)
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳ ವ್ಯಾಪ್ತಿಯಲ್ಲಿರುವ ಸಕ್ಕರೆ ಕಾರ್ಖಾನೆಗಳ ವೇ ಬ್ರಿಡ್ಜ್‌ಗಳನ್ನು ಪರಿಶೀಲಿಸಲು ಸಹಾಯಕ ನಿಯಂತ್ರಕರು ಹಾಗೂ ತನಿಖಾ ದಳಗಳನ್ನೊಳಗೊಂಡ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಅ.23ರಿಂದ ಕಬ್ಬು ಅರೆಯುವ ಹಂಗಾಮು ಮುಕ್ತಾಯವಾಗುವವರೆಗೆ ನಿಯಮಿತವಾಗಿ ತಪಾಸಣೆ ನಡೆಸಲಿವೆ.
ಕಾನೂನು ಮಾಪನಶಾಸ್ತ್ರ ನಿಯಂತ್ರಕ ಸಿ.ಎನ್. ಮಂಜುನಾಥ ಅ.22ರಂದು ಹೊರಡಿಸಿರುವ ಆದೇಶದನ್ವಯ ಕಾನೂನು ಮಾಪನಶಾಸ್ತ್ರ ಕಾಯ್ದೆ-2009ರ ಕಲಂ 14(3)ರ ಅಡಿಯಲ್ಲಿ ಅಧಿಕಾರ ನೀಡಲಾಗಿದೆ. ತಪಾಸಣೆ ಸಂದರ್ಭದಲ್ಲಿ ಸರ್ಕಾರದ ನಿಗದಿತ ಮಾದರಿ ಕಾರ್ಯಸೂಚಿ ಹಾಗೂ ವಿಧಿ-ವಿಧಾನಗಳನ್ನು ಅನುಸರಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ.ವೇ ಬ್ರಿಡ್ಜ್‌ಗಳು ಮತ್ತು ತೂಕ ಅಳತೆ ಸಾಧನಗಳಲ್ಲಿ ಯಾವುದೇ ಲೋಪ, ನಿಯಮ ಉಲ್ಲಂಘನೆ ಅಥವಾ ಅಕ್ರಮ ಕಂಡುಬಂದಲ್ಲಿ ಸಂಬಂಧಿಸಿದ ಸಕ್ಕರೆ ಕಾರ್ಖಾನೆಮಾಲೀಕರ ವಿರುದ್ಧ ನಿಯಮಾನುಸಾರ ಮೊಕದ್ದಮೆ ದಾಖಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ತಪಾಸಣೆ ಅವಧಿಯಲ್ಲಿ ದಾಖಲಾದ ಪ್ರಕರಣಗಳ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಸಂಬಂಧಿಸಿದ ಕ್ಷೇತ್ರವ್ಯಾಪ್ತಿಯ ಸಹಾಯಕ ನಿಯಂತ್ರಕರಿಗೆ ವಿವರಗಳನ್ನು ಹಸ್ತಾಂತರಿಸುವಂತೆ ಆದೇಶಿಸಲಾಗಿದೆ.
ಜಿಲ್ಲೆಯ 9 ಕಾರ್ಖಾನೆಗಳ ತಪಾಸಣೆ: ಕುಂದರಗಿಯ ಬಾಗಲಕೋಟೆ ಜಿಲ್ಲೆಯ ಜೆಮ್ ಶುಗರ್ಸ್ , ಸಮೀರವಾಡಿಯ ಗೋದಾವರಿ ಶುಗರ್ಸ್ , ಉತ್ತೂರು ಇಂಡಿಯನ್ ಕೇನ್ಪವರ್ಜ, ಹಿರೇಪಡಸಲಗಿಯ ಜಮಖಂಡಿ ಶುಗರ್, ಶಿರೂರದ ಮೇಲ್ ಟ್ರೊ ಶುಗರ್ಸ್, ಕಲ್ಲಾಪುರ ಎಂ.ಆರ್.ಎನ್. ಕೇನ್ ಪವರ್, ಮುಧೋಳ ನಿರಾಣಿ ಶುಗರ್ಸ್, ಸಿದ್ದಾಪುರದ ಪ್ರಭುಲಿಂಗೇಶ್ವರ ಶುಗರ್ಸ್ ಕೆರಕಲಮಟ್ಟಿಯ ಕೇದಾರನಾಥ ಶುಗರ್ಸ್ ಅಂಡ್ ಆಗ್ರೋ ಪ್ರಾಡಕ್ಟ್ ಲಿ.ಸೇರಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ವೇ ಬ್ರಿಡ್ಜ್‌ಗಳನ್ನು ತಪಾಸಣೆಗೊಳಪಡಿಸಲಾಗುತ್ತಿದೆ.