ಹುಬ್ಬಳ್ಳಿ:
ಈಚೆಗೆ ಹುಬ್ಬಳ್ಳಿಯಲ್ಲಿ ಒಂದೇ ತಿಂಗಳಲ್ಲಿ ಇಬ್ಬರು ಮಹಿಳೆಯರ ಹತ್ಯೆ ನಡೆದಿರುವುದು ನೋವಿನ ಸಂಗತಿ. ಇಂತಹ ಘಟನೆಗಳು ಹೇಗೆ?, ಏಕೆ ನಡೆಯುತ್ತವೆ ಎಂಬುದು ತಿಳಿಯದಾಗಿದೆ. ಪೊಲೀಸ್ ಇಲಾಖೆಯಿಂದ ಸಾಕಷ್ಟು ಜಾಗೃತಿ ಕಾರ್ಯ ಮಾಡಲಾಗುತ್ತಿದೆ. ಆದರೆ, ಇತ್ತೀಚೆಗೆ ಅದು ನಿರೀಕ್ಷಿತ ಗುರಿ ತಲುಪುತ್ತಿಲ್ಲ. ಮಕ್ಕಳಿಗೆ ಮತ್ತು ಪಾಲಕರಿಗೆ ಸಂಘ-ಸಂಸ್ಥೆಗಳ ಮೂಲಕ ಜಾಗೃತಿ ಮೂಡಿಸಿದರೆ ನೇಹಾ ಹಿರೇಮಠ ಮತ್ತು ಅಂಜಲಿ ಅಂಬಿಗೇರ ಕೊಲೆಯಂತಹ ಪ್ರಕರಣಗಳು ಮತ್ತೆ ಮರುಕಳಿಸದಂತೆ ತಡೆಯಬಹುದು ಎಂದರು.
ಮಹಿಳೆಯರ ಸುರಕ್ಷತೆಗಾಗಿ ಪೊಲೀಸ್ ಇಲಾಖೆ ಚೆನ್ನಮ್ಮ ಪಡೆ ರಚಿಸಿದ್ದು, ಎಲ್ಲಿಯಾದರೂ ಮಹಿಳೆಯರಿಗೆ ತೊಂದರೆಯಾಗುತ್ತಿದ್ದರೆ 112 ಸಂಖ್ಯೆಗೆ ಕರೆ ಮಾಡಿದ 5 ನಿಮಿಷದೊಳಗೆ ಸ್ಥಳಕ್ಕೆ ಆಗಮಿಸಿ ತೊಂದರೆ ಪರಿಹರಿಸುವ ಕಾರ್ಯ ಕೈಗೊಳ್ಳಲಿದೆ. ಈ ಕುರಿತು ಈಗಾಗಲೇ ಪ್ರತಿಯೊಂದು ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲಾಗಿದೆ. ನಿಮಗೆ ಏನೇ ತೊಂದರೆ ಇರಲಿ ಅದನ್ನು ಪಾಲಕರಿಗೆ, ಶಿಕ್ಷಕರಿಗೆ ಇಲ್ಲವೇ ನಮ್ಮಬಳಿ ಹೇಳಿದರೆ ನೀವಿರುವ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಪರಿಹರಿಸುವ ಕಾರ್ಯ ಮಾಡಲಾಗುವುದು. ಇಂತಹ ಘಟನೆ ನಡೆಯುವ ಪೂರ್ವದಲ್ಲಿ ನಾವೆಲ್ಲರೂ ಎಚ್ಚೆತ್ತುಕೊಳ್ಳುವುದು ಅವಶ್ಯವಾಗಿದೆ ಎಂದರು.ಪ್ರೀತಿ ಮಾಡುವುದು ತಪ್ಪಲ್ಲ. ಆದರೆ, ಪ್ರೀತಿಯ ಹೆಸರಲ್ಲಿ ಅನ್ಯಮಾರ್ಗದಲ್ಲಿ ಹೋಗುವುದು, ಮೋಸ ಮಾಡುವುದು ತಪ್ಪು. ವೈಯಕ್ತಿಕ ಜಗಳ ಮುಂದುವರಿದು ಸಾವಿರಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ಕುರಿತು ವಿದ್ಯಾರ್ಥಿಗಳು ಜಾಗೃತಿ ಹೊಂದಿ ಎಂದು ಸಲಹೆ ನೀಡಿದರು.
ಕಾಲೇಜು ಜೀವನದಲ್ಲಿ ವಿದ್ಯಾಭ್ಯಾಸವಷ್ಟೇ ಮುಖ್ಯವಾಗಿರಬೇಕು. ಪ್ರೀತಿ-ಪ್ರೇಮದ ಹಿಂದೆ ಬಿದ್ದು ಭವಿಷ್ಯ ಹಾಳು ಮಾಡಿಕೊಳ್ಳಬಾರದು. ನಮ್ಮ ಜವಾಬ್ದಾರಿ ಅರಿತು, ಇತರರಿಗೆ ಆದರ್ಶವಾಗಿ ಬದುಕಬೇಕು. ಎಲ್ಲ ಸಮಯದಲ್ಲೂ ಪೊಲೀಸರು, ಪೋಷಕರು ಜತೆಗೆ ನಿಲ್ಲಲು ಸಾಧ್ಯವಿಲ್ಲ. ಆತ್ಮವಿಶ್ವಾಸದಿಂದ ಸಮಸ್ಯೆ ಎದುರಿಸುವುದನ್ನು ಕಲೆತುಕೊಳ್ಳಬೇಕು ಎಂದರು.