ರಾಮನಗರ: ಆಡಳಿತರೂಢ ಕಾಂಗ್ರೆಸ್ ನಲ್ಲಿ ಮೂಲ ಮತ್ತು ವಲಸಿಗ ನಾಯಕರ ನಡುವೆ ತಿಕ್ಕಾಟ ನಡೆಯುತ್ತಿದೆ. ಆ ಪಕ್ಷದಲ್ಲಿರುವ ದಲಿತ ನಾಯಕರಿಗೆ ಆತ್ಮಾಭಿಮಾನ ಮತ್ತು ಸ್ವಾಭಿಮಾನ ಇದ್ದರೆ ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷ ಸೇರ್ಪಡೆಯಾಗುವಂತೆ ಜೆಡಿಎಸ್ ರಾಜ್ಯ ವಕ್ತಾರ ನರಸಿಂಹಮೂರ್ತಿ ತಿಳಿಸಿದರು.
ಬೂಟಾಟಿಕೆ ಹೋರಾಟ ನಿಲ್ಲಿಸಿ :
ಕೇಂದ್ರ ಸರ್ಕಾರ ಮನರೇಗಾ ಯೋಜನೆ ಹೆಸರನ್ನು ವಿಬಿ ಜಿ ರಾಮ್ ಜಿ ಎಂದು ಬದಲಾವಣೆ ಮಾಡಿ ಪಾರದರ್ಶಕತೆಗೆ ಒತ್ತು ಕೊಟ್ಟಿದೆ. ಆದರೆ, ಗ್ರಾಮೀಣ ಜನರ ಬಗ್ಗೆ ಬದುಕಿನ ಬಗ್ಗೆ ಅನುಕಂಪ ಇಲ್ಲದ ಕಾಂಗ್ರೆಸ್ ಸರ್ಕಾರ ಬೂಟಾಟಿಕೆ ಹೋರಾಟ ನಡೆಸುತ್ತಿದೆ. ಅಲ್ಲದೆ, ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಿಗೂ ಮಹಾತ್ಮ ಗಾಂಧೀಜಿ ಹೆಸರಿಡಲು ಹೊರಟಿರುವುದು ಜನರ ಗಮನವನ್ನು ಬೇರೆಡೆ ಸೆಳೆಯುವ ಉದ್ದೇಶವಾಗಿದೆ. ಅಷ್ಟಕ್ಕೂ ಜವಾಹರ್ ರೋಜ್ಗಾರ್ ಯೋಜನೆಯನ್ನು ಮನರೇಗಾ ಎಂದು ಬದಲಾಯಿಸಿದ್ದು ಯಾರೆಂದು ಪ್ರಶ್ನಿಸಿದರು.ರಾಜ್ಯ ಸರ್ಕಾರದ 25 ಯೋಜನೆಗಳು, 55 ಶೈಕ್ಷಣಿಕ ಸಂಸ್ಥೆಗಳು ರಾಜೀವ್ ಗಾಂಧಿ, 27 ಯೋಜನೆಗಳು, 21 ಶೈಕ್ಷಣಿಕ ಸಂಸ್ಥೆಗಳು ಇಂದಿರಾ ಗಾಂಧಿ, 22 ಸಂಸ್ಥೆಗಳು ನೆಹರು ಹೆಸರಿನಲ್ಲಿವೆ. ಕ್ರೀಡಾಕೂಟಗಳು 23 ರಾಜೀವ್ ಗಾಂಧಿ , 4 ಇಂದಿರಾ ಗಾಂಧಿ, 2 ನೆಹರು ಹೆಸರಿನಲ್ಲಿವೆ ಎಂದು ಟೀಕಿಸಿದರು.
ಇನ್ನು ರಸ್ತೆ ಮತ್ತು ಕಟ್ಟಡಗಳಲ್ಲಿ ಗಾಂಧಿ ಕುಟುಂಬದ 74 ಹೆಸರುಗಳಿವೆ. 51 ಪ್ರಶಸ್ತಿಗಳು ನಕಲಿ ಗಾಂಧಿಗಳ ಹೆಸರಿನಲ್ಲಿವೆ.37 ಸಂಸ್ಥೆಗಳು ಮತ್ತು ಆಚರಣೆಗಳು ನೆಹರು ಮತ್ತು ಇಂದಿರಾ ಹೆಸರಿನಲ್ಲಿದೆ. 39 ವೈದ್ಯಕೀಯ ಸಂಸ್ಥೆಗಳು, 15 ಸ್ಕಾಲರ್ ಶಿಪ್ ಗಳು, 15 ರಾಷ್ಟ್ರೀಯ ಉದ್ಯಾನಗಳು, 5 ವಿಮಾನ ನಿಲ್ದಾಣ ಮತ್ತು ಬಂದರುಗಳು ನಕಲಿ ಗಾಂಧಿಗಳ ಹೆಸರಿನಲ್ಲಿವೆ. ಕಾಂಗ್ರೆಸ್ ಸರ್ಕಾರಕ್ಕೆ ಮಹಾತ್ಮರ ಮೇಲೆ ಅಷ್ಟೊಂದು ಗೌರವ ಇದ್ದರೆ ನಕಲಿ ಗಾಂಧಿಗಳ ಹೆಸರು ತೆಗೆದು ಗಾಂಧೀಜಿ ಹೆಸರಿಡಲಿ ಎಂದು ನರಸಿಂಹಮೂರ್ತಿ ಸವಾಲು ಹಾಕಿದರು.
ದಲಿತರ ಮೇಲೆ ದೌರ್ಜನ್ಯ ಹೆಚ್ಚಳ:ಜೆಡಿಎಸ್ ಯುವ ಮುಖಂಡ ಗೋವಿಂದರಾಜು ಮಾತನಾಡಿ, ದಲಿತರ ಅಭಿವೃದ್ಧಿ, ರಕ್ಷಣೆಯೇ ನಮ್ಮ ಗುರಿ ಎಂದು ಪ್ರಚಾರ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ಆದರೀಗ ದಲಿತರ ಮೇಲೆಯೇ ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ದೌರ್ಜನ್ಯ ಎಸಗುತ್ತಿದೆ. ರಾಜ್ಯದಲ್ಲಿ ದಲಿತ ಹೆಣ್ಣು ಮಕ್ಕಳ ಅಪಹರಣ, ಜಾತಿ ನಿಂದನೆ, ಮರ್ಯಾದೆಗೇಡು ಹತ್ಯೆಗಳು ಹೆಚ್ಚಾಗಿದೆ ಎಂದು ದೂರಿದರು.
ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ದಲಿತ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಧನ ಸಹಾಯ ಕಡಿತಗೊಳಿಸಲಾಗಿದೆ. ನಿಗಮ ಮಂಡಳಿಗಳಲ್ಲಿ ಸಾಲಸೌಲಭ್ಯ ನೀಡಲಾಗುತ್ತಿಲ್ಲ. ಎಸ್ಸಿಪಿ ಮತ್ತು ಟಿಎಸ್ಸಿಪಿಯ ಸಾವಿರಾರು ಕೋಟಿ ರು.ಗಳನ್ನು ಗ್ಯಾರಂಟಿ ಯೋಜನೆಗಳಿಕೆ ಬಳಕೆ ಮಾಡಿಕೊಂಡು ದಲಿತರಿಗೆ ಅನ್ಯಾಯ ಮಾಡುತ್ತಿದೆ ಎಂದು ಟೀಕಿಸಿದರು.ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ, ಮುಖಂಡರಾದ ಯೋಗೇಶ್, ಶಿವಣ್ಣ, ಕುಮಾರ್, ಭೖರವ, ರವಿ ಇದ್ದರು.
29ಕೆಆರ್ ಎಂಎನ್ 2.ಜೆಪಿಜಿಜೆಡಿಎಸ್ ರಾಜ್ಯ ವಕ್ತಾರ ನರಸಿಂಹಮೂರ್ತಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.