ನಂಬಿಕೆ ದ್ರೋಹ, ವಿಶ್ವಾಸ ದ್ರೋಹಕ್ಕೆ ಮತ್ತೊಂದು ಹೆಸರೇ ಸಿದ್ದರಾಮಯ್ಯ ಎಂಬ ಬಿಎಸ್ವೈ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ನಾನು ಯಾರಿಗಾದರೂ ದ್ರೋಹ ಮಾಡಿದ್ರೆ ಹೇಳಲಿ, ಸುಮ್ಮ ಸುಮ್ಮನೆ ಹೇಳಿ ಬಿಟ್ರೆ ಹೇಗೆ ಎಂದು ಪ್ರಶ್ನಿಸಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಂಬಿಕೆ ದ್ರೋಹ, ವಿಶ್ವಾಸ ದ್ರೋಹಕ್ಕೆ ಮತ್ತೊಂದು ಹೆಸರೇ ಸಿದ್ದರಾಮಯ್ಯ ಎಂಬ ಬಿಎಸ್ವೈ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ನಾನು ಯಾರಿಗಾದರೂ ದ್ರೋಹ ಮಾಡಿದ್ರೆ ಹೇಳಲಿ, ಸುಮ್ಮ ಸುಮ್ಮನೆ ಹೇಳಿ ಬಿಟ್ರೆ ಹೇಗೆ ಎಂದು ಪ್ರಶ್ನಿಸಿದರು.ಸೋಮವಾರ ಬಾಗಲಕೋಟೆಯ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನ ಕಳ್ಳ ಅಂತೀನಿ, ಭ್ರಷ್ಟ ಅಂತೀನಿ, ಹಾಗಾದರೆ ಅವರು ಕಳ್ಳ, ಭ್ರಷ್ಟ ಆಗುತ್ತಾರಾ? ಸುಮ್ಮ ಸುಮ್ಮನೆ ಹೇಳೋದಲ್ಲ. ಅವರಿಗೆ ವಯಸ್ಸಾದ ಮೇಲೆ ಅರಳು- ಮರಳು ಆಗಿದೆ. ಅವರ ಕಾಲದಲ್ಲಿ ಭ್ರಷ್ಟ ಎಂದು ಯಾರನ್ನ ಕರೆದರು? ಯಾರನ್ನ ಯತ್ನಾಳ ಭ್ರಷ್ಟ ಎಂದು ಕರೆದರು? ಹಾಗಾದ್ರೆ ಯಡಿಯೂರಪ್ಪ ಭ್ರಷ್ಟ ಅಲ್ವಾ? ಇದು ನಾನು ಹೇಳಿದ್ದಲ್ಲ ಅವರ ಪಕ್ಷದ ಮನುಷ್ಯನೇ ಹೇಳಿರೋದು. ಮೈಸೂರು ವಿಶ್ವನಾಥ ಅವರೂ ಯಡಿಯೂರಪ್ಪ ಮೇಲೆ ಭ್ರಷ್ಟಾಚಾರ ಆರೋಪ ಮಾಡಿದ್ದರು. ಅವರ ಪಕ್ಷದವರೇ ಅವರ ಮೇಲೆ ಆರೋಪ ಮಾಡಿದರೆ ಸುಳ್ಳಾ, ನಿಜಾನೋ ಎಂದು ಪ್ರಶ್ನೆ ಮಾಡಿದರು.
ನಾನು ಬಡವರ ಪರ ಇದೀನಿ ಎಂದು ಹೀಗೆ ಆರೋಪ ಮಾಡುತ್ತಾರೆ. ಬಿಜೆಪಿಗರು ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು, ಅಹಿಂದ ವರ್ಗದ ವಿರೋಧಿಗಳು ಎಂದು ಹರಿಹಾಯ್ದರು.
ಸ್ವಜಾತಿಯ ಅಭ್ಯರ್ಥಿ ಆಗಿರುವ ಕಾರಣ ಸಿಎಂ ಪ್ರಚಾರಕ್ಕೆ ಬಂದಿದ್ದಾರೆ ಎಂಬ ಯಡಿಯೂರಪ್ಪ ಆರೋಪಕ್ಕೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ಯಾವ ಜಾತಿ? ಯಾರ ಪರ ಪ್ರಚಾರ ಮಾಡುತ್ತಿದ್ದಾರೆ? ಅವರು ಉಮೇಶ ಮೇಟಿ ಪರ ಪ್ರಚಾರ ಮಾಡುತ್ತಿದ್ದಾರಾ? ಚರಂತಿಮಠ ಯಾವ ಜಾತಿ? ಚರಂತಿಮಠ ಲಿಂಗಾಯತರು, ಹಾಗಾದರೆ ಅವರು ಮಾಡುತ್ತಿರೋದೇನು? ಉಮೇಶ ಮೇಟಿ ನಮ್ಮ ಪಕ್ಷದ ಅಭ್ಯರ್ಥಿ. ಹಾಗಾಗಿ ಪ್ರಚಾರ ಮಾಡ್ತೀನಿ, ದಾವಣಗೆರೆಯಲ್ಲಿ ಲಿಂಗಾಯತ ಅಭ್ಯರ್ಥಿ ಇದ್ದಾರೆ. ಆಧಾರ ಇದ್ದರೆ ಮಾತನಾಡಿ, ಸುಮ್ಮನೆ ಮಾತಾನಾಡೋದಲ್ಲ. ನನ್ನ ಜೀವನದಲ್ಲಿ ಆ ತರಹ ಮಾತನಾಡಿಲ್ಲ ನಾನು ಆಧಾರ ಸಹಿತ ಮಾತನಾಡೋನು, ಆಧಾರ ಇಲ್ಲದೇ ಇದ್ದರೆ ಆಧಾರ ರಹಿತ ಆಗುತ್ತೆ, ಅದಕ್ಕೆ ಯಾವ ಕಿಮ್ಮತ್ತೂ ಇರಲ್ಲ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳಿಂದ ಲೂಟಿ ಮಾಡುತ್ತಿದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ನೇರವಾಗಿ ಫಲಾನುಭವಿಗಳ ಅಕೌಂಟಿಗೆ ಹಣ ಹಾಕ್ತೀವಿ. ಗ್ಯಾರಂಟಿ ಹಣ ಹೇಗೆ ಲೂಟಿ ಆಗುತ್ತೆ? ಅದ್ಹೇಗೆ ಹಣ ಲೂಟಿ ಆಗುತ್ತೆ? ಲಂಚ ಹೇಗೆ ಹೊಡೆಯೋಕೆ ಆಗುತ್ತೆ? ಯಡಿಯೂರಪ್ಪ ವಯಸ್ಸಾದ ಮೇಲೆ ಸುಳ್ಳು ಹೇಳಬಾರದು. ಈಗ ಅವರು ಸಕ್ರಿಯ ರಾಜಕಾರಣಿ ಅಲ್ಲ. ಸುಳ್ಳು ಹೇಳೋದರಲ್ಲಿ ನಿಸ್ಸೀಮರು, ನಾನು ಬಡವರ, ದಲಿತರಪರ, ಮಹಿಳೆಯರ ಪರ, ಅಲ್ಪಸಂಖ್ಯಾತರ ಪರ ಇದ್ದೇನೆಂದು ಟಾರ್ಗೆಟ್ ಮಾಡುತ್ತಿದ್ದಾರೆ. ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ, ಬಾಯಿಗೆ ಬಂದಂತೆ ಮಾತನಾಡೋದು ನನ್ನ ಜಾಯಮಾನ ಅಲ್ಲ. ಏನಾದರೂ ಇದ್ದರೆ ನೇರವಾಗಿ, ಆಧಾರ ಸಹಿತವಾಗಿ ಹೇಳುತ್ತೇನೆ ಎಂದರು.
ಎನ್‌ಎಸ್‌ಯುಐ ಗಲಾಟೆ ಪ್ರಕರಣ ಅದು ಪ್ರಚಾರದ ಒಂದು ಭಾಗ. ಯಾರ ಕೇಸರಿ ಶಾಲು ಹಾಕೋದು? ಕೇಸರಿ ಶಾಲನ್ನು ನಮ್ಮ ವಿರೋಧ ಪಕ್ಷ ಬಿಜೆಪಿಗರು ಹಾಕೋದು. ಇದು ಆಧಾರ ರಹಿತ ಆರೋಪ, ಅವರೇ ಬೇಕಂತಲೇ ಕಳಿಸಿರಬೇಕು, ಅವರ ಮೇಲೆ ಕ್ರಮ ತೆಗೆದುಕೊಳ್ಳಲಿ ಬೇಡ ಅಂದವರ್‍ಯಾರು? ಯಾರು ಮಾಡಿದ್ದಾರೋ ಅವರ ಮೇಲೆ ಕ್ರಮ ತಗೊಳ್ಳಲಿ? ಪ್ರಕರಣದ ಬಗ್ಗೆ ನಾನು ಕೇಳಿಲ್ಲ, ನಾನು ನೋಡಿಲ್ಲ ಎಂದರು.
ಅವಾಚ್ಯ ಶಬ್ಧ ಬಳಸಿದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್ ದಾಖಲು ಮಾಡುವ ಕುರಿತು ಮಾತನಾಡಿ, ಇದು ಅವರ ಸಂಸ್ಕೃತಿ ತೋರಿಸುತ್ತದೆ, ಟೀಕೆ ಮಾಡಬೇಕಾದರೆ ಸಂಸದೀಯ ಪದ ಮಾತ್ರ ಬಳಕೆ ಮಾಡಬೇಕು, ಅಸಂಸದೀಯ ಪದ ಬಳಕೆ ಮಾಡಬಾರದು ಎಂದು ಸಲಹೆ ನೀಡಿದರು.
ಉಪಚುನಾವಣೆಯಲ್ಲಿ ಜನ ಬೆಂಬಲ ಹೇಗಿದೆ ಎಂಬ ಪ್ರಶ್ನೆಗೆ ನಮ್ಮ ನಿರೀಕ್ಷೆ ಮೀರಿ ಜನ ಬೆಂಬಲ ಸಿಗುತ್ತಿದೆ. ಗ್ಯಾರಂಟಿ ಯೋಜನೆಗಳು ನಮಗೆ ಸಹಾಯಕವಾಗಿವೆ. ಚುನಾವಣೆಯಲ್ಲಿ ಎಷ್ಟು ಮತಗಳ ಅಂತರದಿಂದ ಗೆಲ್ಲುತ್ತೀರಿ ಎಂಬ ಪ್ರಶ್ನೆಗೆ ನನಗೆ ಶಾಸ್ತ್ರ ಹೇಳೋಕೆ ಬರಲ್ಲ, ಅಂತರ ಗೊತ್ತಿಲ್ಲ, ಆದರೆ ಕಂಪರ್ಟೇಬಲ್ ಆಗಿ ಗೆಲ್ತೀವಿ ಎಂದು ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.