ಕನ್ನಡಪ್ರಭ ವಾರ್ತೆ ತಿಪಟೂರು
ಪ್ರಪಂಚದ ಸೃಷ್ಠಿಗೆ ದೈವಿ ಶಕ್ತಿಯೇ ಪ್ರಮುಖ ಕಾರಣವಾಗಿದ್ದು ಪ್ರತಿಯೊಂದೂ ಆಗುಹೋಗುಗಳು ಅವಳ ಇಚ್ಚೆಯಂತೆ ನಡೆಯುತ್ತಿದ್ದು ಪ್ರತಿಯೊಬ್ಬರೂ ಆಕೆಯನ್ನು ಸ್ಮರಿಸುವ ಮೂಲಕ ನಿತ್ಯದ ಕಾಯಕ ಮಾಡಬೇಕಲ್ಲದೆ ಜೀವನದಲ್ಲಿ ಧರ್ಮ, ಶ್ರದ್ದೆ, ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡು ನಡೆಯುವ ಮೂಲಕ ಜೀವನ ಕಟ್ಟಿಕೊಳ್ಳಬೇಕೆಂದು ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.ವಿಜಯದಶಮಿ ಪ್ರಯುಕ್ತ ಏರ್ಪಡಿಸಿದ್ದ ತಾಲೂಕಿನ ಸುಕ್ಷೇತ್ರ ದಸರಿಘಟ್ಟ ಶ್ರೀ ಆದಿಚುಂಚನಗಿರಿ ಶಾಖಾಮಠದ ಶ್ರೀ ಚೌಡೇಶ್ವರಿ ದೇವಿಯವರ ಮುಳ್ಳುಗದ್ದಿಗೆ ಉತ್ಸವದಲ್ಲಿ ಭಾಗವಹಿಸಿದ್ದ ಅವರು ಚೌಡೇಶ್ವರಿ ಹಾಗೂ ಕರಿಯಮ್ಮ ದೇವಿಯವರಿಗೆ ಕುಂಕುಮಾರ್ಚನೆ ಹಾಗೂ ಮಹಾಮಂಗಳಾರತಿ ನೆರವೇರಿಸಿ ಆಶೀರ್ವಚನ ನೀಡಿದರು. ಜೀವನದಲ್ಲಿ ಕಷ್ಟ ಸುಖಗಳು ಬರುತ್ತವೆ. ಬಂದ ಕಷ್ಟಗಳು ನಿವಾರಣೆಯಾಗಲು ಹಾಗೂ ಅವುಗಳನ್ನು ಮೆಟ್ಟಿ ನಿಲ್ಲುವಂತ ಶಕ್ತಿ ನೀಡುವವಳೇ ತಾಯಿ ಚೌಡೇಶ್ವರಿದೇವಿಯಾಗಿದ್ದು, ಆಕೆಯ ಸ್ಮರಣೆಯ ಮೂಲಕ ನಡೆಯುವ ಪವಾಡಗಳಿಂದ ಎಲ್ಲಾ ಕಷ್ಟಗಳು ಕರಗುತ್ತವೆ. ಹಾಗಾಗಿ ಎಲ್ಲರಲ್ಲೂ ದೈವೀಭಕ್ತಿ, ನಂಬಿಕೆ ಅಗತ್ಯ. ಸುಖ ಹಾಗೂ ದುಃಖಗಳು ಬಂದಾಗ ತಾಯಿಯ ಸ್ಮರಣೆ ಮಾಡಬೇಕು. ಮನುಷ್ಯನಾದವನು ಧರ್ಮದಾನಗಳಿಂದ ಬದುಕಬೇಕು. ವಿಜ್ಞಾನ ಎಷ್ಟೇ ಮುಂದುವರೆದರೂ ಜ್ಞಾನವೆಂಬುದು ಮಸುಕಾಗಿದೆ. ಪ್ರಕೃತಿಯ ಮುಂದೆ ಮನುಷ್ಯ ಕ್ಷಣಿಕನಾಗಿದ್ದಾನೆ. ಅಂತಃಕರಣ ಶುದ್ಧಿಗೊಂಡರೆ ಮತ್ತಷ್ಟು ಶಕ್ತಿ ಪಡೆಯಬಹುದು. ಪ್ರತಿಯೊಂದು ಮನೆಯಲ್ಲೂ ಹೆಣ್ಣುಮಕ್ಕಳು ಸಂತೋಷವಾಗಿದ್ದರೆ ಆ ಮನೆಯಲ್ಲಿ ಸದಾ ಕಾಲ ಸಂತೋಷ, ಸುಖ, ಅಭಿವೃದ್ಧಿ ತುಂಬಿ ತುಳುಕುತ್ತಿರುತ್ತದೆ ಎಂದು ತಿಳಿಸಿದರು.
ಮೈಸೂರಿನ ಆದಿಚುಂಚನಗಿರಿ ಶಾಖಾಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಆಶೀರ್ವಚನ ನೀಡಿ ದುಷ್ಟಶಕ್ತಿ ನಿವಾರಿಸಲು ಹಾಗೂ ಶಿಷ್ಟರನ್ನು ರಕ್ಷಿಸಲು ಜಗನ್ಮಾತೆಯು ಅವತರಿಸಿದ ದಿನವಾಗಿದೆ. ಮನುಷ್ಯನಾದವನು ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳನ್ನು ತೊರೆದು ಬದುಕು ಕಟ್ಟಿಕೊಂಡಾಗ ಜೀವನ ಸುಗಮವಾಗಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಹಾಸನದ ಆದಿಚುಂಚನಗಿರಿ ಶಾಖಾಮಠದ ಶಂಭುನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಸಮಾರಂಭದಲ್ಲಿ ಆದಿಚುಂಚನಗಿರಿ ಶ್ರೀಮಠದ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ದಸರೀಘಟ್ಟ ಶಾಖಾಮಠದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ, ಹುಳಿಮಾವಿನ ಶಾಖಾಮಠದ ಸೌಜನ್ಯನಾಥ ಸ್ವಾಮೀಜಿ, ಚಿಕ್ಕಬಳ್ಳಾಪುರದ ಶ್ರೀ ಮಂಗಳನಾಥ ಸ್ವಾಮೀಜಿ, ರಾಣಿಬೆನ್ನೂರಿನ ಪ್ರಭುಲಿಂಗನಾಥ ಸ್ವಾಮೀಜಿ, ರಾಜಾಯೋಗಾನಂದನಾಥ ಸ್ವಾಮೀಜಿ, ಶ್ರೀ ಟ್ರಸ್ಟಿಗಳಾದ ರವಿಸಿದ್ದಪ್ಪ, ಡಾ. ಜಿತೇಂದ್ರಕುಮಾರ್ ಸೇರಿದಂತೆ ಸಹಸ್ರಾರು ಸಂಖ್ಯೆಯ ಭಕ್ತಾದಿಗಳು, ಗ್ರಾಮಸ್ಥರು ಭಾಗವಹಿಸಿದ್ದರು. ಮುಳ್ಳು ಗದ್ದುಗೆ ವಿಶೇಷ : ಸುಮಾರು ೬-೭ ಅಡಿಯಷ್ಟು ಉದ್ದ-ಅಗಲದ ಗಟ್ಟಿ ಕಾರೆಮುಳ್ಳಿನ ಗಿಡಗಳನ್ನು ರಾಶಿ ಹಾಕಲಾಗುತ್ತದೆ. ಈ ಮುಳ್ಳಿನ ರಾಶಿಯ ಮೇಲೆ ಶ್ರೀ ಚೌಡೇಶ್ವರಿ ದೇವಿಯವರ ಉತ್ಸವ ಮೂರ್ತಿಯನ್ನು ಭಕ್ತರು ಹೊತ್ತುಕೊಂಡ ಅತ್ಯಂತ ಶ್ರದ್ಧಾಭಕ್ತಿಯಿಂದ ಸರಾಗವಾಗಿ ಮುಳ್ಳಿನ ರಾಶಿಯನ್ನು ತುಳಿದುಕೊಂಡು ಹತ್ತುತ್ತಾ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಮೂರ‍್ನಾಲ್ಕು ಬಾರಿಹತ್ತಿ ಭಕ್ತಿಯಿಂದ ನಡೆಯುತ್ತಾರೆ. ಇದರ ಜೊತೆಗೆ ಹರಕೆ ಮಾಡಿಕೊಂಡ ಮಕ್ಕಳಿಂದ ವಯೋವೃದ್ದರಾದಿಯಾಗಿ ದೇವಿಯ ಹಿಂದೆ ನಡೆದುಕೊಂಡು ಹೋಗುವ ಮೂಲಕ ತಮ್ಮ ಹರಕೆ ತೀರಿಸಿ ಧನ್ಯತಾಭಾವ ಮೆರೆಯುತ್ತಾರೆ.