ಸಾವಯವ ಕೃಷಿಗೆ ಒತ್ತು ನೀಡದಿದ್ದರೆ ಭೂಮಿ ತನ್ನ ಸತ್ವ ಕಳೆದುಕೊಂಡ ಬರಡಾಗಲಿದೆ: ಅಶೋಕ್ ಎಚ್ಚರಿಕೆ

KannadaprabhaNewsNetwork | Published : Nov 11, 2024 11:46 PM

ಸಾರಾಂಶ

ಮುಂದಿನ ದಿನಗಳಲ್ಲಿ ಸಾವಯವ ಕೃಷಿಗೆ ಒತ್ತು ನೀಡದಿದ್ದರೆ ಕಾಲಕ್ರಮೇಣ ಇಳುವರಿ ಕುಂಠಿತಗೊಳ್ಳುತ್ತದೆ. ಇದರಿಂದ ಆಹಾರದ ಕೊರತೆ ಉಂಟಾಗಿ ತೀವ್ರ ಸಮಸ್ಯೆಗೆ ಸಿಲುಕುವ ಸಾಧ್ಯತೆ ಇದೆ. ಆದ್ದರಿಂದ ಈಗಿನಿಂದಲೇ ಸಾವಯವ ಕೃಷಿಗೆ ಹೊತ್ತು ನೀಡಿ ಭೂಮಿ ಫಲವತ್ತತೆ ಉಳಿಸಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಸಾವಯವ ಕೃಷಿಗೆ ಒತ್ತು ನೀಡದಿದ್ದರೇ ಅತಿಯಾದ ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿ ತನ್ನ ಸತ್ವ ಕಳೆದುಕೊಂಡು ಬರಡಾಗಲಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಎಚ್ಚರಿಕೆ ನೀಡಿದರು.

ತಾಲೂಕಿನ ದಾಸನದೊಡ್ಡಿಯ ಗ್ರಾಮದ ಕುರಿ ಪಾಪಣ್ಣರ ತೋಟದಲ್ಲಿ ಸಂಪೂರ್ಣ ಸಾವಯವ ಕೃಷಿಕರ ಸಂಘದಿಂದ ನಡೆದ ಮಾಸಿಕ ಸಭೆ ಉದ್ಘಾಟಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಸಾವಯವ ಕೃಷಿಗೆ ಒತ್ತು ನೀಡದಿದ್ದರೆ ಕಾಲಕ್ರಮೇಣ ಇಳುವರಿ ಕುಂಠಿತಗೊಳ್ಳುತ್ತದೆ. ಇದರಿಂದ ಆಹಾರದ ಕೊರತೆ ಉಂಟಾಗಿ ತೀವ್ರ ಸಮಸ್ಯೆಗೆ ಸಿಲುಕುವ ಸಾಧ್ಯತೆ ಇದೆ. ಆದ್ದರಿಂದ ಈಗಿನಿಂದಲೇ ಸಾವಯವ ಕೃಷಿಗೆ ಹೊತ್ತು ನೀಡಿ ಭೂಮಿ ಫಲವತ್ತತೆ ಉಳಿಸಬೇಕೆಂದು ಸಲಹೆ ನೀಡಿದರು.ಸಾವಯವ ಕೃಷಿತ ಬಿ.ಎಂ. ನಂಜೇಗೌಡ ಮಾತನಾಡಿ, ಹಣ ಸಂಪಾದನೆ ಮಾಡಲು ಹೊರಟಿರುವ ನಾವು ಆರೋಗ್ಯ ಕಡಿಮೆ ಮಾಡಿಕೊಳ್ಳುತ್ತಿದ್ದೇವೆ. ಇದರಿಂದ ಪ್ರತಿಯೊಬ್ಬರು ಒಂದಲ್ಲಾ ಒಂದು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಸಾವಯವ ಪದಾರ್ಥಗಳನ್ನು ಸೇವನೆ ಮಾಡುವ ಮೂಲಕ ರೋಗ ಬರದಂತೆ ತಡೆಗಟ್ಟುವ ಮಾರ್ಗವನ್ನು ಪ್ರತಿಯೊಬ್ಬರು ಅನುಸರಿಸಿಕೊಳ್ಳಬೇಕಿದೆ. ಪ್ರಸ್ತುತ ಸಾವಯವದಲ್ಲಿ ಬೆಳೆದ ಆಹಾರ ಪದಾರ್ಥಗಳಿಗೆ ಇತ್ತಿಚಿಗೆ ಬೇಡಿಕೆ ಹೆಚ್ಚಾಗುತ್ತಿದೆ ಎಂದರು.

ಭೂಮಿ ಹಾಗೂ ಆರೋಗ್ಯವನ್ನು ಕಾಪಾಡುವ ಉದ್ದೇಶದಿಂದ ಪ್ರಗತಿಪರ ರೈತರೆಲ್ಲರು ಒಂದುಗೂಡಿ ಸಂಪೂರ್ಣ ಸಾವಯವ ಕೃಷಿಕರ ಸಂಘದ ಮೂಲಕ ಗ್ರಾಮೀಣ ರೈತರಲ್ಲಿ ಜಾಗೃತಿ ಮೂಡಿಸಿ ಸಾವಯವ ಬೆಳೆ ಬೆಳೆಯುವಂತೆ ಉತ್ತೇಜನ ನೀಡಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಸಂಪೂರ್ಣ ಸಾವಯವ ಕೃಷಿಕರ ಸಂಘದ ತಾಲೂಕು ಅಧ್ಯಕ್ಷ ಮಹೇಶ್ ಕುಮಾರ್ ಮಾತನಾಡಿ, ಬಹುತೇಕ ರೈತರು ಸಾವಯವ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ. ಸರ್ಕಾರವು ಕೂಡ ಹಲವು ಸೌಲಭ್ಯ ನೀಡುತ್ತಿದೆ. ರೈತರು ಸಮರ್ಪಕ ಸದ್ಬಳಕೆ ಮಾಡಿಕೊಳ್ಳಬೇಕು. ಸರ್ಕಾರ ಸಾವಯವ ಕೃಷಿಕರನ್ನು ಗುರುತಿಸಿ ಪ್ರಶಸ್ತಿ ಹಾಗೂ ರೈತರನ್ನು ಉತ್ತೇಜಿಸುವ ಕೆಲಸವನ್ನು ಸರ್ಕಾರ ಮಾಡಬೇಕೆಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ದೀಪಕ್, ಕೆಆರ್‌ಎಸ್ ಅಣೆಕಟ್ಟೆ ನಿವೃತ್ತ ಅಭಿಯಂತರ ಬಸವರಾಜೇಗೌಡ, ಜೈನ್ ಡ್ರಿಪ್ ವ್ಯವಸ್ಥಾಪಕ ವೃಷಭೇಂದರ್, ಸಾವಯವ ಕೃಷಿಕ ಪ್ರವೀಣ್ ಬಾದಾಮಿ, ಚಿಕ್ಕಣ್ಣ ವಡ್ಡರಹಳ್ಳಿ, ಶಿವಕುಮಾರ್, ಜೆಸಿಬಿ ಶಿವು, ಹಂಚಿಪುರ ನಾಗರಾಜು, ಶಾಂತಕೃಷ್ಣ, ತನುಜಾ, ಸುವರ್ಣ, ಸಿಂಧು, ಡಾ.ಕಬಿನಿಗೌಡ ವೀರಭದ್ರ ಸೇರಿದಂತೆ ಇತರರು ಇದ್ದರು.

Share this article