ಫಾರಂ-3 ನೀಡದಿದ್ದರೆ ಮತದಾನ ಬಹಿಷ್ಕಾರ

KannadaprabhaNewsNetwork |  
Published : Apr 24, 2024, 02:19 AM IST
23ಎಚ್‌ಪಿಟಿ1ಹೊಸಪೇಟೆಯ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಿವಜ್ಯೋತಿ ಬಡಾವಣೆ ಅಧ್ಯಕ್ಷ ಯು.ಆಂಜನೇಯಲು ಮಾತನಾಡಿದರು. ಲೋಗನಾಥನ್, ಓಂಕಾರ್, ಎ.ಎಂ.ಬಸವರಾಜ್ ಮತ್ತಿತರರಿದ್ದರು. | Kannada Prabha

ಸಾರಾಂಶ

ಹೊಸಪೇಟೆ ನಗರದ ಶಿವಜ್ಯೋತಿ ಬಡಾವಣೆಯಲ್ಲಿ ಒಂದು ಸಾವಿರದಿಂದ 1500 ನಿವೇಶನಗಳ ಲೇಔಟ್‌ಗೆ 2004ರಿಂದ 2007ರಲ್ಲಿ ಬಳ್ಳಾರಿ ಜಿಲ್ಲಾಧಿಕಾರಿಗಳಿಂದ ಎನ್.ಎ. ಆಗಿವೆ. 2020ರ ವರೆಗೆ 15 ವರ್ಷಗಳ ಕಾಲ ಫಾರಂ-3 ವಿತರಣೆ ಮಾಡಿದ್ದು, ಆ ಬಳಿಕ ಸರ್ಕಾರದ ಯಾವುದೇ ಆದೇಶ ಇಲ್ಲದಿದ್ದರೂ ಹೊಸಪೇಟೆ ನಗರಸಭೆ ಫಾರಂ-3 ನೀಡುವುದನ್ನು ತಡೆಹಿಡಿದಿದೆ.

ಕನ್ನಡಪ್ರಭ ವಾರ್ತೆ ಹೊಸಪೇಟೆ

ನಗರದ ಶಿವಜ್ಯೋತಿ ಬಡಾವಣೆ, ಕಿರಣ್ ಕೃಷ್ಣ ಬಡಾವಣೆ ಮತ್ತು ಎಂ.ಪಿ. ಪ್ರಕಾಶ ನಗರದ ಶಿಕ್ಷಕರ ಬಡಾವಣೆ ಹಾಗೂ ಸಂಗಮೇಶ್ವರ ಬಡಾವಣೆಗಳ ನಿವಾಸಿಗಳಿಗೆ ಫಾರಂ-3 ನೀಡದಿದ್ದರೆ ಮತದಾನ ಬಹಿಷ್ಕರಿಸಲಾಗುವುದು ಎಂದು ಶಿವಜ್ಯೋತಿ ಬಡಾವಣೆ ಅಧ್ಯಕ್ಷ ಯು. ಆಂಜನೇಯಲು ಎಚ್ಚರಿಕೆ ನೀಡಿದರು.

ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಶಿವಜ್ಯೋತಿ ಬಡಾವಣೆಯಲ್ಲಿ ಒಂದು ಸಾವಿರದಿಂದ 1500 ನಿವೇಶನಗಳ ಲೇಔಟ್‌ಗೆ 2004ರಿಂದ 2007ರಲ್ಲಿ ಬಳ್ಳಾರಿ ಜಿಲ್ಲಾಧಿಕಾರಿಗಳಿಂದ ಎನ್.ಎ. ಆಗಿವೆ. 2020ರ ವರೆಗೆ 15 ವರ್ಷಗಳ ಕಾಲ ಫಾರಂ-3 ವಿತರಣೆ ಮಾಡಿದ್ದು, ಆ ಬಳಿಕ ಸರ್ಕಾರದ ಯಾವುದೇ ಆದೇಶ ಇಲ್ಲದಿದ್ದರೂ ಹೊಸಪೇಟೆ ನಗರಸಭೆ ಫಾರಂ-3 ನೀಡುವುದನ್ನು ತಡೆಹಿಡಿದಿದೆ. ಕಳೆದ 2 ವರ್ಷಗಳಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದನೆ ಸಿಕ್ಕಿಲ್ಲ. ಫಾರಂ-3 ವಿತರಿಸಿದರೆ ಮಾತ್ರ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುತ್ತೇವೆ. ಇಲ್ಲದಿದ್ದರೆ ಮತದಾನ ಬಹಿಷ್ಕರಿಸಲಾಗುವುದು ಎಂದರು.

ಕೃತಕವಾಗಿ ನಿವೇಶನಗಳ ಅಭಾವ ಸೃಷ್ಟಿಸಿ, ದರ ಹೆಚ್ಚಿಸುವ ಸಲುವಾಗಿ ಈ ರೀತಿ ಮಾಡುತ್ತಿದ್ದು, ನಗರದಲ್ಲಿ ಸುಮಾರು ಐದು ಸಾವಿರ ಫಾರಂ-3 ವಿತರಣೆ ಬಾಕಿ ಇವೆ. ನಗರದ ಸುಮಾರು 38 ಬಡಾವಣೆಗಳಲ್ಲಿ ಈ ಸಮಸ್ಯೆ ಇದೆ. ಶಿವಜ್ಯೋತಿ ಬಡಾವಣೆಯ 2 ಸಾವಿರ ಮನೆಗಳಲ್ಲಿ ಒಬ್ಬರಿಗೂ ಫಾರಂ-3 ಕೊಟ್ಟಿಲ್ಲ. ಅಧಿಕಾರಿಗಳು ಕೆಲ ಬಡಾವಣೆಗಳಿಗೆ ಕೊಟ್ಟು, ಉಳಿದ ಬಡಾವಣೆಗಳ ಬಗ್ಗೆ ತಾರತಮ್ಯ ಮತ್ತು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

ದಾಖಲೆ ಇಲ್ಲದೆ ನಮಗೆ ಸರ್ಕಾರಿ ಸೌಲಭ್ಯ ಮತ್ತು ಮಕ್ಕಳ ಶಿಕ್ಷಣ ಸೇರಿ ಇತರೆ ಕಾರಣಗಳಿಗೆ ಬ್ಯಾಂಕ್ ಸಾಲ ಸೌಲಭ್ಯ ಪಡೆಯಲು ಆಗಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಬಡಾವಣೆಗಳ ನಿವಾಸಿಗಳು ಮತ್ತು ನಿವೇಶನದಾರರು ಅಭಿವೃದ್ಧಿ ಶುಲ್ಕ ಕಟ್ಟಲು ಸಿದ್ಧರಿದ್ದೇವೆ. ಅಭಿವೃದ್ಧಿ ಶುಲ್ಕ ಕಟ್ಟಿಸಿಕೊಂಡು ಫಾರಂ-3 ವಿತರಿಸಲು ಹಲವಾರು ಬಾರಿ ಮನವಿ ಮಾಡಿಕೊಳ್ಳಲಾಗಿದೆ. ಸುಮಾರು 15ರಿಂದ 20 ಸಾವಿರ ಮತದಾರರಿರುವ ಬಡಾವಣೆಗಳಿಗೆ ಫಾರಂ-3 ವಿತರಿಸಬೇಕು. ಇಲ್ಲದಿದ್ದರೆ ಮತದಾನ ಬಹಿಷ್ಕರಿಸಲಾಗುವುದು ಎಂದರು.

ಬಡಾವಣೆಗಳ ಮಹೇಶ್, ಲೋಗನಾಥನ್, ಓಂಕಾರ್, ಎ.ಎಂ. ಬಸವರಾಜ್, ಡಿ. ಆಂಜನೇಯ, ನಾರಾಯಣರಾವ್, ಶಿವಶಂಕರ್ ಮತ್ತಿತರರಿದ್ದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ