ಕನ್ನಡಪ್ರಭ ವಾರ್ತೆ ಪಾಂಡವಪುರ
ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಶಿಕ್ಷಕರು ಹೆಚ್ಚಿನ ಆಸಕ್ತಿ ವಹಿಸಬೇಕು. ಸರ್ಕಾರಿ ಶಾಲೆ ಅಭಿವೃದ್ಧಿ ಹೊಂದಿದರೆ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.ತಾಲೂಕಿನ ಚಲುವರಸನಕೊಪ್ಪಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಜ್ರ ಮಹೋತ್ಸವ (75ರ ಸಂಭ್ರಮ)ದಲ್ಲಿ ಭಾಗವಹಿಸಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಮಕ್ಕಳು ವಿವಿಧ ವಿಷಯಗಳನ್ನು ಕಲಿಯಲು ಹೆಚ್ಚು ಆಸಕ್ತಿ ವಹಿಸಬೇಕು. ಜತೆಗೆ ವಿಷಯವಾರು ಪ್ರಶ್ನೆ ಕೇಳುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.
ಚಲುವರಸನಕೊಪ್ಪಲು ಶಾಲೆ ಮುಖ್ಯ ಶಿಕ್ಷಕ ಕುಮಾರ್ ಅವರ ಸಹೋದ್ಯೋಗಿಗಳು ಹೆಚ್ಚು ಮಕ್ಕಳನ್ನು ದಾಖಲಾತಿ ಮಾಡಿ ಶಾಲೆಯನ್ನು ಮಾದರಿಯನ್ನಾಗಿಸಿದ್ದಾರೆ. ಇವರಿಗೆ ಗ್ರಾಮಸ್ಥರು ಬೆಂಬಲವಾಗಿ ನಿಂತಿದ್ದಾರೆ. ಮಕ್ಕಳ ಪ್ರತಿಭೆ ಹೊರತರಲು ರಂಗ ಮಂಟಪ ನಿರ್ಮಿಸಿದ್ದಾರೆ. ಇದೇ ರೀತಿ ಎಲ್ಲಾ ಸರ್ಕಾರಿ ಶಾಲೆಗಳು ಅಭಿವೃದ್ಧಿಗೊಂಡರೆ ಉನ್ನತ ಮಟ್ಟದ ಶಿಕ್ಷಣ ದೊರಕಲು ಸಾಧ್ಯವಾಗಲಿದೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ರವಿಕುಮಾರ್ ಮಾತನಾಡಿ, ಸಾರ್ವಜನಿಕರ ಸಹಕಾರದಿಂದಾಗಿ ಸರ್ಕಾರಿ ಶಾಲೆಗಳು ಅಭಿವೃದ್ಧಿ ಹೊಂದುತ್ತಿವೆ. ಶಿಕ್ಷಣ ಇಲಾಖೆಯಿಂದ ಹೆಚ್ಚಿನ ಸಹಕಾರ, ಸೌಲಭ್ಯ ನೀಡಲಾಗುವುದು. ಹೆಚ್ಚು ಹೆಚ್ಚು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ಶಾಲಾ ವಿದ್ಯಾರ್ಥಿಗಳು ಕಿಂದರಿಜೋಗಿ ನಾಟಕ, ಜಾನಪದ ನೃತ್ಯ, ಇತರೆ ಗೀತೆಗಳಿಗೆ ಆಕರ್ಷಕ ನೃತ್ಯ ಪ್ರದರ್ಶಿಸುವ ಮೂಲಕ ಪ್ರೇಕ್ಷಕರರನ್ನು ರಂಜಿಸಿದರು.ಈ ವೇಳೆ ಕ್ಷೇತ್ರ ಸಮನ್ವಯಾಧಿಕಾರಿ ಕೆ.ಎನ್.ಪ್ರಕಾಶ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಎನ್. ಕೆಂಪೇಗೌಡ, ನಿರ್ದೇಶಕ ಕೆ.ಯುವರಾಜು, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ಸಿಆರ್ ಪಿ ನಾಗೇಶ್, ಗ್ರಾಮದ ಮುಖಂಡ ವೈ.ಎಸ್.ಸುಬ್ಬಯ್ಯ, ಗ್ರಾಪಂ ಸದಸ್ಯರಾದ ಅರುಣ್, ಮಿಥುನ್, ಮುಖ್ಯ ಶಿಕ್ಷಕ ಕೆ.ಬಿ.ಕುಮಾರ್, ಸಹ ಶಿಕ್ಷಕ ಮೋಹನ್ ಕುಮಾರ್, ಎಸ್ ಡಿಎಂಸಿ ಅಧ್ಯಕ್ಷರು, ಸದಸ್ಯರು, ಸಹ ಶಿಕ್ಷಕರು, ಗ್ರಾಮಸ್ಥರು, ಪೋಷಕರು ಹಾಜರಿದ್ದರು.