ಕನ್ನಡಪ್ರಭ ವಾರ್ತೆ ಹಾಸನ
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಜಯವಾಣಿ ಕನ್ನಡ ದಿನಪತ್ರಿಕೆಯ ಜಿಲ್ಲಾ ವರದಿಗಾರರಾದ ರಮೇಶ್ ಹಂಡ್ರಂಗಿ ಮಾತನಾಡಿ, ಡಿಜಿಟಲ್ ಮಾಧ್ಯಮ ಇಂದು ವಿಸ್ತಾರವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಪ್ರತಿಭೆ ಇದ್ದವರಿಗೆ ಅವಕಾಶ ದೊರೆಯುತ್ತದೆ. ಬರವಣಿಗೆ ಕೌಶಲ್ಯವನ್ನು ಬಲಪಡಿಸಿಕೊಂಡರೆ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅಗಾಧವಾದ ಅವಕಾಶವಿದೆ ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ.ಎಂ.ಬಿ. ಇರ್ಷಾದ್ ಮಾತನಾಡಿ, ವೈದ್ಯರು ರೋಗಿಗಳಿಗೆ ಕಾಯಿಲೆ ಏನೆಂದು ಹೇಗೆ ಹೇಳುತ್ತಾರೆಯೋ, ಹಾಗೆ ಪತ್ರಕರ್ತ ಸಮಾಜದ ವೈದ್ಯನಿದ್ದಂತೆ. ಏಕೆಂದರೆ ಸಮಾಜದಲ್ಲಿ ಆಗುವ ಆಗುಹೋಗುಗಳನ್ನು ತಿದ್ದುವ ಕೆಲಸವನ್ನು ಪತ್ರಕರ್ತರು ಮಾಡುತ್ತಾರೆ. ಇವರ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ರಶ್ಮಿ, ವಿಭಾಗದ ವತಿಯಿಂದ ಹಲವಾರು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪತ್ರಿಕೋದ್ಯಮ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡವರಿಗೆ ಯಾವುದೇ ರೀತಿಯ ಹಿನ್ನಡೆಯಾಗುವುದಿಲ್ಲ ಎಂದು ಹೇಳುವುದರ ಮೂಲಕ ವಿಭಾಗದ ಪ್ರಾಮುಖ್ಯತೆಯನ್ನು ತಿಳಿಸಿದರು. ಪತ್ರಾಂಕಿತ ವ್ಯವಸ್ಥಾಪಕರಾದ ಕೆ.ಟಿ. ಸತ್ಯಮೂರ್ತಿ ಮಾತನಾಡಿ, ಪತ್ರಕರ್ತರಿಗೆ ಸಮಯಪ್ರಜ್ಞೆ, ಆಲಿಸುವ ಮನೋಭಾವಿದ್ದರೆ ಉತ್ತಮ ಪತ್ರಕರ್ತರಾಗಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಇದೇ ಸಂದರ್ಭದಲ್ಲಿ ವಿಭಾಗದ "ಕಲೆ-ಅಲೆ ಲ್ಯಾಬ್‌ಜರ್ನಲ್ " ಅನ್ನು ಗಣ್ಯರು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ಡಾ. ಭವ್ಯ ಎಚ್.ಸಿ, ಶೃತಿ ಕೆಎ, ಗಣಕವಿಜ್ಞಾನ ವಿಭಾಗದ ಉಪನ್ಯಾಸಕರಾದ ರೇಖಾ ಎಸ್, ಹಿಂದಿ ವಿಭಾಗದ ಉಪನ್ಯಾಸಕರಾದ ಮಾಲತಿ ಬಿ.ಆರ್, ಭೂಗೋಳಶಾಸ್ತ್ರ ವಿಭಾಗದ ಉಪನ್ಯಾಸಕರಾದ ಡಾ. ಸುಜಾತ, ಪಾರ್ವತಮ್ಮ ಅವರು ಹಾಜರಿದ್ದರು.
ವಿದ್ಯಾರ್ಥಿನಿ ಮನನ ಅವರ ಮನೋಜ್ಞ ನೃತ್ಯದಿಂದ ಕಾರ್ಯಕ್ರಮ ಪ್ರಾರಂಭವಾಯಿತು. ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ಬನುಮ ಅವರು ಪ್ರಾರ್ಥನೆ ಮಾಡಿದರು. ವಿದ್ಯಾರ್ಥಿ ಯಶ್ವಂತ್ ಕೆ.ಆರ್ ಎಲ್ಲರನ್ನು ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಚಂದನ್ ಎಚ್.ಎಸ್. ಮತ್ತು ಅಂಜು ವ್ಯಕ್ತಿ ಪರಿಚಯ ಮಾಡಿದರು. ವಿದ್ಯಾರ್ಥಿನಿ ಐಶ್ವರ್ಯ ಕಾರ್ಯಕ್ರಮ ನಿರೂಪಿಸಿದರೆ ಲಾವಣ್ಯ ವಂದಿಸಿದರು.