ಚನ್ನಪಟ್ಟಣ: ಚನ್ನಪಟ್ಟಣ ಕ್ಷೇತ್ರದ ಜನರು ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸುವ ಶಪಥ ಮಾಡಬೇಕು. ನೀವು ಆ ಕೆಲಸ ಮಾಡಿದರೆ ಮೇಕೆದಾಟು ಯೋಜನೆ ಜಾರಿಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಳಲು ಸಾಧ್ಯವಾಗುತ್ತದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದರು.
ಐಎನ್‌ಡಿಐಎ ಮೈತ್ರಿಕೂಟವನ್ನು ಟೀಕಿಸಿದ ದೇವೇಗೌಡರು, ಅವರ ಮೈತ್ರಿಕೂಟದಲ್ಲಿ ಪ್ರಧಾನಿಯಾಗಬಲ್ಲ ಯಾವುದೇ ನಾಯಕ ಇದ್ದಾರೆಯೇ? ಸ್ಟಾಲಿನ್ ಅಥವಾ ಮಮತಾ ಬ್ಯಾನರ್ಜಿ ಪ್ರಧಾನಿಯಾಗಬಹುದೇ? ಎಂದು ಪ್ರಶ್ನಿಸಿ ಟಾಂಗ್ ನೀಡಿದ ಗೌಡ್ರು, ಮಾಡುವ ಕೆಲಸವನ್ನು ಅಚ್ಚುಕಟ್ಟಿನಿಂದ ಮಾಡಬೇಕು. ಜನರ ನಿರೀಕ್ಷೆ ತಲುಪುವಲ್ಲಿ ಇವು ವಿಫಲವಾಗಿವೆ. ಇವುಗಳನ್ನು ಬಹಳ ಕಾಲ ನಿಭಾಯಿಸಲು ಸರ್ಕಾರದಿಂದ ಆಗುವುದಿಲ್ಲ. ಅಗ್ಗದ ಭರವಸೆಗಳನ್ನು ಕೊಟ್ಟು ಜನರ ಭಾವನೆಗಳ ಜತೆ ಚೆಲ್ಲಾಟ ಆಡುವುದು ಸರಿಯಲ್ಲ. ಆದರೆ, ಸಾಮಾಜಿಕವಾಗಿ, ಆರ್ಥಿಕವಾಗಿ ದುರ್ಬಲರನ್ನು ಬಲಪಡಿಸಬೇಕು ಎಂದು ಹೇಳಿದರು.
ನಾನು ಕಾಡುಗೊಲ್ಲ ಮತ್ತು ಬೆಸ್ತ ಸಮುದಾಯಗಳನ್ನು ಎಸ್ಟಿ ಪ್ರವರ್ಗಕ್ಕೆ ಸೇರಿಸುವ ಖಚಿತ ಪ್ರಯತ್ನ ಮಾಡುತ್ತೇನೆ. ಈಗಾಗಲೇ ಕಾಡುಗೊಲ್ಲ ಸಮುದಾಯವನ್ನು ಈ ಪ್ರವರ್ಗಕ್ಕೆ ಸೇರಿಸಲು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚೆ ನಡೆಸಿದ್ದೇನೆ ಎಂದು ತಿಳಿಸಿದರು.1957ರಲ್ಲಿ ಚನ್ನಪಟ್ಟಣ ರಾಜಕೀಯದಲ್ಲಿ ತಮ್ಮ ಆರಂಭಿಕ ಹೆಜ್ಜೆಗಳನ್ನು ನೆನಪಿಸಿಕೊಂಡ ಅವರು, ಕಾಂಗ್ರೆಸ್ ವಿರುದ್ಧ ಸ್ಪರ್ಧಿಸಲು ನಾನು ಆಗ ವರದೇಗೌಡರನ್ನು ಸಂಪರ್ಕಿಸಿದ್ದೆ ಎಂದು ದೇವೇಗೌಡರು ಹೇಳಿದರು.
ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಸತತ ಐದನೇ ದಿನ ಪ್ರಚಾರ ನಡೆಸಿದ ಮಾಜಿ ಪ್ರಧಾನಿ ದೇವೇಗೌಡರು, ಎಸ್.ಎಂ.ಹಳ್ಳಿ, ಮಳೂರು ಪಟ್ಟಣ, ಚೆಕ್ಕರೆ ಹಾಗೂ ಮತ್ತಿಕೆರೆ ಭಾಗಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ಕಾಂಗ್ರೆಸ್ ಸರ್ಕಾರ ಪೂರ್ಣಾವಧಿ ಪೂರ್ಣಗೊಳಿಸಲ್ಲ - ದೇವೇಗೌಡ ಭವಿಷ್ಯ
ಚನ್ನಪಟ್ಟಣ ಕ್ಷೇತ್ರದ ಎಸ್.ಎಂ.ಹಳ್ಳಿಯಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ನಡೆಸಿದ ಅವರು, ಈ ಸರ್ಕಾರ ಜನರನ್ನು ಸುಲಿಗೆ ಮಾಡುತ್ತಿದೆ. ಎಲ್ಲಾ ರೀತಿಯಲ್ಲಿಯೂ ಜನತೆಯನ್ನು ಶೋಷಣೆ ಮಾಡುತ್ತಿದೆ. ಇಂಥ ಸರ್ಕಾರ ಇರಬಾರದು. ಇದ್ದರೆ ಜನರಿಗೆ ಒಳ್ಳೆಯದು ಆಗುವುದಿಲ್ಲ ಎಂದು ಗುಡುಗಿದರು.
9ಕೆಆರ್ ಎಂಎನ್ 9.ಜೆಪಿಜಿ