ಕನ್ನಡಪ್ರಭ ವಾರ್ತೆ ಮಧುಗಿರಿ
ಜಿಲ್ಲೆಯಲ್ಲಿ ದಲಿತರೊಬ್ಬರನ್ನು ತುಮುಲ್ ಒಕ್ಕೂಟಕ್ಕೆ ಅಧ್ಯಕ್ಷರನ್ನಾಗಿ ಉನ್ನತ ಸ್ಥಾನಕ್ಕೆ ಕೂರಿಸಿದರೆ ಜಿಲ್ಲೆಯ ಮಾಜಿ ಸಚಿವರಿಬ್ಬರಿಗೆ ಸಹಿಸಲು ಆಗುತ್ತಿಲ್ಲ ಎಂದು ವಿಪ ಸದಸ್ಯ ಆರ್.ರಾಜೇಂದ್ರ ಗುಬ್ಬಿ ಶಾಸಕ ಶ್ರೀನಿವಾಸ್ ಮತ್ತು ಮಾಜಿ ಸಚಿವ ಮಾಧುಸ್ವಾಮಿ ಅವರ ಹೆಸರು ಹೇಳದೆ ಟಾಂಗ್ ನೀಡಿದ್ದಾರೆ.ಪಟ್ಟಣದ ತುಮುಲ್ ಉಪ ಕಚೇರಿ ಸಭಾಂಗಣದಲ್ಲಿ ಪೂಜಾ ಕಾರ್ಯಕ್ರಮ ಮತ್ತು ನೂತನವಾಗಿ ಆಯ್ಕೆಯಾದ ನಿರ್ದೇಶಕ ಬಿ.ನಾಗೇಶ್ ಬಾಬು ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಂಭ ಉದ್ಘಾಟಿಸಿ ಮಾತನಾಡಿದರು.
ಪಾವಗಡ ಶಾಸಕ ವೆಂಕಟೇಶ್ ಅವರನ್ನು ಜಿಲ್ಲೆಯ ತುಮುಲ್ ಅಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ಇವರಿಗೇಕೆ ಇಷ್ಟೊಂದು ಉರಿ, ಅಸೂಹೆ, ಅಬ್ಬರ?. ಅಧಿಕಾರದ ಹಪಾಹಪಿ ಇಲ್ಲದಿದ್ದರೆ ಸುಮ್ಮನಿರಬೇಕು. ನಾನು ನಿಮ್ಮ ಪರ ಪ್ರಚಾರ ಮಾಡಿದ್ದೇನೆ ಎಂಬ ನೆನಪಿರಲಿ. ಇದನ್ನು ಇಲ್ಲಿಗೆ ನಿಲ್ಲಿಸಿ ಎಂದು ಗುಬ್ಬಿ ಶಾಸಕರಿಗೆ ಸಲಹೆ ನೀಡಿದ ರಾಜೇಂದ್ರ, ಸಹಕಾರ ಹಾಗೂ ಗೃಹ ಸಚಿವರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವುದು ಯಾವ ನ್ಯಾಯ? ಇದೆಲ್ಲಾ ಬೇಡ, ಜೆಸಿಎಂ ಬಗ್ಗೆ ನಮಗೂ ಮಾತನಾಡಲು ಬರುತ್ತದೆ. ತಾವು ಹಿರಿಯರು ಎಂಬ ಭಾವನೆ ನಮಗಿದೆ. ನೀವು ದಲಿತರಿಗೆ ಯಾವ ಅಧಿಕಾರ ನೀಡಿದ್ದೀರಾ ಹೇಳಿ ನೋಡೋಣ. ಕಾನೂನು ಪಂಡಿತರಾದ ನಿಮ್ಮನ್ನೇ ನಿಮ್ಮ ಕ್ಷೇತ್ರದ ಜನ ಸೋಲಿಸಿದ್ದು , ನಿಮ್ಮಿಂದ ನಾವು ರಾಜಕೀಯ ಪಾಠ ಕಲಿಯಬೇಕಿಲ್ಲ ಕುಟುಕಿದ್ದಾರೆ.ತುಮುಲ್ ನೂತನ ಅಧ್ಯಕ್ಷ ಬಿ.ನಾಗೇಶ್ ಬಾಬು ಅಭಿನಂದನೆ ಸ್ವೀಕರಿಸಿ ಮಾತನಾಡಿ, ಸಹಕಾರ ಸಚಿವ ಕೆ.ಎನ್.ರಾಜಣ್ಣ ಮತ್ತು ಎಂಎಲ್‌ಸಿ ಆರ್.ರಾಜೇಂದ್ರ ಅವರ ಆಶೀರ್ವಾದದಿಂದ ಈ ತುಮುಲ್ ಚುನಾವಣೆಯಲ್ಲಿ ನಾನು ಗೆದ್ದಿದ್ದೇನೆ. ಅಧಿಕ ಹಾಲು ಪೂರೈಕೆಯಾದ ಹಿನ್ನೆಲೆಯಲ್ಲಿ ಹಾಲಿನ ಬಟವಾಡೆ ನಿಂತಿತ್ತು. ಆದರೆ 2013ರಲ್ಲಿ ಹೊಸ ಆಡಳಿತ ಮಂಡಳಿ ಬಂದಾಗ 14 ಬಟವಾಡೆ ಬಾಕಿ ಇತ್ತು ಅದನ್ನು ನಾನು ಚುಕ್ತ ಮಾಡಿದ್ದೇನೆ ಮಾಜಿ ನಿರ್ದೇಶಕರು ಸುಳ್ಳು ಹೇಳುವುದನ್ನು ನಿಲ್ಲಿಸಬೇಕು ಎಂದರು.
ಸಮಾರಂಭದಲ್ಲಿ ಕೆಎಂಎಫ್ ನಿರ್ದೇಶಕ ಮೈದನಹಳ್ಳಿ ಕಾಂತರಾಜು, ತುಮುಲ್ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್, ಪಾವಗಡ ತುಮುಲ್ ನಿರ್ದೇಶಕ ಚಂದ್ರಶೇಖರರೆಡ್ಡಿ, ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಭೈರಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಪಿ.ಟಿ.ಗೋವಿಂದಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿನಾರಾಯಣರೆಡ್ಡಿ, ಗೋಪಾಲಯ್ಯ, ತಾಪಂ ಮಾಜಿ ಅಧ್ಯಕ್ಷೆ ಇಂದಿರಾ, ಕೆಪಿಸಿಸಿ ಮಹಿಳಾ ಕಾರ್ಯದರ್ಶಿ ಸುವರ್ಣಮ್ಮ, ಜಿಪಂ ಮಾಜಿ ಸದಸ್ಯ ಬಡವನಹಳ್ಳಿ ಚೌಡಪ್ಪ, ಎಆರ್‌ಸಿಎಸ್ ಸಣ್ಣಪ್ಪಯ್ಯ,ಮುಖಂಡರಾದ ತುಂಗೋಟಿ ರಾಮಣ್ಣ, ನಾಗರಾಜು, ಕಚೇರಿ ವ್ಯವಸ್ಥಾಪಕ ರಂಜಿತ್, ಸಹನಾ,ಮಂಜುನಾಥ್ ಸೇರಿದಂತೆ ಅನೇಕರಿದ್ದರು.