ರೈತರಿಗೆ ಸೌಲಭ್ಯ ನೀಡಿದರೆ ದೇಶದ ಅಭಿವೃದ್ಧಿ

KannadaprabhaNewsNetwork |  
Published : May 29, 2025, 12:44 AM IST
ಪೋಟೋ: 28ಎಸ್‌ಎಂಜಿಕೆಪಿ01ಶಿವಮೊಗ್ಗದ ನಗರದ ಎಪಿಎಂಸಿ ಪ್ರಾಂಗಣದಲ್ಲಿ ನಗರದ ಎಪಿಎಂಸಿ ಪ್ರಾಂಗಣದಲ್ಲಿ ನೂತನವಾಗಿ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣವನ್ನು ಬುಧವಾರ  ಜಿಲ್ಲಾ ಉಸ್ತವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು. | Kannada Prabha

ಸಾರಾಂಶ

ಶಿವಮೊಗ್ಗ: ನಮ್ಮ ದೇಶದ ಆರ್ಥಿಕತೆಯ ಬೆನ್ನೆಲುಬಾಗಿರುವ ರೈತರಿಗೆ ಉತ್ತಮ ಸಹಕಾರ ಮತ್ತು ಸೌಲಭ್ಯಗಳನ್ನು ನೀಡಿದಲ್ಲಿ ದೇಶದ ಅಭಿವೃದ್ಧಿ ಸಹ ಉತ್ತಮವಾಗಿ ಆಗಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಎಪಿಎಂಸಿ ರೈತರಿಗೆ ಸಹಕಾರಿಯಾಗಿದ್ದು ಉತ್ತಮ ವಹಿವಾಟು ಮೂಲಕ ಜಿಲ್ಲೆಗೆ ಕಿರೀಟಪ್ರಾಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಶಿವಮೊಗ್ಗ: ನಮ್ಮ ದೇಶದ ಆರ್ಥಿಕತೆಯ ಬೆನ್ನೆಲುಬಾಗಿರುವ ರೈತರಿಗೆ ಉತ್ತಮ ಸಹಕಾರ ಮತ್ತು ಸೌಲಭ್ಯಗಳನ್ನು ನೀಡಿದಲ್ಲಿ ದೇಶದ ಅಭಿವೃದ್ಧಿ ಸಹ ಉತ್ತಮವಾಗಿ ಆಗಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಎಪಿಎಂಸಿ ರೈತರಿಗೆ ಸಹಕಾರಿಯಾಗಿದ್ದು ಉತ್ತಮ ವಹಿವಾಟು ಮೂಲಕ ಜಿಲ್ಲೆಗೆ ಕಿರೀಟಪ್ರಾಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಕೃಷಿ ಮಾರಾಟ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ 2019-20ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಯಡಿ ಶಿವಮೊಗ್ಗ ನಗರದ ಎಪಿಎಂಸಿ ಪ್ರಾಂಗಣದಲ್ಲಿ ನೂತನವಾಗಿ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಶಿವಮೊಗ್ಗದ ಎಪಿಎಂಸಿ ರಾಜ್ಯದಲ್ಲೇ ಎರಡನೇ ಅತಿ ಹೆಚ್ಚು ವಹಿವಾಟು ನಡೆಸುವ ಕೇಂದ್ರವಾಗಿರುವುದು ಹೆಮ್ಮೆಯ ವಿಷಯ. ರೈತರನ್ನು ಯಾರೂ ಕಡೆಗಣಿಸಬಾರದು. ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು 35 ವರ್ಷಗಳ ಹಿಂದೆ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಯೋಜನೆ ನೀಡಿದಾಗ ಸಾಕಷ್ಟು ಟೀಕೆಗಳು ಬಂದವು. ಆದರೆ, ಇದೇ ಯೋಜನೆಯ ಫಲವಾಗಿ ಇಂದು ರೈತರು ಅಭಿವೃದ್ಧಿಯಾಗಿದ್ದು ಆರ್ಥಿಕತೆಗೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲೆ ಅತಿ ಹೆಚ್ಚು ಅಡಕೆ ಬೆಳೆಯುವ ಪ್ರದೇಶವಾಗಿದೆ. ಅಡಕೆ, ಶುಂಠಿ, ಅರಿಶಿನ, ಅನಾನಸ್ ಇತರೆ ಬೆಳೆಗೆ ಬೇಸಿಗೆಯಲ್ಲೂ ನೀರಿನ ಅವಶ್ಯಕತೆ ಇದ್ದು, ಉಚಿತ ಕರೆಂಟ್‌ನಿಂದ ರೈತರಿಗೆ ಬಹಳ ಅನುಕೂಲವಾಗಿದೆ. ರಾಜ್ಯ ಸರ್ಕಾರವು ಈ ಯೋಜನೆಗೆ 21 ಸಾವಿರ ಕೋಟಿ ರು. ಹಣವನ್ನು ರೈತರ ಪರವಾಗಿ ಪಾವತಿಸುತ್ತಿದೆ. ರೈತರಿಗೆ ಇದೊಂದು ಕೊಡುಗೆಯಾಗಿದ್ದು, ಈ ಸೌಲಭ್ಯ ಪಡೆದ ರೈತರು ಆರ್ಥಿಕತೆಗೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ ಎಂದರು.

ರೈತರ ಚಟುವಟಿಕೆಗಳಿಂದಾಗಿ ಎಪಿಎಂಸಿ, ಮ್ಯಾಮ್‌ಕೋಸ್, ಹಾಪ್‌ಕಾಮ್ಸ್ ಇತರೆ ಕೃಷಿ ಮತ್ತು ತೋಟಗಾರಿಕೆ ಮಾರುಕಟ್ಟೆಗಳಲ್ಲಿ ಉತ್ತಮ ವಹಿವಾಟು, ಆದಾಯ ಸಾಧ್ಯವಾಗುತ್ತಿದೆ. ಶಿವಮೊಗ್ಗ ಎಪಿಎಂಸಿಯಲ್ಲಿ 2475 ಕೋಟಿ ರು. ವ್ಯವಹಾರ ನಡೆಯುತ್ತಿದ್ದು, 250 ಕೋಟಿ ರು. ಜಿಎಸ್‌ಟಿ ಪಾವತಿ ಮಾಡುತ್ತಿದೆ. ರೈತರ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿ ಮಳಿಗೆಗಳ ಅವಶ್ಯಕತೆ ಇದ್ದು, ಹೀಗೆಯೇ ಅಭಿವೃದ್ಧಿ ಹೊಂದಲಿ ಎಂದು ಆಶಿಸಿದರು.

ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಶಿವಮೊಗ್ಗದ ಎಪಿಎಂಸಿ ರಾಜ್ಯದಲ್ಲೇ ಎರಡನೇ ಅತಿ ಹೆಚ್ಚು ವಹಿವಾಟು ನಡೆಸುವ ಮಾರುಕಟ್ಟೆಯಾಗಿದೆ. 1950ರಲ್ಲಿ ಸ್ಥಾಪನೆಯಾದ ಎಪಿಎಂಸಿ 102 ಎಕರೆ ಪ್ರದೇಶದಲ್ಲಿ ವಿವಿಧ ಕಟ್ಟಡಗಳನ್ನು ಹೊಂದಿದೆ ಎಂದು ತಿಳಿಸಿದರು.

ಪ್ರಸ್ತುತ ಎಪಿಎಂಸಿ ಪ್ರಾಂಗಣದಲ್ಲಿ 10 ಕೋಟಿ ರು. ವೆಚ್ಚದಲ್ಲಿ ನೂತನವಾಗಿ 28 ಮಳಿಗೆಗಗಳನ್ನು ನಿರ್ಮಿಸಲಾಗಿದ್ದು, ಈಗಾಗಲೇ ಹರಾಜು ಮೂಲಕ 23 ಮಳಿಗೆಗಳನ್ನು ವಿತರಣೆ ಮಾಡಲಾಗಿದೆ ಎಂದು ವಿವರಿಸಿದರು.

ಎಪಿಎಂಸಿ ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಮತ್ತು ಸೌಲಭ್ಯ ನೀಡುವ ಮೂಲಕ ರೈತರ ಬೆನ್ನೆಲುಬಾಗಿದೆ. ರೈತರಿಗೆ ಆನ್‌ಲೈನ್ ವಹಿವಾಟು ಮತ್ತು ಎಪಿಎಂಸಿ ಹೊರಗಡೆಯೂ ವ್ಯಾಪಾರ ಮಾಡಲು ಅವಕಾಶ ಮಾಡಿಕೊಟ್ಟಿದೆ ಎಂದ ಅವರು, ಇದೇ ನೂತನ ಕಟ್ಟಡದಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿ ಕೂಡ ಬರಲಿದ್ದು ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.

ಕರ್ನಾಟಕ ರಾಜ್ಯ ಭೋವಿ ನಿಗಮದ ಅಧ್ಯಕ್ಷ ಎಸ್‌.ರವಿಕುಮಾರ್ , ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಲೆಮಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ, ಹಾಪ್‌ಕಾಮ್ಸ್ ಅಧ್ಯಕ್ಷ ವಿಜಯಕುಮಾರ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ತಾಲೂಕು ಅಧ್ಯಕ್ಷ ಎಚ್.ಎಂ. ಮಧು, ಕೃಷಿ ವಿವಿ ನಿರ್ದೇಶಕ ಎಚ್.ಡಿ.ದೇವಿಕುಮಾರ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಎಪಿಎಂಸಿ ಕಾರ್ಯದರ್ಶಿ ಎಚ್‌.ವೈ.ಸತೀಶ್ ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ