ಕನ್ನಡಪ್ರಭ ವಾರ್ತೆ ನಾಗಮಂಗಲಸಂಘಟನೆಗಳು ಬಲಿಷ್ಠವಾದಾಗ ಸಮಾಜದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಸಮಾಜದ ಅಭಿವೃದ್ಧಿಗೆ ಸಂಘಟನೆ ಮುಖ್ಯ. ಎಲ್ಲರೂ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು. ಸಂಘಟನೆಗಳು ಬಲಿಷ್ಠವಾದಷ್ಟು ಅಭಿವೃದ್ಧಿಗೆ ಪೂರಕವಾಗುತ್ತದೆ. ಆದ್ದರಿಂದ ಎಲ್ಲರೂ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಸಂಘಟನೆಗೆ ಒತ್ತು ನೀಡಬೇಕು ಎಂದರು.
ಒಕ್ಕಲಿಗ ಸಮಾಜವನ್ನು ಉತ್ತಮವಾಗಿ ಕಟ್ಟಿ ಬೆಳೆಸುವ ಜತೆಗೆ ಶಾಲಾ-ಕಾಲೇಜುಗಳು, ಸಮುದಾಯ ಭವನಗಳನ್ನು ನಿರ್ಮಾಣ ಮಾಡಿ ಸಮಾಜದಲ್ಲಿ ಸೇವೆಯನ್ನು ಕೈಗೊಳ್ಳಬೇಕು. ಆ ಮೂಲಕ ಸಮಾಜದಲ್ಲಿ ಹಿಂದುಳಿದಿರುವವರನ್ನು ಮೇಲೆತ್ತುವ ಕೆಲಸವಾಗಬೇಕು ಎಂದರು.ಶ್ರೀಮಠವನ್ನು ಭೈರವೈಕ್ಯ ಶ್ರೀಡಾ.ಬಾಲಗಂಗಾಧನಾಥ ಸ್ವಾಮೀಜಿ ಇಷ್ಟು ಎತ್ತರಕ್ಕೆ ಬೆಳೆಸಿದ ಪರಿಣಾಮ ಇಂದು ಲಕ್ಷಾಂತರ ಮಂದಿಗೆ ವಿದ್ಯಾಭ್ಯಾಸ, ಉದ್ಯೋಗ ಸೇರಿದಂತೆ ಸಮಾಜದ ಹಲವು ಸೇವೆಗಳನ್ನು ಶ್ರೀ ಮಠ ಮಾಡುತ್ತಿದೆ ಎಂದರು.
ವೇದಿಕೆಯಲ್ಲಿ ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಚೈತನ್ಯನಾಥ ಸ್ವಾಮೀಜಿ, ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣಯ್ಯ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜೀವ್ ಗೌಡ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತಯ್ಯ, ಮುಖಂಡರಾದ ಪುಟ್ಟರಂಗಪ್ಪ, ಮುಕುಂದರಾಜ್, ಚಂದ್ರಶೇಖರಯ್ಯ, ಭಾರತೀಶಂಕರ್, ರವಿಶಂಕರ್, ಗಂಗಾಧರ್ ಸೇರಿದಂತೆ ಹಲವರು ಹಾಜರಿದ್ದರು.