ಅಧಿಕಾರಿಗಳು ಜನರಪರ ಕಾರ್ಯ ನಿರ್ವಹಿಸಿದರೆ ನಾಡು ಸುಭಿಕ್ಷೆ-ಸಂಸದ ಬೊಮ್ಮಾಯಿ

KannadaprabhaNewsNetwork |  
Published : Jul 06, 2026, 02:30 AM IST
ಹಾವೇರಿಯ ಸಾಯಿ ಪರಮೇಶ್ವರ ಗ್ರ್ಯಾಂಡ್ ಕನ್ವೆನ್ಷನ್ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಹಾವೇರಿ, ಗದಗ, ಧಾರವಾಡ ಜಿಲ್ಲೆಯ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಸರ್ಕಾರದ ಜತೆಗೆ ಜನರ ಸಂಬಂಧ ಅತ್ಯಂತ ಪ್ರೀತಿ, ವಿಶ್ವಾಸ, ಸೌಹಾರ್ದತೆಯಿಂದ ಇರಬೇಕು. ರಾಜ್ಯ ಆಳುವವರು, ಆಡಳಿತ ನಡೆಸುವರು ಜನರಿಗೆ ಸಿಗುವ ಯೋಜನೆಗಳನ್ನು ಸರಳೀಕರಣಗೊಳಿಸಬೇಕು. ಅಧಿಕಾರಿಗಳು ಜನರ ಪರವಾಗಿ ಕಾರ್ಯ ನಿರ್ವಹಿಸಿದರೆ ನಾಡು ಸುಭಿಕ್ಷವಾಗಿ ಇರುತ್ತದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿ: ಸರ್ಕಾರದ ಜತೆಗೆ ಜನರ ಸಂಬಂಧ ಅತ್ಯಂತ ಪ್ರೀತಿ, ವಿಶ್ವಾಸ, ಸೌಹಾರ್ದತೆಯಿಂದ ಇರಬೇಕು. ರಾಜ್ಯ ಆಳುವವರು, ಆಡಳಿತ ನಡೆಸುವರು ಜನರಿಗೆ ಸಿಗುವ ಯೋಜನೆಗಳನ್ನು ಸರಳೀಕರಣಗೊಳಿಸಬೇಕು. ಅಧಿಕಾರಿಗಳು ಜನರ ಪರವಾಗಿ ಕಾರ್ಯ ನಿರ್ವಹಿಸಿದರೆ ನಾಡು ಸುಭಿಕ್ಷವಾಗಿ ಇರುತ್ತದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ನಗರದ ಹೊರವಲಯದ ಗುತ್ತಲ ರಸ್ತೆ ಬಳಿ ಇರುವ ಸಾಯಿ ಪರಮೇಶ್ವರ ಗ್ರ್ಯಾಂಡ್ ಕನ್ವೆನ್ಷನ್ ಹಾಲ್‌ನಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಹಾವೇರಿ, ಗದಗ, ಧಾರವಾಡ ಜಿಲ್ಲೆಗಳ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ರಾಜ್ಯ ಸರ್ಕಾರಿ ನೌಕರರ ಸಂಘ ಕರ್ನಾಟಕದ ಸಾಂಸ್ಕೃತಿಕ, ಆರ್ಥಿಕ, ಆಡಳಿತಾತ್ಮಕ ಅವಿಭಾಜ್ಯ ಅಂಗವಾಗಿದೆ. ಸರ್ಕಾರದ ಆದೇಶವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ. ರಾಜ್ಯದ ಅಭಿವೃದ್ಧಿ, ಸಮಸ್ಯೆ ಬಗೆಹರಿಸಲು, ವಿಪತ್ತು ನಿರ್ವಹಣೆ ಮಾಡುವುದಕ್ಕೆ ಅಧಿಕಾರಿಗಳ ಶ್ರಮ ಮೆಚ್ಚುಗೆಗೆ ಪಾತ್ರವಾಗಿದೆ. ಆಳುವುದೇ ಬೇರೆ, ಆಡಳಿತ ಮಾಡುವುದೇ ಬೇರೆ ಎಂದರು.ರೈತ ಬೆಳೆಯನ್ನು ಬೆಳೆದರೆ ನಾಡು ಸಮೃದ್ಧವಾಗಿ ಇರುತ್ತದೆ. ಯಾವ ದೇಶದಲ್ಲಿ ಆಹಾರ ಸ್ವಾವಲಂಬನೆ ಇರುತ್ತದೆಯೋ ಆ ದೇಶ ಸ್ವಾವಲಂಬಿ ಆಗಿ ಇರುತ್ತದೆ. ಅಧಿಕಾರಿಗಳು ದುಡಿಯುವ ವರ್ಗದವರ ಬೆನ್ನೆಲುಬಾಗಿ ನಿಂತು ಕೈಜೋಡಿಸಬೇಕು. ಅವರ ಬದುಕನ್ನು ಸುರಕ್ಷತೆ ಮತ್ತು ಸಮೃದ್ಧವಾಗಿ ಇರುವಂತೆ ಮಾಡಬೇಕು. ಅಧಿಕಾರಿಗಳು ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ವಿದ್ಯೆ, ತಾರ್ಕಿಕ ಚಿಂತನೆ ಮಾಡುವ ಶಕ್ತಿ, ಗುಣಮಟ್ಟದ ಶಿಕ್ಷಣ ಕೊಟ್ಟರೆ ದೇಶದ ಅತ್ಯುನ್ನತ ಸ್ಥಾನದಲ್ಲಿ ಇರುತ್ತಾರೆ ಎಂದರು. ಐಪಿಎಸ್ ಅಧಿಕಾರಿ ರವಿ ಡಿ. ಚೆನ್ನಣ್ಣನವರ ಮಾತನಾಡಿ, ನೌಕರರ ವರ್ಗದ ಮೇಲೆ ಬಹಳಷ್ಟು ಜವಾಬ್ದಾರಿ ಇದೆ. ಅಧಿಕಾರಿಗಳು ಮೈಯಲ್ಲಾ ಕಣ್ಣಾಗಿಸಿಕೊಂಡು ಜನರ ಸೇವೆ ಮಾಡಬೇಕು. ಮಕ್ಕಳ ಗುರಿ ಕೇವಲ ವಿದ್ಯೆ, ಉದ್ಯೋಗ ಅರಸುವುದಲ್ಲ. ಸುತ್ತಮುತ್ತಲೂ ನಡೆಯುವ ಅನ್ಯಾಯ, ಅಕ್ರಮದ ಬಗ್ಗೆ ಪ್ರಶ್ನಿಸುವ ಅರಿವು ಬೆಳೆಸಿಕೊಳ್ಳಬೇಕು. ಪೋಷಕರು ಹೇಳುವ ಮಾತುಗಳನ್ನು ಮಕ್ಕಳು ಚಾಚೂತಪ್ಪದೇ ಪಾಲಿಸಬೇಕು. ಮಕ್ಕಳು ತಂದೆ-ತಾಯಿಯನ್ನು ದ್ವೇಷಿಸಬಾರದು. ಅವಮಾನ, ಸನ್ಮಾನ ಯಾವುದೇ ಇರಲಿ, ಗೌರವದಿಂದ ಕೆಲಸ ಮಾಡಬೇಕು ಎಂದರು.ಈ ವೇಳೆ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಮಲ್ಲೇಶಪ್ಪ ಕರಿಗಾರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಎಸ್. ಬಸವರಾಜ, ಮಲ್ಲಿಕಾರ್ಜುನ ಬಳ್ಳಾರಿ, ಡಾ. ಬಸವರಾಜ ಬಳ್ಳಾರಿ, ಎಸ್.ಎಫ್. ಸಿದ್ದನಗೌಡ್ರ, ದಾವಲಸಾಬ ಕಮಗಾಲ, ಜಿ.ಎಸ್. ಪಾಟೀಲ, ಮುನೀಶ್ವರ ಚೂರಿ ಇದ್ದರು. ಅಧಿಕಾರಿಗಳ ಮಕ್ಕಳು ಯಾವತ್ತಿಗೂ ಜಾಣರಾಗಿಯೇ ಇರುತ್ತಾರೆ. ಜಾಣರನ್ನು ಸನ್ಮಾನಿಸುವುದಕ್ಕಿಂತ ಬಡವರ, ರೈತರ, ಕಾರ್ಮಿಕರ ಮಕ್ಕಳಿಗೆ ಹೆಚ್ಚಿನ ಒತ್ತು ನೀಡಿ ಗೌರವಿಸಿದರೆ, ರಾಷ್ಟ್ರದ ಭವಿಷ್ಯ ಸುಧಾರಣೆ ಆಗುತ್ತದೆ. ಮಕ್ಕಳಿಗೆ ಓದು ಓದು ಎಂದು ಒತ್ತಡ ಹಾಕದೆ, ಇಷ್ಟ ಪಟ್ಟು ಪ್ರೀತಿಯಿಂದ ಓದುವ ಹಾಗೆ ಪ್ರೇರೇಪಿಸಬೇಕು. ಮಕ್ಕಳಲ್ಲಿ ಪುಸ್ತಕದ ಜ್ಞಾನಕ್ಕಿಂತ, ಸಾಮಾನ್ಯ ಜ್ಞಾನವನ್ನು ಬೆಳೆಸಬೇಕು. ಜನರ ಸೇವೆ ಮಾಡುವ ಅವಕಾಶ ನಿಮಗೆ ಸಿಕ್ಕಿದ್ದು, ಪ್ರಾಮಾಣಿಕ ಹಾಗೂ ನಿಷ್ಠೆಯಿಂದ ಕೆಲಸ ಮಾಡಬೇಕು ಎಂದು ವಿಧಾನಸಭೆ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಾಕಷ್ಟು ಕನಸುಗಳನ್ನು ಹೊಂದಿದ್ದೀರಿ. ತಂದೆ ತಾಯಿ ಮಕ್ಕಳ ಜೀವನದ ಕನಸು ಕಟ್ಟಿಕೊಂಡಿದ್ದಾರೆ. ಸಾಮಾನ್ಯ ಶಿಕ್ಷಕರ, ಸಾಮಾನ್ಯ ಅಧಿಕಾರಿಗಳ ಮಕ್ಕಳು ಇದ್ದೀರಿ. ನಿರಂತರ, ಪರಿಶ್ರಮ, ತ್ಯಾಗದ ಪರಿಣಾಮ ನೀವು ಉತ್ತಮ ಅಂಕಗಳನ್ನು ಪಡೆದು, ಈ ಹಂತಕ್ಕೆ ಬಂದು ತಲುಪಿರುವುದು ಹೆಮ್ಮೆಯ ವಿಷಯ. ತಂದೆ-ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಸಮಾಜದಲ್ಲಿ ಕೆಟ್ಟ ಚಿಂತನೆಗಳಿಂದ ದೂರವಿದ್ದು, ಸ್ವಾಭಿಮಾನದಿಂದ ಸಮಾಜದಲ್ಲಿ ಯಶಸ್ಸು ಕಾಣಬೇಕು ಎಂದು ಸರ್ಕಾರಿ ನೌಕರ ಸಂಘ ರಾಜ್ಯಾಧ್ಯಕ್ಷಸಿ.ಎಸ್. ಷಡಾಕ್ಷರಿ ಹೇಳಿದರು.

ಜನರ ನಿರೀಕ್ಷೆಗಳು ಬಹಳಷ್ಟು ಇರುತ್ತದೆ. ಅಧಿಕಾರಿಗಳು ಸ್ಪಂದನೆ ಮಾಡಬೇಕು. ಪ್ರತಿನಿತ್ಯ ಆಗುವ ಬದಲಾವಣೆಗೆ ಹೊಂದಿಕೊಳ್ಳಬೇಕು. ದ್ವೇಷ ಮಾಡುವುದಕ್ಕಿಂತ ಹೊಂದಿಕೊಂಡು ಮುನ್ನಡೆಯಬೇಕು. ಪ್ರಜಾ ಸೇವೆ ಎನ್ನುವ ಕಚೇರಿ ಬರುತ್ತಿದ್ದು, ಜನರನ್ನು ಕಚೇರಿಗೆ ಅಲೆದಾಡಿಸದಂತೆ ಸೇವೆ ನೀಡಬೇಕು. ಹೆಚ್ಚಿನ ಕೆಲಸ ಮಾಡುವ ಪಣವನ್ನು ತೊಡಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.ಪ್ರತಿಭಾ ಪುರಸ್ಕಾರ ವಿತರಣೆ: ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ.೯೦ಕ್ಕಿಂತ ಹೆಚ್ಚು ಅಂಕ ಪಡೆದ ಹಾವೇರಿ, ಗದಗ ಹಾಗೂ ಧಾರವಾಡ ಜಿಲ್ಲೆಗಳ ರಾಜ್ಯ ಸರಕಾರಿ ನೌಕರರ ಸುಮಾರು ೭೦೦ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಜತೆಗೆ ಜಿಲ್ಲೆಯಲ್ಲಿ ಉತ್ತಮ ಸೇವೆ ಸಲ್ಲಿಸಿ ಸರ್ವೋತ್ತಮ ಪ್ರಶಸ್ತಿಗೆ ಆಯ್ಕೆಯಾದ ಹಾವೇರಿ ಜಿಲ್ಲೆಯ ೧೦ ಜನ ಅಧಿಕಾರಿ, ಸಿಬ್ಬಂದಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಪರಾಧ ಮುಕ್ತ ನಾಳೆಗೆ ಮುನ್ನುಡಿ ಬರೆದ ಕೈದಿಗಳ ಸೃಜನಶೀಲತೆ
ಕೈಗಾರಿಕಾ ಸಂಘಗಳು ನೋಂದಣಿ ಮಾಡಿಕೊಳ್ಳಲಿ: ಸಾಜಿದ್ ಮುಲ್ಲಾ