ಕನ್ನಡಪ್ರಭ ವಾರ್ತೆ ಬೇಲೂರುಜಿಲ್ಲೆಯಲ್ಲಿ ಅರಸೀಕೆರೆ ಕ್ಷೇತ್ರಕ್ಕೆ ವಿಶೇಷ ಅನುದಾನ ಬಿಡುಗಡೆಯಾದ ಬಗ್ಗೆ ಕೇಳಿದ ಪ್ರಶ್ನೆಗೆ ಮಾಜಿ ಸಚಿವ ಬಿ.ಶಿವರಾಂ ಪ್ರತಿಕ್ರಿಯೆ ನೀಡುತ್ತಾ, ಒಂದು ವೇಳೆ ನಾನು ಗೆದ್ದಿದ್ದರೆ ಅರಸೀಕೆರೆ ಕ್ಷೇತ್ರಕ್ಕೆ ನೀಡಿದಷ್ಟೇ ಅನುದಾನವನ್ನು ಬೇಲೂರು ಕ್ಷೇತ್ರಕ್ಕೂ ತರುತ್ತಿದ್ದೆ. ಈ ಬಗ್ಗೆ ಇಲ್ಲಿನ ಮತದಾರರು ತಿಳಿದುಕೊಳ್ಳಬೇಕಿತ್ತು ಎಂದು ತಮ್ಮ ಸೋಲಿನ ಬಗ್ಗೆ ವ್ಯಾಖ್ಯಾನ ಮಾಡಿದರು.ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಯಾವ ಶಾಸಕರಿಗೂ ತಾರತಮ್ಯ ನೀತಿ ಮಾಡಿಲ್ಲ, ಇಲ್ಲಿನ ಶಾಸಕರು ಸರ್ಕಾರದೊಂದಿಗೆ ಬೆರೆತು ಅಭಿವೃದ್ಧಿಪಡಿಸಲಿ. ಪುರಸಭೆಯ ನಗರೋತ್ಥಾನ ಅನುದಾನದಲ್ಲಿ ಪಟ್ಟಣದ ರಸ್ತೆಗಳನ್ನು ಸರಿಪಡಿಸಿಲ್ಲ. ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಶಾಸಕರು ಪುರಸಭೆಯ ಅಧ್ಯಕ್ಷರನ್ನು ಜೇಬಿನಲ್ಲಿ ಇಟ್ಟುಕೊಂಡು ಓಡಾಡಿದ್ದು ಬಿಟ್ಟರೆ ಬೇರೇನು ಕೆಲಸ ಮಾಡಿಲ್ಲ. ತಮ್ಮದೇ ಸರ್ಕಾರವಿರುವುದರಿಂದ ಕಾಂಗ್ರೆಸ್ ಕಾರ್ಯಕರ್ತರು ವರ್ಗಾವಣೆಗಾಗಿ ಇತರ ಕೆಲಸಗಳಿಗಾಗಿ ಬರುತ್ತಾರೆ. ನಾನು ತಮ್ಮ ಕೈಲಾದ ಸಹಾಯವನ್ನು ಮಾಡುತ್ತೇನೆ. ಇದನ್ನೇ ವರ್ಗಾವಣೆ ದಂಧೆ ಎಂದು ಬಿಂಬಿಸಿದರೆ ಏನು ಮಾಡಲು ಸಾಧ್ಯ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬೇಲೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ. ನಿಶಾಂತ್, ಕಸಬಾ ಹೋಬಳಿ ಅಧ್ಯಕ್ಷ ಶ್ರೀನಿವಾಸ್, ಕಿಸಾನ್ ಘಟಕದ ಉಪಾಧ್ಯಕ್ಷ ಮಲ್ಲೇಶ್, ಕಾಂಗ್ರೆಸ್ ಯುವ ಪ್ರಧಾನ ಕಾರ್ಯದರ್ಶಿ ಸಚಿನ್ ಹಾಜರಿದ್ದರು.