ಖಂಡ್ರೆಗೆ ನೈತಿಕತೆಯಿದ್ದರೆ ಸಿಎಂ, ಡಿಸಿಎಂಗೆ ರಾಜೀನಾಮೆ ಕೊಡಲು ಹೇಳಲಿ: ಅಶ್ವತ್ಥ್ ನಾರಾಯಣ್

KannadaprabhaNewsNetwork |  
Published : Jun 16, 2025, 03:44 AM ISTUpdated : Jun 16, 2025, 12:06 PM IST
15ಎಚ್ಎಸ್ಎನ್18 : ಸುದ್ದಿಗಾರರೊಂದಿಗೆ ಮಾತನಾಡಿದ ಅಶ್ವಥನಾರಾಯಣ್‌. | Kannada Prabha

ಸಾರಾಂಶ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದ ಹೊಣೆ ಹೊತ್ತು ಸಿಎಂ, ಡಿಸಿಎಂ ಅವರಿಗೆ ರಾಜೀನಾಮೆ ನೀಡುವಂತೆ ಹೇಳುವ ನೈತಿಕತೆ ನಿಮಗಿದೆಯೇ ಎಂದು ಅಶ್ವತ್ಥ್ ನಾರಾಯಣ್‌ ಸವಾಲು ಹಾಕಿದರು.

 ಹಾಸನ :  ವಿಮಾನ ದುರಂತದ ಹೊಣೆಹೊತ್ತು ಪ್ರಧಾನಮಂತ್ರಿ ರಾಜೀನಾಮೆ ನೀಡಲಿ ಎಂದು ಹೇಳಿದ್ದ ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಠಕ್ಕರ್‌ ಕೊಟ್ಟಿರುವ ಮಾಜಿ ಸಚಿವ ಅಶ್ವತ್ಥ್ ನಾರಾಯಣ್‌, ಖಂಡ್ರೆ ಅವರೇ.... ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದ ಹೊಣೆ ಹೊತ್ತು ಸಿಎಂ, ಡಿಸಿಎಂ ಅವರಿಗೆ ರಾಜೀನಾಮೆ ನೀಡುವಂತೆ ಹೇಳುವ ನೈತಿಕತೆ ನಿಮಗಿದೆಯೇ ಎಂದು ಸವಾಲು ಹಾಕಿದರು.

ನಗರದಲ್ಲಿ ಭಾನುವಾರ ಮಾಧ್ಯಮದೊಂದಿಗೆ ಮಾತನಾಡಿ, ವಿಮಾನ ದುರಂತದ ಬಗ್ಗೆ ಮುಕ್ತವಾಗಿ ತನಿಖೆ ಆಗುತ್ತಿದೆ. ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರವೇ ನೇರ ಹೊಣೆಯಾಗಿದೆ. ಆದರೆ ಈಶ್ವರ್ ಖಂಡ್ರೆಗೆ ಕಿವಿನೂ ಕೇಳಿಸಲ್ಲ, ಕಣ್ಣೂ ಕಾಣಲ್ಲ, ಬಾಯಿಯೂ ಇಲ್ಲ. ನಿಮಗೆ ನೈತಿಕತೆ ಇದ್ದರೆ ರಾಜ್ಯದಲ್ಲಿ ನಡೆದ ಘಟನೆಗೆ ಯಾರು ಕಾರಣಕರ್ತರು ಎಂದು ಹೇಳಿ, ವಿಮಾನ ದುರಂತದಲ್ಲಿ ಕೇಂದ್ರ ಸರ್ಕಾರದ ಪಾತ್ರ ಏನಿದೆ ಎಂಬುದು ಗೊತ್ತಾಗುತ್ತದೆ. 

ಆದರೆ ರಾಜ್ಯದಲ್ಲಿ ನಡೆದ ಕಾಲ್ತುಳಿತದ ಪ್ರಕರಣದ ತನಿಖೆಯನ್ನು ಮುಕ್ತವಾಗಿ ಮಾಡಲಿ. ಇಡೀ ಜನತೆಗೆ ಗೊತ್ತಿದೆ, ಕಾಲ್ತುಳಿತ ಪ್ರಕರಣಕ್ಕೆ ನೇರವಾಗಿ ಸರ್ಕಾರವೇ ಕಾರಣಕರ್ತರು ಎಂದು. ಆತ್ಮಸಾಕ್ಷಿ ಇದ್ದರೆ ನಿಮ್ಮ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಿಗೆ ರಾಜೀನಾಮೆ ಕೊಡಲು ಹೇಳಿ ಎಂದು ತಾಕೀತು ಮಾಡಿದರು.ಇಡೀ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ಭ್ರಷ್ಟಾಚಾರದಲ್ಲಿ ತೊಡಗಿದೆ. ಇವರಿಂದ ನಾವೇನು ಬಯಸಲು ಆಗುವುದಿಲ್ಲ. ಜನ ಇವರಿಗೆ ಅಧಿಕಾರ ಕೊಟ್ಟು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಇತಿಹಾಸದಲ್ಲಿ ಎಂದು ಕಾಣದ ಜನವಿರೋಧಿ ಸರ್ಕಾರ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಈಗಾಗಲೇ ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕ ಆಗಿದ್ದು, ಸದ್ಯದಲ್ಲೇ ರಾಜ್ಯಾಧ್ಯಕ್ಷರ ನಿಶ್ಚಯ ಆಗಬಹುದೆಂದು ಎದುರು ನೋಡುತ್ತಿದ್ದೇವೆ. ವರಿಷ್ಠರು ಯಾರನ್ನು ನೇಮಕ ಮಾಡ್ತಾರೋ ಅವರಿಗೆ ಸಹಕಾರ ಕೊಟ್ಟು ಒಗ್ಗಟ್ಟಿನಿಂದ ಮುಂದೆ ಸಾಗುತ್ತೇವೆ ಎಂದರು.

ಹಾಸನ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಮೈತ್ರಿ ನಿಯಮ ಪಾಲನೆ ಮಾಡಿಲ್ಲ ಎಂಬ ಮಾಜಿ ಸಚಿವ ಎಚ್.ಡಿ. ರೇವಣ್ಣ ಹೇಳಿಕೆ ವಿಚಾರವಾಗಿ ಮಾತನಾಡಿ, ನಮ್ಮ ಮೈತ್ರಿ ಒಗ್ಗಟ್ಟಿನಿಂದ ಇರುವಂತಹದ್ದು. ಇದರಲ್ಲಿ ಯಾವುದೇ ಗೊಂದಲವಿಲ್ಲ. ಒಗ್ಗಟ್ಟಿನಿಂದ ಮುಂದೆ ಸಾಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಾತಿಗಣತಿ ಮರು ಸರ್ವೇ ವಿಚಾರವಾಗಿ ಮಾತನಾಡಿ, ಸರ್ಕಾರ ರಾಜಕೀಯ ದುರುದ್ದೇಶದಿಂದ ಜಾತಿಗಣತಿ ಮಾಡುವ ಪ್ರಯತ್ನ ಮಾಡಿದ್ದರು. ಅದು ವೈಜ್ಞಾನಿಕವಾಗಿ ಇರಲಿಲ್ಲ. ಅದು ಸರಿ ಇಲ್ಲಾ ಎಂದು ಕಾಂಗ್ರೆಸ್ ಪಕ್ಷದವರೇ ವಿರೋಧ ಮಾಡಿದ್ದರು. ಈಗ ಅವರ ತಪ್ಪು ಅರಿತುಕೊಂಡು ಮರು ಸರ್ವೇ ಮಾಡುತ್ತೇವೆ ಎಂದು ಸರ್ಕಾರ ಮುಂದೆ ಬಂದಿದೆ. ಈಗ ಅದರ ಅವಶ್ಯಕತೆಯೇ ಇಲ್ಲ ಎಂದರು.

ಕಾಂಗ್ರೆಸ್ ಕ್ಕೆ ಹಿಂದೂ ಸಮಾಜ ಒಡೆಯಬೇಕು ಎಂಬ ದುರುದ್ದೇಶವಿದೆ. ಜನರ ತೆರಿಗೆ ಹಣದಲ್ಲಿ ಗ್ಯಾರಂಟಿ ಕೊಟ್ಟು, ಇವರ ಜೇಬಿನ ಹಣದಲ್ಲಿ ಕೊಟ್ಟವರಂತೆ ಆಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

PREV
Read more Articles on

Recommended Stories

ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ
ಬೆಂಗಳೂರು ನಗರದಲ್ಲಿ ಮತ್ತೆ ರಾರಾಜಿಸಲಿವೆ ಜಾಹೀರಾತು : ವಾರ್ಷಿಕ ₹ 6000 ಕೋಟಿ ನಿರೀಕ್ಷೆ