ಕನಿಷ್ಠ ವೇತನ ಕರಡು ಅಧಿಸೂಚನೆಗೆ ವಿರೋಧ

KannadaprabhaNewsNetwork |  
Published : May 30, 2026, 01:45 AM IST
ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಶುಕ್ರವಾರ ಉದ್ದಿಮೆದಾರರ, ವಿವಿಧ ಕೈಗಾರಿಕಾ ಸಂಘಟನೆಗಳ ಪ್ರತಿನಿಧಿಗಳ ಹಾಗೂ ವ್ಯಾಪಾರಸ್ಥರ ವಿಶೇಷ ಸಭೆ ಹಮ್ಮಿಕೊಳ್ಳಲಾಯಿತು. | Kannada Prabha

ಸಾರಾಂಶ

ಕನಿಷ್ಠ ವೇತನ ಹೆಚ್ಚಳವು ವಿಶೇಷವಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ಹುಬ್ಬಳ್ಳಿ:

2026-27ನೇ ಸಾಲಿನ ಕನಿಷ್ಠ ವೇತನ ಕರಡು ಅಧಿಸೂಚನೆ ಕುರಿತು ಶುಕ್ರವಾರ ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಉದ್ದಿಮೆದಾರರ, ವಿವಿಧ ಕೈಗಾರಿಕಾ ಸಂಘಟನೆಗಳ ಪ್ರತಿನಿಧಿಗಳ ಹಾಗೂ ವ್ಯಾಪಾರಸ್ಥರ ವಿಶೇಷ ಸಭೆ ಜರುಗಿತು. ಈ ವೇಳೆ ಸರ್ಕಾದ ಕರಡು ಅಧಿಸೂಚನೆಗೆ ವಿರೋಧ ವ್ಯಕ್ತಪಡಿಸಲಾಯಿತು. ಸರ್ವರ ಅಭಿಪ್ರಾಯ ಸಂಗ್ರಹಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಉಪಸ್ಥಿತರಿದ್ದ ಉದ್ಯಮಿಗಳು, ವ್ಯಾಪಾರಸ್ಥರು ಹಾಗೂ ಕೈಗಾರಿಕಾ ಸಂಘಟನೆಗಳ ಪ್ರತಿನಿಧಿಗಳು ಪ್ರಸ್ತುತ ಪ್ರಸ್ತಾಪಿಸಲಾಗಿರುವ ಕನಿಷ್ಠ ವೇತನ ಹೆಚ್ಚಳವು ವಿಶೇಷವಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ವಿಶೇಷವಾಗಿ ನವೋದ್ಯಮಿಗಳು, ಹೊಸದಾಗಿ ಕೈಗಾರಿಕೆ ಆರಂಭಿಸಿರುವ ಉದ್ಯಮಿಗಳು ಹಾಗೂ ಸಣ್ಣ ಉದ್ದಿಮೆಗಳು ಈಗಾಗಲೇ ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ, ವಿದ್ಯುತ್ ದರ ಏರಿಕೆ, ಬ್ಯಾಂಕ್ ಬಡ್ಡಿ ದರ, ಕಚ್ಚಾ ವಸ್ತುಗಳ ಬೆಲೆ ಏರಿಕೆ ಹಾಗೂ ಮಾರುಕಟ್ಟೆಯ ಸ್ಪರ್ಧಾತ್ಮಕ ಪರಿಸ್ಥಿತಿಯಿಂದ ಸಂಕಷ್ಟ ಎದುರಿಸುತ್ತಿದ್ದು, ಈ ಹಂತದಲ್ಲಿ ಕನಿಷ್ಠ ವೇತನದಲ್ಲಿ ಅತಿಯಾದ ಏರಿಕೆ ಮಾಡುವುದು ಉದ್ಯಮಗಳ ನಿರ್ವಹಣೆಗೆ ಹೆಚ್ಚುವರಿ ಹೊರೆ ತರಲಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಇದಲ್ಲದೆ, ಕನಿಷ್ಠ ವೇತನದ ಗಣನೀಯ ಏರಿಕೆಯಿಂದ ಅನೇಕ ಕಾರ್ಮಿಕರು ನಿಗದಿತ ವೇತನ ಮಿತಿ ಮೀರಿ ನೌಕರರ ರಾಜ್ಯ ವಿಮಾ ಯೋಜನೆ ವ್ಯಾಪ್ತಿಯಿಂದ ಹೊರಬರುವ ಸಾಧ್ಯತೆ ಇದೆ. ಇದರಿಂದ ಕಾರ್ಮಿಕರು ಹಾಗೂ ಅವರ ಕುಟುಂಬಗಳು ಈಗ ಪಡೆಯುತ್ತಿರುವ ವೈದ್ಯಕೀಯ ಸೌಲಭ್ಯಗಳಿಂದ ವಂಚಿತರಾಗುವ ಆತಂಕವಿದೆ. ಪರಿಣಾಮವಾಗಿ, ಆರೋಗ್ಯ ಮತ್ತು ವೈದ್ಯಕೀಯ ವೆಚ್ಚವನ್ನು ವೈಯಕ್ತಿಕವಾಗಿ ಭರಿಸಬೇಕಾದ ಹೊರೆ ಕಾರ್ಮಿಕರ ಮೇಲೆಯೇ ಬೀಳಲಿದೆ ಎಂದು ಅಭಿಪ್ರಾಯ ಕೇಳಿಬಂದಿತು.

ಸಭೆಯಲ್ಲಿ ಪಾಲ್ಗೊಂಡ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಸರ್ಕಾರವು ಕೈಗಾರಿಕೆಗಳ, ಉದ್ಯೋಗದಾತರ ಹಾಗೂ ಕಾರ್ಮಿಕರ ಹಿತಾಸಕ್ತಿಯನ್ನು ಸಮತೋಲನದಲ್ಲಿಟ್ಟು ಪುನರ್ ಪರಿಶೀಲನೆ ನಡೆಸಬೇಕೆಂದು ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಪ್ರಸ್ತುತ ಕರಡು ಅಧಿಸೂಚನೆಯನ್ನು ಹಿಂಪಡೆದು, ಉದ್ದಿಮೆದಾರರು ಹಾಗೂ ವ್ಯಾಪಾರಸ್ಥರೊಂದಿಗೆ ಸಮಾಲೋಚನೆ ನಡೆಸಿ ಪುನಃ ಪರಿಷ್ಕೃತ ಪ್ರಸ್ತಾವನೆ ತರಬೇಕೆಂದು ಸಭೆ ಒತ್ತಾಯಿಸಿತು.

ಈ ವೇಳೆ ಸಂಸ್ಥೆಯ ಅಧ್ಯಕ್ಷ ಜಿ.ಕೆ. ಆದಪ್ಪಗೌಡರ, ಉಪಾಧ್ಯಕ್ಷ ಸಿದ್ದೇಶ್ವರ ಕಮ್ಮಾರ, ವೀರಣ್ಣ ಕಲ್ಲೂರ, ಮಾಜಿ ಅಧ್ಯಕ್ಷ ವಿನಯ ಜವಳಿ, ಹೊಸಪೇಟೆಯ ಅಶ್ವಿನ ಕೋತಂಬ್ರಿ, ತಾರಿಹಾಳ ಇಂಡಸ್ಟ್ರೀಯಲ್‌ನ ವಿಜಯ ಭಾರತಿ, ವರ್ತಕ ಸಂಘದ ಅಧ್ಯಕ್ಷ ರಾಜಕಿರಣ ಮೆಣಸಿನಕಾಯಿ, ಸದಸ್ಯ ಅಶೋಕ ಗಡಾದ, ವಿವಿಧ ಕೈಗಾರಿಕಾ ಸಂಘಟನೆಗಳ ಪದಾಧಿಕಾರಿಗಳು, ವ್ಯಾಪಾರಸ್ಥರು ಹಾಗೂ ಉದ್ದಿಮೆದಾರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನುಷ್ಯನ ಸಂಸ್ಕಾರ ತಿದ್ದಿ ತೀಡಲು ಪುಸ್ತಕ ಸಹಕಾರಿ: ಮ.ನಿ.ಪ್ರ. ಮಹಾಂತ ಸ್ವಾಮೀಜಿ
ಶಿಕ್ಷಕರಿಗೆ ಫೇಸ್‌, ಲೊಕೇಶನ್‌ ಹಾಜರಾತಿ ಕಡ್ಡಾಯ!