವದಿಂದ ದೇಶ ನರೇಂದ್ರ ಮೋದಿ ಅವರ ಕೈಯಲ್ಲಿದೆ. ಮುಂದೇ ಕಾಂಗ್ರೆಸ್ ಕೈಗೆ ದೇಶದ ಆಡಳಿತ ಸಿಕ್ಕರೆ ಖಂಡಿತವಾಗಿಯೂ ಹಿಂದಿನಂತೆ ರಾಷ್ಟ್ರ ವಿಭಜನೆಯ ಕಾರ್ಯ ನಡೆಯುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಬೆಂಗಳೂರಿನ ಮಧ್ಯ ಸ್ಥಳದಲ್ಲಿರುವ ಚಾಮರಾಜಪೇಟೆಯ ಪಶುಸಂಗೋಪನಾ ಇಲಾಖೆಗೆ ಸೇರಿದ ೨ ಎಕರೆ ಸರ್ಕಾರಿ ಜಾಗವನ್ನು ನಿನ್ನೆ ವಕ್ಫೆಗೆ ಮಂಜೂರಿ ಮಾಡಿದೆ. ಅಲ್ಲದೇ ತೆರಿಗೆ ಹಣದಲ್ಲಿ ಸಮಾನವಾಗಿ ಎಲ್ಲರಿಗೂ ಮತ್ತು ಅಭಿವೃದ್ಧಿಯ ದೃಷ್ಟಿಕೋನದಲ್ಲಿ ಹಂಚಿಕೆ ಮಾಡದೇ ₹ ೧೦ ಸಾವಿರ ಕೋಟಿ ಮುಸ್ಲಿಂ ಸಮಾಜಕ್ಕೆ ನೀಡುವುದು ತೀರಾ ವಿಪರ್ಯಾಸ. ರಾಹುಲ್ ಗಾಂಧಿಯವರ ಹೇಳಿಕೆ, ಚೀನಾ ನಕಾಶೆ ಬಿಡುಗಡೆ ಸೇರಿದಂತೆ ಅನೇಕ ರೀತಿಯಲ್ಲಿ ದೇಶವನ್ನು ಭಯೋತ್ಪಾದಕತೆಗೆ ಬೆಂಬಲಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಸಾಗುತ್ತಿರುವುದರ ಕುರಿತು ದೇಶದ ಜನತೆ ಎಚ್ಚರಿಕೆಯಿಂದಿರಬೇಕು ಎಂದರು.ಹಿರಿಯ ಬಿಜೆಪಿ ಮುಖಂಡ ಪ್ರಮೋದ ಹೆಗಡೆ ಮಾತನಾಡಿ, ಪವಿತ್ರವಾದ ಶಾಸನ ಸಭೆಯಲ್ಲೇ ಪಾಕಿಸ್ತಾನದ ಪರ ಘೋಷಣೆ ಮಾಡಿದವರಿಗೆ ಸರ್ಕಾರ ಬೆಂಬಲಿಸುತ್ತದೆಯೆಂದಾದರೆ, ಭಾರತದ ಸ್ಥಿತಿ ಎಲ್ಲಿಗೆ ಬಂದಿದೆ? ಕಾಂಗ್ರೆಸ್ ಮುಂದೆ ಏನು ಮಾಡೀತು? ಎಂಬ ಆತಂಕ ಉಂಟಾಗಿದೆ. ಎಂದರು. ಜಿಲ್ಲಾ ಹಿಂದುಳಿದ ವರ್ಗದ ಅಧ್ಯಕ್ಷ ರಾಜೇಂದ್ರ ನಾಯ್ಕ, ತಾಲೂಕು ಬಿಜೆಪಿ ಅಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿದರು. ಈ ವೇಳೆ ಹಿರಿಯ ಮುಖಂಡರಾದ ರಾಮು ನಾಯ್ಕ, ಗೋಪಾಲಕೃಷ್ಣ ಗಾಂವ್ಕರ, ಗಣಪತಿ ಮುದ್ದೇಪಾಲ, ಗಣಪತಿ ಮಾನಿಗದ್ದೆ, ನಟರಾಜ ಗೌಡರ, ರವಿ ಕೈಟ್ಕರ, ರೇಖಾ ಹೆಗಡೆ, ಶಿವಲಿಂಗಯ್ಯ ಅಲ್ಲಯ್ಯನಮಠ ಉಪಸ್ಥಿತರಿದ್ದರು.