;Resize=(412,232))
ಮೈಸೂರು : ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಲ್ಲಿನ ತೆರಿಗೆ ಹಂತಗಳನ್ನು ಕಡಿಮೆ ಮಾಡುವುದರಿಂದ ರಾಜ್ಯಕ್ಕೆ ಪ್ರತಿ ವರ್ಷ ₹15 ಸಾವಿರ ಕೋಟಿ ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಜಿಎಸ್‌ಟಿ ವ್ಯವಸ್ಥೆಯಲ್ಲಿನ ತೆರಿಗೆ ಹಂತಗಳನ್ನು ಕಡಿಮೆ ಮಾಡುವುದರಿಂದ ರಾಜ್ಯಕ್ಕೆ ₹15 ಸಾವಿರ ಕೋಟಿ ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ. 8 ರಾಜ್ಯಗಳು ಸೇರಿ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಹೀಗಾಗಿ, ರಾಜ್ಯಗಳಿಗೆ ಆಗುವ ಈ ನಷ್ಟವನ್ನು ಕೇಂದ್ರ ಸರ್ಕಾರ ಮುಂದಿನ 5 ವರ್ಷಗಳವರೆಗೆ ಭರಿಸಬೇಕು ಎಂದು ಅವರು ಆಗ್ರಹಿಸಿದರು.
2017ರಲ್ಲಿ ಜಿಎಸ್‌ಟಿ ಮಾಡಿದಾಗ 5 ವರ್ಷ ಮಾತ್ರ ಪರಿಹಾರ ಕೊಡಲಾಯಿತು. ಅಂದಿಗಿಂತ ಇಂದು ಶೇ.12 ರಿಂದ 13ರಷ್ಟು ಹೆಚ್ಚಿನ ತೆರಿಗೆ ಸಂಗ್ರಹವಾಗುತ್ತದೆ. ಅದನ್ನು ರಾಜ್ಯಗಳಿಗೆ ಕೊಡಲಿ ಎಂದು ಆಗ್ರಹಿಸುತ್ತಿದ್ದೇವೆ. ಸಿಗರೇಟ್, ಗುಟ್ಕಾ, ಪಾನ್ ಮಸಾಲ ಮುಂತಾದ ಲಕ್ಸುರಿ ವಸ್ತುಗಳ ಮೇಲೆ ಹೆಚ್ಚು ಸೆಸ್ ವಿಧಿಸಿ, ಆ ತೆರಿಗೆ ಹಣವನ್ನು ನಮಗೆ ಕೊಡಿ ಎಂದು ಕೇಳುತ್ತಿದ್ದೇವೆ ಎಂದರು.
ಜಿಎಸ್‌ಟಿ ಕೌನ್ಸಿಲ್ ಸಭೆ ಸೆ.3 ಮತ್ತು 4ರಂದು ನಡೆಯಲಿದೆ. ಮುಂದಿನ ಜಿಎಸ್‌ಟಿ ಸಭೆಗೆ ನಾನು ಹೋಗುತ್ತಿಲ್ಲ. ಸಚಿವ ಕೃಷ್ಣ ಬೈರೇಗೌಡ ಅವರು ಹೋಗುತ್ತಿದ್ದಾರೆ. ಸಭೆಯಲ್ಲಿ ನಮ್ಮ ಆಗ್ರಹದ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸುತ್ತೇವೆ ಎಂದರು.
ಇದೇ ವೇಳೆ, ಆಸ್ತಿ ನೊಂದಣಿ ಶುಲ್ಕ ಹೆಚ್ಚಳವನ್ನು ಸಮರ್ಥಿಸಿಕೊಂಡ ಸಿಎಂ, ಆಸ್ತಿ ನೊಂದಣಿ ಶುಲ್ಕವನ್ನು ಒಂದು ಪರ್ಸೆಂಟ್ ಹೆಚ್ಚಿಸಲಾಗಿದೆ. ದಕ್ಷಿಣದ ಇತರ ರಾಜ್ಯಗಳಿಗೆ ಸಮನಾಗಿ ಏರಿಕೆ ಮಾಡಲಾಗಿದೆ ಎಂದರು.
ಬಿಜೆಪಿಯವರು ಎಂದೂ ಕರ್ನಾಟಕದ ಪರ ಮಾತನಾಡಿಲ್ಲ. ಕೇಂದ್ರದಿಂದ ನಮಗೆ ಪರಿಹಾರ ರೂಪವಾಗಿ ಬರಬೇಕಿದ್ದ 11,950 ಕೋಟಿ ರೂ.ನಷ್ಟವಾಗಿದೆ. ಯಾವತ್ತಾದರೂ ಬಿಜೆಪಿಯವರು ಈ ಬಗ್ಗೆ ಮಾತನಾಡಿದ್ದಾರಾ? ಎಂದು ಪ್ರಶ್ನಿಸಿದರು.
ದಸರಾ ಏರ್ ಶೋಗೆ ಒಪ್ಪಿಗೆ:
ದಸರಾ ವೇಳೆ ಮೈಸೂರಿನಲ್ಲಿ ಏರ್ ಶೋ ನಡೆಸಲು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ವಿಜಯದಶಮಿಯ ಹಿಂದಿನ ದಿನ ಏರ್ ಶೋ ನಡೆಯಲಿದೆ ಎಂದು ಅವರು ತಿಳಿಸಿದರು.