ನಮ್ಮ ತಂಡ ಗೆದ್ದರೆ ಹೊನ್ನೇಗೌಡರ ತಂಡದ ಅಕ್ರಮ ಬಯಲಿಗೆ

KannadaprabhaNewsNetwork | Published : Mar 22, 2025 2:05 AM

ಸಾರಾಂಶ

ಸಾರಿಗೆ ನಿಗಮದ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಅವ್ಯವಹಾರದ ಕುರಿತು ಚರ್ಚೆಗಳು ಜೋರಾಗಿವೆ. ಇದೀಗ ನಡೆಯಲಿರುವ ಚುನಾವಣೆಯಲ್ಲಿ ನಮ್ಮ ತಂಡದ ೧೫ ಜನ ಗೆದ್ದ ಕೂಡಲೇ ಹೊನ್ನೇಗೌಡರ ತಂಡ ಮಾಡಿದೆ ಎನ್ನಲಾಗುತ್ತಿರುವ ಅವ್ಯವಹಾರ ಮತ್ತು ಭ್ರಷ್ಟಾಚಾರದ ಬಗ್ಗೆ ಸರ್ವ ಸದಸ್ಯರ ಸಭೆಯಲ್ಲಿ ಮಂಡಿಸಿ ಅನುಮೋದನೆ ತೆಗೆದುಕೊಂಡು ತನಿಖೆಗೆ ಒಳಪಡಿಸಲಾಗುವುದು. ಕಾರ್ಮಿಕರಿಗೆ ಆದ ಅನ್ಯಾಯವನ್ನು ಸರಿಪಡಿಸಲಾಗುವುದು ಎಂದು ಕೆ.ಎಸ್.ಆರ್‌.ಟಿ.ಸಿ. ಸ್ಟಾಫ್‌ ಅಂಡ್ ಫೆಡರೇಷನ್ ಬೆಂಗಳೂರು ಕಾರ್ಯಾಧ್ಯಕ್ಷ ಹಾಗೂ ಹಾಸನ ವಿಭಾಗದ ಪ್ರಧಾನ ಕಾರ್ಯದರ್ಶಿ ಜಿ.ಟಿ. ರಂಗೇಗೌಡ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಸಾರಿಗೆ ನಿಗಮದ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಅವ್ಯವಹಾರದ ಕುರಿತು ಚರ್ಚೆಗಳು ಜೋರಾಗಿವೆ. ಇದೀಗ ನಡೆಯಲಿರುವ ಚುನಾವಣೆಯಲ್ಲಿ ನಮ್ಮ ತಂಡದ ೧೫ ಜನ ಗೆದ್ದ ಕೂಡಲೇ ಹೊನ್ನೇಗೌಡರ ತಂಡ ಮಾಡಿದೆ ಎನ್ನಲಾಗುತ್ತಿರುವ ಅವ್ಯವಹಾರ ಮತ್ತು ಭ್ರಷ್ಟಾಚಾರದ ಬಗ್ಗೆ ಸರ್ವ ಸದಸ್ಯರ ಸಭೆಯಲ್ಲಿ ಮಂಡಿಸಿ ಅನುಮೋದನೆ ತೆಗೆದುಕೊಂಡು ತನಿಖೆಗೆ ಒಳಪಡಿಸಲಾಗುವುದು. ಕಾರ್ಮಿಕರಿಗೆ ಆದ ಅನ್ಯಾಯವನ್ನು ಸರಿಪಡಿಸಲಾಗುವುದು ಎಂದು ಕೆ.ಎಸ್.ಆರ್‌.ಟಿ.ಸಿ. ಸ್ಟಾಫ್‌ ಅಂಡ್ ಫೆಡರೇಷನ್ ಬೆಂಗಳೂರು ಕಾರ್ಯಾಧ್ಯಕ್ಷ ಹಾಗೂ ಹಾಸನ ವಿಭಾಗದ ಪ್ರಧಾನ ಕಾರ್ಯದರ್ಶಿ ಜಿ.ಟಿ. ರಂಗೇಗೌಡ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿ, ಹಾಸನ ಈ ಸಂಘದ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಆಡಳಿತ ಮಂಡಳಿಯವರು ಸಂಘದ ಕೋಟ್ಯಂತರ ರುಪಾಯಿಗಳನ್ನು ದುರುಪಯೋಗಪಡಿಸಿಕೊಂಡಿರುತ್ತಾರೆ. ೨೦೧೧ರಿಂದ ನಮ್ಮ ಸಂಘದ ಕಾರ್ಯಕರ್ತರೊಂದಿಗೆ ಆಡಳಿತ ನಡೆದುಕೊಂಡು ಬಂದಿದೆ. ಹೊನ್ನೇಗೌಡ ಎನ್ನುವ ವ್ಯಕ್ತಿಯನ್ನು ಬಹಳ ನಂಬಿಕೆ ಇಟ್ಟು ಅಧ್ಯಕ್ಷರನ್ನಾಗಿ ಮಾಡಿ ಎಲ್ಲಾ ನಿರ್ದೇಶಕರು ಸಹಕಾರ ಕೊಡುವಂತೆ ಅವರಿಗೆ ವಿಶ್ವಾಸ ತುಂಬಿದ್ದೇವು. ಇದೇ ಹೊನ್ನೇಗೌಡ ನಿವೇಶನ ಹಂಚುವಾಗಲೂ ಯಾವ ಅವ್ಯವಹಾರ ಗೊತ್ತಾಗಲಿಲ್ಲ. ಈ ಬಗ್ಗೆ ದೂರುಗಳು ಬಂದಾಗ ನಾವೇ ವೈಯಕ್ತಿಕವಾಗಿ ಕುಳಿತುಕೊಂಡು ತನಿಖೆ ಮಾಡಿದ್ದೆವು. ಬಿ.ಟಿ. ಕಾಟೀಹಳ್ಳಿ ಬಡಾವಣೆಯಲ್ಲಿ ೪೪೪ ನಿವೇಶನಗಳು ತಾತ್ಕಾಲಿಕ ನಕಾಶೆ ಆಯಿತು. ಇದರಲ್ಲಿ ಬೇಕಾದವರಿಗೆ ನಿವೇಶನ ಕೊಡಲಾಗಿದೆ ಎಂದು ಹೇಳಿದರು. ನಮ್ಮ ಟೀಮ್ ನೋಡಿ ಮತ ಹಾಕಿದ್ದು, ಸಂಘದ ಜವಾಬ್ದಾರಿ ನಮಗೆ ಇದ್ದುದರಿಂದ ಸೊಸೈಟಿ ನಿರ್ದೇಶಕರು ಕುಳಿತುಕೊಂಡು ರೆಕಾರ್ಡ್ ಪರಿಶೀಲನೆ ನಡೆಸಿದಾಗ ಹಲವಾರು ನಿವೇಶನಗಳು ಬೆಳಕಿಗೆ ಬಂದಿತು ಎಂದರು.

ಒಟ್ಟು ೭೩೫ ಜನ ಸದಸ್ಯರಿದ್ದು, ಅದರಲ್ಲಿ ೩೩೨ ಜನರಲ್ಲಿ ೧೮೬ ಜನರು ಮತ ಹಾಕಲು ಕೋರ್ಟ್‌ನಿಂದ ಆದೇಶ ತರಲಾಗಿದೆ. ಸ್ವಂತ ಕುಟುಂಬದ ಹೆಂಡತಿ, ಅವರ ಅಣ್ಣ ಹಾಗೂ ಅವರ ಕುಟುಂಬ ಸೇರಿ ಒಟ್ಟು ೧೫ ನಿವೇಶನ ಬರೆದುಕೊಂಡಿದ್ದಾರೆ. ೧೯ ನಿವೇಶನಗಳನ್ನು ಬೇನಾಮಿಯಾಗಿ ಕ್ರಯಮಾಡಿಕೊಂಡಿರುತ್ತಾರೆಂದು ದೂರಿದರು. ನೌಕರರ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿದ್ದು, ಹಾಸನ ಗೃಹ ನಿರ್ಮಾಣ ಸಂಘವು ೮೦ರ ದಶಕದಲ್ಲಿ ಸ್ಥಾಪಿತವಾಗಿದ್ದು, ಅದಕ್ಕೆ ಸಂಸ್ಥೆಯ ಹಾಸನ ವಿಭಾಗೀಯ ನಿಯಂತ್ರಣಾಧಿಕಾರಿಗಳು ಗೌರವಾಧ್ಯಕ್ಷರಾಗಿರುತ್ತಾರೆ. ಪ್ರಾರಂಭದಿಂದಲೂ ಗೌರವ ಅಧ್ಯಕ್ಷರು ಮತ್ತು ಅಧ್ಯಕ್ಷರಾದ ಹೊನ್ನೇಗೌಡರು ಸೇರಿಕೊಂಡು ವ್ಯವಸ್ಥಿತವಾಗಿ ನೌಕರರನ್ನು ಮತ್ತು ಅಧಿಕಾರಿಗಳನ್ನು ವಂಚಿಸಿ ಕೋಟ್ಯಂತರ ಹಣವನ್ನು ದೋಚಿರುತ್ತಾರೆ ಎಂದು ದೂರಿದರು.

ನಿವೇಶನ ಹಂಚಿಕೆಯಲ್ಲಿ ಹಂಚಿಕೆಗಾಗಿ ಸುಮಾರು ವರ್ಷದಿಂದ ಕೋಟ್ಯಂತರ ರುಪಾಯಿ ಹಣ ಸಂಗ್ರಹಣೆ ಮಾಡಿದ್ದು, ನಿವೇಶನ ಹಂಚಿಕೆಯಲ್ಲಿ ಜೇಷ್ಠತೆಯನ್ನು ಕಡೆಗಣಿಸಿ ಹಣ ನೀಡುವವರಿಗೆ ವಾಮಮಾರ್ಗದಲ್ಲಿ ಖಾಲಿ ನಿವೇಶನ ಹಂಚಿಕೆ ಮಾಡಿ ಇನ್ನೂ ಸಾಕಷ್ಟು ಖಾಲಿ ನಿವೇಶನಗಳನ್ನು ಹಂಚಿಕೆ ಮಾಡದೇ ನೌಕರರಿಗೆ ದ್ರೋಹ ಮಾಡಿರುತ್ತಾರೆ. ಹೊನ್ನೇಗೌಡ ಇವರು ನೌಕರರ ಗೃಹ ಸಂಘದ ಅಧ್ಯಕ್ಷನಾಗಿದ್ದು, ತನ್ನ ಎಲ್ಲಾ ಹಗರಣಗಳನ್ನು ವಂಚನೆಯನ್ನು ಮುಚ್ಚಿಹಾಕಲು ಸಹಕರಿಸಿದ ಅಧಿಕಾರಿಗಳಿಗೆ ಕಿಕ್ ಬ್ಯಾಕ್‌ಗಾಗಿ ಖಾಲಿ ನಿವೇಶನ ನೀಡುತ್ತಾ ಬಂದಿದ್ದಾರೆ ಎಂದು ಆರೋಪಿಸಿದರು. ಅಕ್ರಮವಾಗಿ ಗುತ್ತಿಗೆ ಕಾಮಗಾರಿಯನ್ನು ೧೧ ಕೋಟಿ ಇದ್ದುದನ್ನು ೨೦ ಕೋಟಿಗೆ ಡ್ರಾ ಮಾಡಿದ್ದಾರೆ. ಮಹಾ ದರೋಡೆಕೋರ ಎಂದು ಖಂಡಿಸಿದರು.

ಯಾರ್ಯಾರು ಪ್ರಶ್ನೆ ಮಾಡಿದ್ದಾರೆ ಅವರನ್ನು ಚುನಾವಣೆಗೆ ಬಾರದ ಹಾಗೆ ಸದಸ್ಯತ್ವದಿಂದ ಕಿತ್ತು ಹಾಕಲಾಗಿದೆ. ಈಗಾಗಲೇ ೩೩೨ ಜನರನ್ನು ಸದಸ್ಯತ್ವದಿಂದ ತೆಗದು ಹೊರ ಹಾಕಿರುವುದಾಗಿ ದೂರಿದರು. ೩೨ ಸೈಟುಗಳನ್ನು ಯಾರ್ಯಾರಿಗೆ ಬರೆದುಕೊಂಡಿದ್ದಾರೆ ಯಾರಿಗೂ ಗೊತ್ತಿಲ್ಲ. ಸುಲ್ತಾನ್ ದರ್ಬಾರ್‌ ಮಾಡಿ ಸೊಸೈಟಿಯನ್ನು ದಂಧೆ ಮಾಡಲಾಗಿದೆ. ಇದರ ವಿರುದ್ಧ ನಾವು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅವರಿಗೆ ಮನವಿ ಕೊಟ್ಟಿದ್ದೇವೆ. ಬೆಂಗಳೂರಿಗೆ ಹೋಗಿ ಲೋಕಾಯುಕ್ತರಿಗೆ ದಾಖಲಾತಿ ಕೊಟ್ಟು ದೂರು ನೀಡಿದರೂ ನಮಗೆ ನ್ಯಾಯ ಸಿಕ್ಕಿರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬೈಲ ಉಲ್ಲಂಘನೆ ಮಾಡಲಾಗಿರುವ ಬಗ್ಗೆ ಕ್ರಮ ಜರುಗಿಸುವಂತೆ ಹೋದರೇ ಅವರಿಗೆ ಹಣದ ಹೊಳೆ ಹರಿಸಿದ್ದಾರೆ. ನಾಡಿದ್ದು, ಭಾನುವಾರ ರಸ್ತೆ ಸಾರಿಗೆ ನಿಗಮದ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಚುನಾವಣೆ ಇದ್ದು, ಆ ಟೀಮ್‌ಗೆ ಅಭ್ಯರ್ಥಿಗಳು ಡಿಪೋದಿಂದ ಸಿಗುತ್ತಿಲ್ಲ. ಈಗಾಗಲೇ ಅವರೆ ಹಣ ಕೊಟ್ಟು ಸ್ಪರ್ಧೆಗೆ ಅರ್ಜಿ ಹಾಕಿಸಲಾಗಿದೆ. ಈ ಚುನಾವಣೆ ಗೆಲ್ಲಲು ಎಣ್ಣೆ, ದುಡ್ಡು ಕೊಡಲಾಗುತ್ತಿದೆ. ನಾವು ನ್ಯಾಯಪರ ಮತ ಕೇಳುತ್ತಿದ್ದೇವೆ. ನಮ್ಮ ಪರ ಒಲವು ಇದ್ದು, ಗೆಲುವು ಆಗುತ್ತದೆ. ನಮ್ಮ ತಂಡ ೧೫ ಜನ ಗೆದ್ದ ಕೂಡಲೇ ಹೊನ್ನೇಗೌಡರ ಅವ್ಯವಹಾರ ಮತ್ತು ಭ್ರಷ್ಟಾಚಾರದ ಬಗ್ಗೆ ಜನರಲ್ ಬಾಡಿಗೆ ಇಟ್ಟು ಅಪ್ರೋಲ್ ತೆಗೆದುಕೊಂಡು ತನಿಖೆಗೆ ಒಳಪಡಿಸಲಾಗುವುದು. ನಮ್ಮ ಸಂಘಟನೆಗೆ ಬಂದರೇ ಸದಸ್ಯತ್ವ ಕೊಡಿಸಲಾಗುವುದು. ನಮ್ಮ ತಂಡದಲ್ಲಿ ಅಧ್ಯಕ್ಷನ ಹಿಡಿತ ಇರುವುದಿಲ್ಲ. ಇಲ್ಲೊಂದು ಸಲಹಾ ಸಮಿತಿ ಮಾಡಿ ಬಿಗಿಯಾಗಿ ಎಲ್ಲಾ ಡಿಪೋ ಇದೆ ಅಲ್ಲಿ ಲೇಔಟ್ ಮಾಡಿ ನ್ಯಾಯ ಒದಗಿಸಿ ಕಡಿಮೆ ದರದಲ್ಲಿ ನಿವೇಶನ ಕೊಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ನ್ಯಾಯ ಎಲ್ಲಿದೆ ಎಲ್ಲಾ ಬಗ್ಗೆ ಪರಿಶೀಲಿಸಿ ಮತವನ್ನು ಕೊಡುವಂತೆ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಹಾಸನ ಕೆ.ಎಸ್.ಆರ್‌.ಟಿ.ಸಿ. ಸ್ಟಾಫ್‌ ಅಂಡ್ ನೌಕರರ ಸಂಘದ ಅಧ್ಯಕ್ಷ ಶಿವನಂಜೇಗೌಡ, ವಿಭಾಗದ ಜಂಟಿ ಕಾರ್ಯದರ್ಶಿ ದೇವರಾಜು, ನಿವೃತ್ತ ಸಂಚಾರ ನಿರೀಕ್ಷಕರು ದೊಡ್ಡೇಗೌಡ ಇತರರು ಉಪಸ್ಥಿತರಿದ್ದರು.

Share this article