ರೈತರು ಒಗ್ಗಟ್ಟಾಗಿದ್ದರೆ ಜಗತ್ತಿನ ಯಾವ ಶಕ್ತಿಯೂ ತಡೆಯಲಾಗದು: ಕುಲರತ್ನಭೂಷಣ ಮುನಿಗಳು

KannadaprabhaNewsNetwork |  
Published : Nov 08, 2026, 03:00 AM IST
ಉಳುವವನು ಮುನಿಸಿಕೊಂಡರೇ ಜಗತ್ತು ಬೆತ್ತಲಾಗುವುದು : ಕುಲರತ್ನಭೂಷಣ ಮಹಾರಾಜರು. | Kannada Prabha

ಸಾರಾಂಶ

ರೈತರ ಏಳ್ಗೆಗಾಗಿ ಒಂದು ತಿಂಗಳಿನಿಂತ ಬೀದಿಯಲ್ಲಿ ನಿಂತು ಹೋರಾಟ ಮಾಡಿ ಕಬ್ಬಿಗೆ ₹೩೬೦೦ ಬೆಲೆ ನಿಗದಿಗೊಳಿಸುವಲ್ಲಿ ಯಶಸ್ವಿಯಾದ ಶಶಿಕಾಂತ ಗುರೂಜಿ ಹಾಗೂ ಚುನಪ್ಪ ಪೂಜೇರಿಯವರ ಕಾರ್ಯ ಶ್ಲಾಘನೀಯ ಎಂದು ಆಚಾರ್ಯರತ್ನ ೧೦೮ ಕುಲರತ್ನಭೂಷಣ ಮುನಿ ಮಹಾರಾಜರು ಹೇಳಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ರೈತರ ಏಳ್ಗೆಗಾಗಿ ಒಂದು ತಿಂಗಳಿನಿಂತ ಬೀದಿಯಲ್ಲಿ ನಿಂತು ಹೋರಾಟ ಮಾಡಿ ಕಬ್ಬಿಗೆ ₹೩೬೦೦ ಬೆಲೆ ನಿಗದಿಗೊಳಿಸುವಲ್ಲಿ ಯಶಸ್ವಿಯಾದ ಶಶಿಕಾಂತ ಗುರೂಜಿ ಹಾಗೂ ಚುನಪ್ಪ ಪೂಜೇರಿಯವರ ಕಾರ್ಯ ಶ್ಲಾಘನೀಯ. ರೈತರು ಒಗ್ಗಟ್ಟಾಗಿದ್ದರೆ ಜಗತ್ತಿನ ಯಾವ ಶಕ್ತಿಯೂ ನಿಮ್ಮನ್ನು ಅಲುಗಾಡಿಸಲು ಸಾಧ್ಯವಿಲ್ಲವೆಂಬುವುದಕ್ಕೆ ಕಬ್ಬು ಹೋರಾಟ ನಿದರ್ಶನವಾಗಿದ್ದು, ಅನ್ನದಾತರಿಗೆ ನ್ಯಾಯ ಒದಗಿಸುವ ಹೋರಾಟಕ್ಕೆ ಸದಾ ಆಶೀರ್ವದಿಸುವುದಾಗಿ ಆಚಾರ್ಯರತ್ನ ೧೦೮ ಕುಲರತ್ನಭೂಷಣ ಮುನಿ ಮಹಾರಾಜರು ಹೇಳಿದರು.ತಾಲೂಕಿನ ಹಳಿಂಗಳಿ ಗ್ರಾಮದ ಭದ್ರಗಿರಿಯಲ್ಲಿ ಆಯೋಜಿಸಿದ್ದ ರೈತ ನಾಯಕರ ಸತ್ಕಾರ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಆಳುವವರು ಮುನಿಸಿಕೊಂಡರೆ ಕೇವಲ ಕತ್ತಲಾಗಬಹುದು. ಆದರೆ ಊಳುವವನು ಮುನಿಸಿಕೊಂಡರೆ ಇಡೀ ಜಗತ್ತೆ ಬೆತ್ತಲಾಗುವುದು. ಜಗತ್ತನ್ನು ಸಲುಹುವ ಸಾಮರ್ಥ್ಯವುಳ್ಳ ರೈತ ತನ್ನ ಉಳಿವಿಗಾಗಿ ಬೀದಿಯಲ್ಲಿ ಮಲಗಿರುವುದು ತಲೆ ತಗ್ಗಿಸುವ ಸಂಗತಿ. ರೈತರು ಕೇವಲ ಒಂದು ಬೆಳೆಗೆ ಮಾತ್ರ ಅಂಟಿಕೊಳ್ಳದೇ ಬಹುಬೆಳೆಗಳನ್ನು ಬೆಳೆದು ಕೃಷಿಯಲ್ಲಿ ನವೀನ ಕೃಷಿ ತಂತ್ರಜ್ಞಾನ ಬೆಳೆಯಬೇಕೆಂದರು

ಶಶಿಕಾಂತ ಗುರೂಜಿ ಮಾತನಾಡಿ, ಹರ ಮುನಿದರೆ ಗುರು ಕಾಯಬಹುದು. ಆದರೆ ರೈತ ಮುನಿದರೆ ಈ ಜಗತ್ತನ್ನು ಯಾರಿಂದಲೂ ಕಾಯಲು ಅಸಾಧ್ಯ. ಅನ್ನದಾತರ ಬಗ್ಗೆ ಅಸಡ್ಡೆತನ ತೋರಿದವರಿಗೆ ತಕ್ಕ ಪಾಠವನ್ನು ಕಲಿಸಲು ಗುರ್ಲಾಪೂರ ವೇದಿಕೆ ಮುಖ್ಯ ಭೂಮಿಕೆಯಾಗಿ ಇಂದು ಕಬ್ಬಿಗೆ ೩೬೦೦ ಬೆಲೆ ಸಿಕ್ಕಿರುವುದು ನಮ್ಮೆಲ್ಲರ ಒಗ್ಗಟ್ಟಿನ ಪ್ರತಿಫಲವಾಗಿದೆ. ನಾವೆಲ್ಲ ಒಂದಾಗಿದ್ದರೆ ಜಗತ್ತಿನ ಯಾವ ಶಕ್ತಿಯೂ ನಮ್ಮನ್ನು ಅಲುಗಾಡಿಸಲು ಸಾಧ್ಯವಿಲ್ಲ. ಮುಂಬರುವ ದಿನಗಳಲ್ಲಿ ಕಬ್ಬಿಗೆ ರು.೬ ರಿಂದ ₹೭ ಸಾವಿರ ಬೆಲೆ ನಿಗದಿಯಾಗುವುದು ಶತಸಿದ್ಧ. ಈ ನಿಟ್ಟಿನಲ್ಲಿ ನಮ್ಮ ಹೋರಾಟ ನಿರಂತರವಾಗಿರುತ್ತದೆಂದು ಘೋಷಿಸಿದ ಅವರು, ಕೃಷಿ ಕಾಯಕದೆಡೆಗೆ ಯುವ ಪೀಳಿಗೆ ಆಕರ್ಷಿತರಾಗುವಂತೆ ಕರೆ ನೀಡಿದರು.

ಮುನಿಗಳನ್ನು ವೇದಿಕೆಗೆ ಹೊತ್ತು ತಂದ ಶಶಿಕಾಂತ ಗುರೂಜಿ :೧೮ ದಿನಗಳಿಂದ ಉಪವಾಸ ನಿರತ ಆಚಾರ್ಯ ಶ್ರೀಗಳ ದರ್ಶನ ಪಡೆದ ಶಶಿಕಾಂತ ಗುರೂಜಿ ಅವರನ್ನು ಹೊತ್ತು ವೇದಿಕೆಗೆ ಕರೆತಂದು ಭಕ್ತಿ ಸಮರ್ಪಿಸಿದರು.

ಇದೇ ವೇಳೆ ಶಶಿಕಾಂತ ಗುರೂಜಿ ಮತನಾಡಿ, ರೈತರಿಗೆ ಹೆಣ್ಣು ಕೊಡಲು ರೈತರೇ ಹಿಂದೇಟು ಹಾಕುವ ಮನಸ್ಥಿತಿಯಿಂದ ಹೊರಬಂದು ರೈತರಿಗೆ ಹೆಣ್ಣು ಕೊಟ್ಟು ಈ ಮಣ್ಣಿನ ಋಣ ತೀರಿಸಬೇಕೆಂದು ನಿವೇದಿಸಿಕೊಂಡರು.

ಉಪವಾಸ ತ್ಯಜಿಸಿದ ಆಚಾರ್ಯಶ್ರೀಗಳು : ಇದೇ ವೇಳೆ ತಮ್ಮ ಸುದೀರ್ಘ ೧೮ ದಿನಗಳ ಕಾಲ ಕೈಗೊಂಡ ಉಪವಾಸದ ಸಂಕಲ್ಪ ಈಡೇರಿದ್ದು ಶನಿವಾರದಿಂದ ಆಹಾರ ಸ್ವೀಕರಿಸುವುದಾಗಿ ತಿಳಿಸಿದರು.ಸಮಾರಂಭದಲ್ಲಿ ಶ್ರಾವಕ-ಶ್ರಾವಕಿಯರು, ರೈತರು ಉಪಸ್ಥಿತರಿದ್ದರು.

ನನ್ನ ಬದುಕಿನಲ್ಲಿ ನಾನು ಕಂಡ ಶ್ರೇಷ್ಠ ಸಂತರಲ್ಲಿ ಆಚಾರ್ಯ ಕುಲರತ್ನಭೂಷಣರು ಪರಮ ಶ್ರೇಷ್ಠರಾಗಿದ್ದು, ನಾವು ಕೈಗೊಂಡ ಎಲ್ಲ ಹೋರಾಟಗಳಿಗೆ ಅವರ ಆಶೀರ್ವಾದ ಶ್ರೀರಕ್ಷೆಯಾಗಿದೆ. ಅನ್ನದಾತರಿಗಾಗಿ ೧೮ ದಿನಗಳ ಕಾಲ ಆಹಾರ ತ್ಯಜಿಸಿದ ಈ ನಾಡಿನ ಏಕೈಕ ಸಂತ ನಮ್ಮ ಕುಲರತ್ನಭೂಷಣರು ನಮ್ಮ ರೈತ ಕುಲದ ಕಿರೀಟ.

ಶಶಿಕಾಂತ ಗುರೂಜಿ. ರೈತ ಧುರೀಣರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕವಿ ಹೃದಯದ ಡಾ.ಚೆನ್ನಬಸವ ಶ್ರೀಗಳು: ತೋಂಟದಾರ್ಯ ಶ್ರೀ
ಶಿರಗುಪ್ಪಿ ಕಾರ್ಖಾನೆಯಿಂದ ₹4,000 ದರ ಘೋಷಣೆ