ಡೀಸೆಲ್‌ ದರ ಏರಿದ್ರೆ ಸಾರಿಗೆ ನಿಗಮಕ್ಕೆ ಹೊರೆ

KannadaprabhaNewsNetwork |  
Published : Mar 22, 2026, 01:15 AM IST
KSRTC

ಸಾರಾಂಶ

ಕೈಗಾರಿಕಾ ಡೀಸೆಲ್ ಬೆಲೆ ಶೇಕಡ 25ರಷ್ಟು ಹೆಚ್ಚಳವಾಗಿದೆ. ಇದರ ಪರಿಣಾಮ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಮೇಲೂ ಉಂಟಾದರೆ, ಪ್ರತಿದಿನ ನಿಗಮಗಳಿಗೆ ₹3.60 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ.

  ಬೆಂಗಳೂರು :  ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಇಂಧನ ಕೊರತೆಯ ಪರಿಣಾಮ ದೇಶದಲ್ಲಿ ಕೈಗಾರಿಕಾ ಡೀಸೆಲ್ ಬೆಲೆ ಶೇಕಡ 25ರಷ್ಟು ಹೆಚ್ಚಳವಾಗಿದೆ. ಇದರ ಪರಿಣಾಮ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಮೇಲೂ ಉಂಟಾದರೆ, ಪ್ರತಿದಿನ ನಿಗಮಗಳಿಗೆ ₹3.60 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ.

ಇಸ್ರೇಲ್‌-ಇರಾನ್‌ ಯುದ್ಧದ ಪರಿಣಾಮ ಜಾಗತಿಕ ಮಟ್ಟದಲ್ಲಿ ಇಂಧನ ಕೊರತೆ ಆರಂಭವಾಗಿದೆ. ಈಗಾಗಲೇ ಅಡುಗೆ ಅನಿಲ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಜನ ಪರದಾಡುವಂತಾಗಿದೆ. ಇದರ ಬೆನ್ನಲ್ಲೇ ಈಗ ಕೈಗಾರಿಕಾ ಪೂರೈಕೆ ಡೀಸೆಲ್‌ ಬೆಲೆಯನ್ನೂ ₹22 ವರೆಗೆ ಹೆಚ್ಚಿಸಲಾಗಿದೆ. ಈ ಡೀಸೆಲ್‌ ಅನ್ನು ಕೈಗಾರಿಕೆಗಳು, ವಿದ್ಯುತ್‌ ಉತ್ಪಾದನೆ, ಮ್ಯಾನುಫ್ಯಾಕ್ಚರಿಂಗ್‌ ಕ್ಷೇತ್ರಗಳ ಸಂಸ್ಥೆಗಳು ಸೇರಿ ಇನ್ನಿತರ ಸಂಸ್ಥೆಗಳಿಗೆ ಪೂರೈಸಲಾಗುತ್ತದೆ. ಆದರೆ, ರಾಜ್ಯದ ಸಾರಿಗೆ ನಿಗಮಗಳಿಗೆ ಪೂರೈಕೆ ಆಗುತ್ತಿರುವ ಸಗಟು ಡೀಸೆಲ್‌ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಸದ್ಯ ಪ್ರತಿ ಲೀ. ಡೀಸೆಲ್‌ ಅನ್ನು ₹87.11ಕ್ಕೆ ವಿತರಿಸಲಾಗುತ್ತಿದೆ. ಒಂದು ವೇಳೆ ಸಗಟು ಡೀಸೆಲ್‌ ಬೆಲೆಯನ್ನೂ ಕೈಗಾರಿಕೆಗಳಿಗೆ ಪೂರೈಸುವ ಡೀಸೆಲ್‌ನಷ್ಟೇ ಹೆಚ್ಚಳ ಮಾಡಿದರೆ ನಿಗಮಗಳಿಗೆ ಭಾರೀ ಆರ್ಥಿಕ ಹೊರೆ ಬೀಳಲಿದೆ.

ನಿತ್ಯ 16.38 ಲಕ್ಷ ಲೀ. ಬಳಕೆ:

ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಲ್ಲಿನ ಸುಮಾರು 23 ಸಾವಿರಕ್ಕೂ ಹೆಚ್ಚಿನ ಬಸ್‌ಗಳು ಪ್ರತಿನಿತ್ಯ ಸಾರಿಗೆ ಸೇವೆ ನೀಡುತ್ತಿವೆ. ಅವುಗಳಿಗೆ ನಿತ್ಯ 1,638 ಕಿಲೋ ಲೀಟರ್‌ ಅಂದರೆ 16.38 ಲಕ್ಷ ಲೀಟರ್‌ ಡೀಸೆಲ್‌ ಬಳಕೆಯಾಗುತ್ತದೆ. ಪ್ರತಿ ಲೀ. ₹87.11 ನಂತೆ ಪೆಟ್ರೋಲಿಯಂ ಸಂಸ್ಥೆಗಳು ನಿಗಮಗಳಿಗೆ ಡೀಸೆಲ್‌ ಪೂರೈಸುತ್ತಿವೆ. ಅದರ ಪ್ರಕಾರ ಸದ್ಯ ಪ್ರತಿದಿನ ₹14.26 ಕೋಟಿ ಮೊತ್ತದ ಡೀಸೆಲ್‌ ಬಳಕೆ ಮಾಡಲಾಗುತ್ತದೆ. ಒಂದು ವೇಳೆ ಪ್ರತಿ ಲೀ. ಡೀಸೆಲ್‌ ಮೇಲೆ ₹22 ಹೆಚ್ಚಳವಾದರೆ ಡೀಸೆಲ್‌ನ ಪ್ರತಿ ಲೀ. ಬೆಲೆ ₹109.11ಕ್ಕೆ ತಲುಪಲಿದೆ. ಅದರಿಂದಾಗಿ ಪ್ರತಿದಿನ ಡೀಸೆಲ್‌ಗೆ ಮಾಡಲಾಗುತ್ತಿರುವ ವೆಚ್ಚದ ಮೊತ್ತ ₹17.87 ಕೋಟಿಗೆ ತಲುಪಲಿದ್ದು, ₹3.60 ಕೋಟಿ ಹೆಚ್ಚುವರಿ ಖರ್ಚು ಮಾಡಬೇಕಾಗಲಿದೆ.

ನಿಗಮಗಳಿಗೆ ಸದ್ಯಕ್ಕಿಲ್ಲ ಸಮಸ್ಯೆ:

ಕೈಗಾರಿಕಾ ಪೂರೈಕೆ ಡೀಸೆಲ್‌ ಬೆಲೆ ಹೆಚ್ಚಳ ಮಾಡಿದ್ದರೂ ಪೆಟ್ರೋಲಿಯಂ ಉತ್ಪನ್ನ ಪೂರೈಕೆ ಸಂಸ್ಥೆಗಳು ಸಾರಿಗೆ ನಿಗಮಗಳಿಗೆ ಪೂರೈಕೆಯಾಗುತ್ತಿರುವ ಡೀಸೆಲ್‌ ಬೆಲೆಯಲ್ಲಿ ಈವರೆಗೆ ಯಾವುದೇ ಬದಲಾವಣೆ ಮಾಡಿಲ್ಲ. ಹೀಗಾಗಿ ಮಾಮೂಲಿಯಂತೆ ₹87.11ಕ್ಕೆ ಪ್ರತಿ ಲೀ. ಡೀಸೆಲ್‌ ಅನ್ನು ನಿಗಮಗಳಿಗೆ ಪೂರೈಸಲಾಗುತ್ತಿದ್ದು, ಸದ್ಯಕ್ಕೆ ನಿಗಮಗಳ ಮೇಲೆ ಯಾವುದೇ ಆರ್ಥಿಕ ಹೊರೆ ಬೀಳುತ್ತಿಲ್ಲ. ಒಂದು ವೇಳೆ ಮಧ್ಯಪ್ರಾಚ್ಯದಿಂದ ಇಂಧನ ಪೂರೈಕೆಯಲ್ಲಿ ಮತ್ತಷ್ಟು ವ್ಯತ್ಯಯವಾದರೆ ಸಾರಿಗೆ ನಿಗಮಗಳಿಗೆ ಪೂರೈಸುವ ಡೀಸೆಲ್‌ ಬೆಲೆಯನ್ನೂ ಹೆಚ್ಚಳ ಮಾಡುವ ಸಾಧ್ಯತೆಗಳಿವೆ. ಆಗ ನಿಗಮಗಳ ಆರ್ಥಿಕ ಸಂಕಷ್ಟ ಮತ್ತಷ್ಟು ಹೆಚ್ಚುವ ಸಾಧ್ಯತೆಗಳಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

2028ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ : ಡಿಕೆಶಿ
ದರ ಏರಿಕೆಯಿಂದ ರಾಜ್ಯಕ್ಕೆ ಲಾಭ : ಅಶೋಕ್‌