ಉತ್ತರ ಕನ್ನಡ ಇಬ್ಭಾಗವಾದರೆ ಜಿಲ್ಲೆಯ ಅಸ್ತಿತ್ವಕ್ಕೆ ಧಕ್ಕೆ: ಶಿವರಾಮ ಹೆಬ್ಬಾರ

KannadaprabhaNewsNetwork |  
Published : Apr 01, 2025, 12:45 AM IST
ಫೋಟೋ ಮಾ.೩೧ ವೈ.ಎಲ್.ಪಿ. ೦೩ | Kannada Prabha

ಸಾರಾಂಶ

ಯಲ್ಲಾಪುರದಲ್ಲಿ ನೂತನವಾಗಿ ಪ್ರಾರಂಭಗೊಂಡ ಸಂಕಲ್ಪ ಕಲಾಭವನದಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳ ಛಾಯಾಚಿತ್ರ ಪ್ರದರ್ಶನಕ್ಕೆ ಭಾನುವಾರ ಶಾಸಕ ಶಿವರಾಮ ಹೆಬ್ಬಾರ್‌ ಚಾಲನೆ ನೀಡಿದರು.

ಯಲ್ಲಾಪುರ: ದೇಶದಲ್ಲೇ ಉತ್ತರ ಕನ್ನಡ ಪ್ರವಾಸೋದ್ಯಮ ಜಿಲ್ಲೆಯನ್ನಾಗಿಸುವುದಕ್ಕೆ ವಿಪುಲ ಅವಕಾಶಗಳಿವೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ನೂತನವಾಗಿ ಪ್ರಾರಂಭಗೊಂಡ ಸಂಕಲ್ಪ ಕಲಾಭವನದಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳ ಛಾಯಾಚಿತ್ರ ಪ್ರದರ್ಶನಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು. ಇಂತಹ ಪ್ರಕೃತಿ ವೈಶಿಷ್ಟ್ಯಗಳು ಬೇರೆಲ್ಲೂ ಕಾಣದು. ಅತಿಯಾದ ಮಡಿವಂತಿಕೆಯಿಂದಾಗಿಯೇ ನಮ್ಮ ಜಿಲ್ಲೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೀರಾ ಹಿಂದಿದೆ. ಪಕ್ಕದ ಗೋವಾ, ಉಡುಪಿ, ಮಂಗಳೂರುಗಳನ್ನು ಗಮನಿಸಿದರೆ ಕಾಣಬಹುದಾಗಿದೆ ಎಂದು ಹೇಳಿದರು.

ನಮ್ಮ ಮುಂದಿನ ತಲೆಮಾರಿಗೆ ಒಂದೆಡೆ ಜಿಲ್ಲೆಯ ಪ್ರಕೃತಿಯ ಮಹತ್ವದ ಅರಿವು ಮೂಡಿಸುವುದಕ್ಕೆ ಪ್ರಮೋದ ಹೆಗಡೆ ಅವರ ಪ್ರಯತ್ನ ಶ್ಲಾಘನೀಯವಾದುದು. ಜಿಲ್ಲೆಯ ಪ್ರವಾಸೋಧ್ಯಮದ ಕುರಿತು ಸದಾ ಚಿಂತನೆ ಮಾಡುತ್ತಲೇ ಬಂದಿದ್ದಾರೆ ಎಂದ ಅವರು, ಯಾವುದೇ ಕಾರಣಕ್ಕೆ ಇಂತಹ ವೈಶಿಷ್ಟ್ಯಪೂರ್ಣ ಜಿಲ್ಲೆ ಇಬ್ಭಾಗವಾಗಕೂಡದು. ಆ ಕುರಿತು ಎಲ್ಲರೂ ಪಕ್ಷಾತೀತ ನೆಲೆಯಲ್ಲಿ ಹೋರಾಡಬೇಕು. ಇಬ್ಭಾಗವಾದರೆ ಜಿಲ್ಲೆಯ ಅಸ್ತಿತ್ವಕ್ಕೆ ಧಕ್ಕೆಯುಂಟಾಗುತ್ತದೆ. ಇದನ್ನು ಎರಡು ಜಿಲ್ಲೆಯನ್ನಾಗಿಸುವ ಚಿಂತನೆ ಮಾಡುವವರು ಗಂಭೀರವಾಗಿ ಚಿಂತನೆ ಮಾಡಿ ಅರ್ಥೈಸಿಕೊಳ್ಳಬೇಕು ಎಂದು ಹೆಬ್ಬಾರ ಸಲಹೆ ನೀಡಿದರು.

ಗೋವಾ ಪುಟ್ಟ ರಾಜ್ಯ. ಅಲ್ಲಿ ಪ್ರವಾಸೋದ್ಯಮದಿಂದಲೇ ಸರ್ಕಾರ ನಡೆಯುತ್ತದೆ. ದಿನವೊಂದಕ್ಕೆ ೮೯ ವಿಮಾನ, ೬೦೦೦ ವಸತಿ ಕೊಠಡಿಗಳು, ೬೦೦೦ ಟ್ಯಾಕ್ಸಿಗಳು ಇವೆಲ್ಲ ನಡೆಯುತ್ತದೆ ಎಂದಾದರೆ ಅಷ್ಟು ಜನರಿಗೆ ಉದ್ಯೋಗ, ಕುಟುಂಬಕ್ಕೆ ಬದುಕು ದೊರೆತಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ವೈಟಿಎಸ್ಎಸ್ ಸಂಸ್ಥೆಯ ಅಧ್ಯಕ್ಷ ರವಿ ಶಾನಭಾಗ ಮಾತನಾಡಿ, ಇಡೀ ಜಿಲ್ಲೆ ಹೀಗೆ ಉಳಿಯಬೇಕು. ಇಂತಹ ಪರಿಸರ ಬೇರೆಲ್ಲೂ ಸಿಗದು. ಜಿಲ್ಲೆಯ ಅಭಿವೃದ್ಧಿಯ ನೆಲೆಯಲ್ಲಿ ಕನಿಷ್ಠ ಮೂಲಭೂತ ಸೌಲಭ್ಯವನ್ನು ಮಾತ್ರ ಮಾಡಬೇಕು. ಅತಿಯಾದ ವ್ಯವಸ್ಥೆ ಮಾಡಿದರೆ ಇದ್ದ ನೈಜ ಪರಿಸರ ನಾಶವಾಗುತ್ತದೆ. ಪ್ರವಾಸಿಗರಿಂದಲೇ ಹಾನಿಯಾಗುತ್ತದೆ. ಆದರೆ ರಾಜ್ಯ ಟೂರಿಸಂ ಡಿಪಾರ್ಟ್‌ಮೆಂಟ್‌ ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಪ್ರವಾಸೋದ್ಯಮ ಸಚಿವರಿಗೆ ಮೈಸೂರು ಮತ್ತು ಉತ್ತರ ಕರ್ನಾಟಕ ಭಾಗ ಮಾತ್ರ ಕಾಣುತ್ತದೆ. ಈ ಜಿಲ್ಲೆಯ ಮೂಲಭೂತ ಸೌಲಭ್ಯದ ಕುರಿತು ಜಿಲ್ಲೆಯ ಜನಪ್ರತಿನಿಧಿಗಳು ಗಂಭೀರವಾಗಿ ಒಗ್ಗಟ್ಟಾಗಿ ಹೋರಾಡಬೇಕು ಎಂದರು.

ಸಂಕಲ್ಪ ಅಧ್ಯಕ್ಷ ಪ್ರಮೋದ ಹೆಗಡೆ ನೂರಕ್ಕೂ ಹೆಚ್ಚಿರುವ ಛಾಯಾಚಿತ್ರಗಳ ಪರಿಚಯ ಮಾಡಿಕೊಟ್ಟರು. ನಮ್ಮ ಜಿಲ್ಲೆ ಒಂದಾಗಿದ್ದರೆ ಮಾತ್ರ ಈ ಜಿಲ್ಲೆಯ ವಿಶೇಷತೆ ಉಳಿಯಲು ಸಾಧ್ಯ ಎಂದರು.

ಪ್ರವಾಸೋಧ್ಯಮ ಅಧ್ಯಯನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬೀರಣ್ಣ ನಾಯಕ ಮೊಗಟಾ, ಮಲೆನಾಡು ಕೃಷಿ ಸಹಕಾರಿ ಸಂಘದ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರೀಗುಡ್ಡೆ, ಪತ್ರಕರ್ತರಾದ ಶಂಕರ ಭಟ್ಟ ತಾರೀಮಕ್ಕಿ, ನಾಗರಾಜ ಮದ್ಗುಣಿ, ಅಚ್ಯುತಕುಮಾರ ಮತ್ತಿತರರು ಉಪಸ್ಥಿತರಿದ್ದರು.

PREV

Recommended Stories

ಮಲೆನಾಡು, ಕರಾವಳಿಯಲ್ಲಿ ಮಳೆ : ಜನಜೀವನ ಅಸ್ತವ್ಯಸ್ತ
ಚಿತ್ತಾಪುರದಲ್ಲಿ ನ.2ರಂದು ಪಥ ಸಂಚಲನ: ಅನುಮತಿ ಕೋರಿ ಹೊಸದಾಗಿ ಅರ್ಜಿ