ಗಾಯತ್ರಿ ಮಂತ್ರ ಪಠಿಸದಿದ್ದರೆ ಬ್ರಾಹ್ಮಣ್ಯ ಉಳಿಯದು

KannadaprabhaNewsNetwork |  
Published : May 30, 2026, 02:00 AM IST
ಅಖಿಲ ಭಾರತ ಮಾಧ್ವ ಮಹಾ ಮಂಡಳ ವಿದ್ಯಾರ್ಥಿ ನಿಲಯ(ಎಬಿಎಂಎಂ)ದ ಷಷ್ಟಿಪೂರ್ತಿ ಮಹೋತ್ಸವ ಹಾಗೂ ನವೀಕೃತ ಕೊಠಡಿಗಳನ್ನು ಶ್ರೀಗಳು ಉದ್ಘಾಟಿಸಿದರು. | Kannada Prabha

ಸಾರಾಂಶ

ಹಿಂದೂ ಧರ್ಮದ ಪವಿತ್ರ ಪ್ರಾರ್ಥನೆಯಾದ ಗಾಯತ್ರಿ ಮಂತ್ರ ಪಠಿಸುವುದೇ ಕಡಿಮೆಯಾಗುತ್ತಿದೆ. ಈ ಮಂತ್ರ ಪಠಿಸದಿದ್ದರೆ ನಾವು ಬ್ರಾಹ್ಮಣರಾಗಿ ಉಳಿಯುವುದಿಲ್ಲ.

ಹುಬ್ಬಳ್ಳಿ:

ಬ್ರಾಹ್ಮಣ ಸಮಾಜ ಬಾಂಧವರು ಇಂದು ಹಲವು ಕಾರಣಗಳಿಂದ ತಮ್ಮ ಆಚರಣೆ, ಸಂಸ್ಕೃತಿಯನ್ನು ಬಿಡುತ್ತಿರುವುದು ಆತಂಕಕಾರಿ ಬೆಳವಣಿಗೆ. ನಮ್ಮ ಧರ್ಮ, ಆಚಾರ, ವಿಚಾರಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಹೇಳಿದರು.

ಇಲ್ಲಿನ ವಿದ್ಯಾನಗರದಲ್ಲಿರುವ ಅಖಿಲ ಭಾರತ ಮಾಧ್ವ ಮಹಾ ಮಂಡಳ ವಿದ್ಯಾರ್ಥಿ ನಿಲಯ(ಎಬಿಎಂಎಂ)ದ ಷಷ್ಟಿಪೂರ್ತಿ ಮಹೋತ್ಸವ ಹಾಗೂ ನವೀಕೃತ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದೂ ಧರ್ಮದ ಪವಿತ್ರ ಪ್ರಾರ್ಥನೆಯಾದ ಗಾಯತ್ರಿ ಮಂತ್ರ ಪಠಿಸುವುದೇ ಕಡಿಮೆಯಾಗುತ್ತಿದೆ. ಈ ಮಂತ್ರ ಪಠಿಸದಿದ್ದರೆ ನಾವು ಬ್ರಾಹ್ಮಣರಾಗಿ ಉಳಿಯುವುದಿಲ್ಲ ಎಂದರು.

ಈ ವಿದ್ಯಾರ್ಥಿ ನಿಲಯದಲ್ಲಿ ಆಶ್ರಯ ಪಡೆದು ಕಲಿತ ಸಾವಿರಾರು ಮಕ್ಕಳು ಇಂದು ಹಲವು ರಂಗಗಳಲ್ಲಿ ದೊಡ್ಡ ಹುದ್ದೆ ಅಲಂಕರಿಸಿದ್ದಾರೆ. ಅಂತಹವರು ಈ ಸಂಸ್ಥೆಗೆ ಆರ್ಥಿಕ, ಭೌತಿಕವಾಗಿ ನೆರವಾಗುತ್ತಿದ್ದಾರೆ. ಸಜ್ಜನರಲ್ಲಿ ದಾನ, ಒಳ್ಳೆಯ ಮಾತುಗಳನ್ನು ಕೇಳಬಹುದು. ಸಾವಿರಾರು ದಾನಿಗಳಿಂದ ಇಂತಹ ಸಂಸ್ಥೆಗಳು ಮುಂದುವರಿಯಲು ಸಾಧ್ಯ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಮಂತ್ರಾಲಯದ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಆಶೀರ್ವಚನ ನೀಡಿ, ಈ ವಿದ್ಯಾರ್ಥಿ ನಿಲಯವು ಉತ್ತರ ಕರ್ನಾಟಕದ ಹೆಮ್ಮೆ. ಹಿಂದೂ ವಿದ್ಯಾರ್ಥಿಗಳು ತಮ್ಮ ಧರ್ಮ ಉಳಿಸಿಕೊಂಡು ವಿದ್ಯಾರ್ಜನೆ ಮಾಡುವಂತಹ ವಿದ್ಯಾರ್ಥಿ ನಿಲಯಗಳು ಈ ಭಾಗದಲ್ಲಿ ಇರಲಿಲ್ಲ. ಇದನ್ನು ಮನಗೊಂಡು ಈ ವಿದ್ಯಾರ್ಥಿ ನಿಲಯ ಸ್ಥಾಪಿಸಲಾಗಿದೆ. ವಿಪ್ರ ಸಮಾಜದ ವಿದ್ಯಾರ್ಥಿಗಳಿಗೆ ಇಂತಹ ಸೌಲಭ್ಯಗಳಿಲ್ಲದ ಸಮಯದಲ್ಲಿಯೇ ಈ ಸಂಸ್ಥೆ ಜನ್ಮ ತಾಳುವ ಮೂಲಕ ಹಿಂದೂ ಧರ್ಮದ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. ಮಾಧ್ವ ಮಹಾಮಂಡಳ ಇಲ್ಲದಿದ್ದರೆ ವಿವಿಧ ಮಠಗಳು ಭಿನ್ನವಾಗಿ ಇರುತ್ತಿದ್ದವು. ಆದರೆ, ಇಂತಹ ಎಲ್ಲ ಮಠಗಳನ್ನು ಒಂದೇ ವೇದಿಕೆಗೆ ತಂದ ಕೀರ್ತಿ ಈ ಮಹಾಮಂಡಳಕ್ಕೆ ಸಲ್ಲುತ್ತದೆ ಎಂದರು.ಅನಂತಪದ್ಮನಾಭ ಐತಾಳ ಪ್ರಾಸ್ತಾವಿಕ ಮಾತನಾಡಿ, ಇಲ್ಲಿ ಕಡಿಮೆ ವೆಚ್ಚದಲ್ಲಿ ವಿದ್ಯಾರ್ಥಿಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. 8 ಕೊಠಡಿಗಳೊಂದಿಗೆ ಆರಂಭವಾಗಿರುವ ಈ ಸಂಸ್ಥೆ ಇಂದು 70 ಕೊಠಡಿಗಳು ನಿರ್ಮಾಣವಾಗಿದೆ. ದಾನಿಗಳ ನೆರವಿನಿಂದ ವ್ಯವಸ್ಥಿತವಾಗಿ ವಿದ್ಯಾರ್ಥಿನಿಲಯ ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಪ್ರಸ್ತುತ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ರಘುಪತಿ ತಂತ್ರಿ ದಂಪತಿ ಹಾಗೂ ವಿದ್ಯಾರ್ಥಿ ನಿಲಯಕ್ಕೆ ಶ್ರಮಿಸಿದರಿಗೆ ಶ್ರೀಗಳಿಂದ ಗೌರವಿಸಲಾಯಿತು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದರು. ಈ ವೇಳೆ ಶ್ರೀಕಾಂತ ಕೆಮ್ತೂರು, ಡಾ. ವೆಂಕಟರಮಣ, ಡಾ. ಅನಿಲ, ದಯಾನಂದ ರಾವ್, ಡಾ. ನರಹರಿ ವಾಳ್ವೇಕರ ಸೇರಿದಂತೆ ಹಲವರಿದ್ದರು.

ಶ್ರೀಗಳ ಮೆರವಣಿಗೆ...

ಕಾರ್ಯಕ್ರಮದ ಪೂರ್ವದಲ್ಲಿ ವಿದ್ಯಾನಗರದ ಹಳೇ ಇನ್‌ಕಂ ಟ್ಯಾಕ್ಸ್‌ ಕಚೇರಿ ರಸ್ತೆಯ ಮಾರುತಿ ಮಂದಿರದಿಂದ ಅಖಿಲ ಭಾರತ ಮಾಧ್ವ ಮಹಾ ಮಂಡಳ ವಿದ್ಯಾರ್ಥಿ ನಿಲಯದ ವರೆಗೆ ಉಭಯ ಶ್ರೀಗಳನ್ನು ಸಾರೋಟದಲ್ಲಿ ಕೂರಿಸಿ ವಿವಿಧ ವಾದ್ಯಮೇಳಗಳೊಂದಿಗೆ ಅದ್ಧೂರಿ ಮೆರವಣಿಗೆ ಮಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆಗಾಲದಲ್ಲಿ ಪ್ರಾಣಹಾನಿ ತಡೆಗೆ ಮುನ್ನಚ್ಚರಿಕೆ ವಹಿಸಿ
ಸಚಿವ ಸ್ಥಾನಕ್ಕಾಗಿ ದೆಹಲಿಯಲ್ಲಿ ಬೀಡುಬಿಟ್ಟ ಕೊಪ್ಪಳ ಜಿಲ್ಲೆಯ ಶಾಸಕರು