ಕನ್ನಡ ಪ್ರೀತಿಸಿ-ಬೆಳೆಸದಿದ್ದರೆ ಕನ್ನಡಕ್ಕೆ ಕಂಟಕ ತಪ್ಪಿದ್ದಲ್ಲ

KannadaprabhaNewsNetwork | Published : Dec 5, 2024 12:31 AM

ಸಾರಾಂಶ

ನಮ್ಮ ಮಾತೃ ಭಾಷೆಯಾಗಿರುವ ಕನ್ನಡ ಭಾಷೆ ಸುಮಾರು ಐದುಸಾವಿರ ವರ್ಷಗಳ ಪುರಾತನ ಭಾಷೆಯಾಗಿದೆ. ಕನ್ನಡಿಗರಾದ ನಾವು ಕನ್ನಡತನ ಮರೆತು ಬೇರೆ ಭಾಷೆಗಳಿಗೆ ಮಾರು ಹೋಗುತ್ತಿರುವುದು ವಿಷಾದದ ಸಂಗತಿ.

ಮುಂಡರಗಿ: ಮನೆಯಲ್ಲಿ ತಂದೆ ತಾಯೆಂದಿರು ತಮ್ಮ ಮಕ್ಕಳಿಂದ ಮಮ್ಮಿ-ಡ್ಯಾಡಿ ಎಂದು ಕರೆಸಿಕೊಳ್ಳುವ ಸೋಕಿಗಾಗಿ ಕನ್ನಡ ನಮ್ಮಿಂದ ಕೈ ಜಾರಿ ಹೋಗುತ್ತಿದೆ. ಕನ್ನಡಿಗರಾದ ನಾವುಗಳೇ ಕನ್ನಡವನ್ನು ಪ್ರೀತಿಸಿ-ಬೆಳೆಸದಿದ್ದರೆ ಕನ್ನಡಕ್ಕೆ ಕಂಟಕ ತಪ್ಪಿದ್ದಲ್ಲ ಎಂದು ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಕಳವಳ ವ್ಯಕ್ತಪಡಿಸಿದ್ದಾರೆ.

ಅವರು ಇತ್ತೀಚೆಗೆ ಪಟ್ಟಣದ ಅನ್ನದಾನೀಶ್ವರ ಮಠದ ಸಾಂಸ್ಕೃತಿಕ ವೇದಿಕೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶ್ರೀ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠಗಳ ಆಶ್ರಯದಲ್ಲಿ ಜರುಗಿದ ಕರ್ನಾಟಕ ಸಂಭ್ರಮ-50ರ ಸಮಾರೋಪ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸಾನ್ನಿಧ್ಯ ವಹಿಸಿ ಮಾತನಾಡಿದರು.

ನಮ್ಮ ಮಾತೃ ಭಾಷೆಯಾಗಿರುವ ಕನ್ನಡ ಭಾಷೆ ಸುಮಾರು ಐದುಸಾವಿರ ವರ್ಷಗಳ ಪುರಾತನ ಭಾಷೆಯಾಗಿದೆ. ಕನ್ನಡಿಗರಾದ ನಾವು ಕನ್ನಡತನ ಮರೆತು ಬೇರೆ ಭಾಷೆಗಳಿಗೆ ಮಾರು ಹೋಗುತ್ತಿರುವುದು ವಿಷಾದದ ಸಂಗತಿ. ತಾಲೂಕು ಕಸಾಪ ಘಟಕ ಕನ್ನಡ ನಾಡ-ನುಡಿ ಕುರಿತು ಕಳೆದ ಒಂದು ವರ್ಷದಿಂದ ಸುಮಾರು 70ಕ್ಕೂ ಹೆಚ್ಚು ಕಾರ್ಯಕ್ರಮ ಆಯೋಜಿಸಿ ಜನರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಸರ್ಕಾರ ಮತ್ತು ಸಾಹಿತ್ಯ ಪರಿಷತ್ತು ಗುರುತಿಸುವ ಕೆಲಸ ಮಾಡಬೇಕು ಎಂದರು.

ಕಸಾಪ ಮಾಜಿ ಜಿಲ್ಲಾಧ್ಯಕ್ಷ ಪ್ರೊ. ಎ.ಬಿ.ಹಿರೇಮಠ ಉದ್ಘಾಟಿಸಿ ಮಾತನಾಡಿ, ಒಂದೇ ದೇಶ ಮತ್ತು ಒಂದೇ ಭಾಷೆಯನ್ನುವುದನ್ನು ಕೇಂದ್ರ ಸರ್ಕಾರ ಜಾರಿಗೆ ತರುವ ತವಕದಲ್ಲಿದೆ. ಇದರಿಂದ ಕನ್ನಡ ಭಾಷೆ ತನ್ನತನ ಕಳೆದುಕೊಳ್ಳುತ್ತದೆ. ಇದು ಜಾರಿಯಾಗಬಾರದು. ಕನ್ನಡ ಏಕೀಕರಣಕ್ಕಾಗಿ ಹೋರಾಡಿದ ಮಹನೀಯರನ್ನು ಪರಿಚಯಿಸುವ ಕೆಲಸ ತಾಲೂಕು ಕಸಾಪ ಮಾಡಿರುವುದು ಶ್ಲಾಘನೀಯ ಎಂದರು.

ಜಿಲ್ಲಾ ಕಸಾಪದ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಕನ್ನಡ ನಾಡಿನ ಜನತೆಗೆ ಜಾಗೃತಿ ಮೂಡಿಸುವ ಕಾರ್ಯ ನಮ್ಮ ಜಿಲ್ಲೆಯವರೇಯಾದ ಅಂದಾನೆಪ್ಪ ದೊಡ್ಡಮೇಟಿ, ಆಲೂರು ವೆಂಕಟರಾಯರು ಮಾಡಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ. ಕನ್ನಡ ಭಾಷೆ ಎಂದರೆ ಕೇವಲ ವರ್ಣಮಾಲೆಯಲ್ಲ, ಅದು ನಮ್ಮ ಬದುಕು. ಒಂದು ಭಾಷೆಯನ್ನು ಜೀವಂತವಾಗಿ ಇಡಬೇಕಾದರೆ ಆ ಭಾಷೆ ನಿರಂತವಾಗಿ ಬಳಕೆಯಾಗುತ್ತಿರಬೇಕು. ಹೀಗಾಗಿ ಕನ್ನಡಿಗರಾದ ನಾವೆಲ್ಲರೂ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡೋಣ. ಜಿಲ್ಲೆಯಲ್ಲಿಯೇ ಮುಂಡರಗಿ ತಾಲೂಕು ಕಸಾಪ ಕ್ರೀಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇದಕ್ಕೆ ಶ್ರಮಿಸುತ್ತಿರುವ ಎಲ್ಲರೂ ಅಭಿನಂದನಾರ್ಹರು ಎಂದರು.

ಕಾರ್ಯಕ್ರಮದಲ್ಲಿ ಚುಟುಕು ಭೂಷಣ ಪ್ರಶಸ್ತಿಗೆ ಭಾಜನರಾಗಿರುವ ಜ.ಅನ್ನದಾನೀಶ್ವರ ಸ್ವಾಮೀಜಿಯವರಿಗೆ ಕಸಾಪ ವತಿಯಿಂದ ಸನ್ಮಾನಿಸಲಾಯಿತು.

ತಾಲೂಕು ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಅನ್ನದಾನೀಶ್ವರ ಸ್ವಾಮೀಜಿ ಸಾಹಿತ್ಯ ಭವನ ನಿರ್ಮಾಣಕ್ಕೆ ಬೆಲೆಬಾಳುವ ಭೂಮಿ ದಾನ ಮಾಡಿ, ಕಟ್ಟಡ ನಿರ್ಮಾಣಕ್ಕೂ ಸಹ ಧನಸಹಾಯ ಮಾಡುತ್ತಿರುವುದನ್ನು ಕೃತಜ್ಞತಾ ಪೂರ್ವಕವಾಗಿ ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಶಂಕರ ಕುಕನೂರ, ಕಸಾಪ ಕಾರ್ಯದರ್ಶಿ ವೀಣಾ ಪಾಟೀಲ, ಮಂಜುನಾಥ ಮುಧೋಳ, ಶಿವಾನಂದ ಗಿಡ್ನಂದಿ, ಬಟ್ಟೂರ, ಡಾ. ಬಿ.ಜಿ.ಜವಳಿ, ನಾಗರಾಜ ಹಳ್ಳಿಕೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಎಸ್.ಬಿ. ಹಿರೇಮಠ ಸ್ವಾಗತಿಸಿ, ಆರ್.ವೈ. ಪಾಟೀಲ ನಿರೂಪಿಸಿ, ಸುರೇಶ ಭಾವಿಹಳ್ಳಿ ವಂದಿಸಿದರು. ಕಾರ್ಯಕ್ರಮದ ನಂತರ ಮಕ್ಕಳಿಂದ ಸಾಂಸ್ಕೃತಿ ಕಾರ್ಯಕ್ರಮಗಳು ಜರುಗಿದವು.

Share this article